ಬೆಂಗಳೂರು: ಕ್ರಿಮಿನಲ್ ಹಿನ್ನೆಲೆ ಹೊಂದಿದ ವ್ಯಕ್ತಿಗಳೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡ ಆರೋಪದ ಮೇಲೆ ಯಲಹಂಕ ಉಪನಗರ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ತಲೆದಂಡವಾಗಿದೆ. ಪಿಎಸ್ಐ ಆರ್. ನಾಗರಾಜ್ ಅಮಾನತುಗೊಂಡವರು.
ಎರಡು ದಿನಗಳ ಹಿಂದೆ ಕ್ರಿಮಿನಲ್ ಗಳೊಂದಿಗೆ ಪಿಎಸ್ಐ ನಾಗರಾಜ್ ಬರ್ತಡೇ ಪಾರ್ಟಿ ಮಾಡಿದ್ದರು. ಈ ಪಾರ್ಟಿಯ ವಿಡಿಯೋ, ಫೋಟೋ ಬಹಿರಂಗವಾಗಿ ಇಲಾಖೆಗೆ ಮುಜುಗರ ಉಂಟಾಗಿತ್ತು. ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರು ಪಿಎಸ್ಐ ನಾಗರಾಜ್ ಅವರನ್ನು ಅಮಾನತುಗೊಳಿಸಿ ಆದೇಶಿಸಿದ್ದು, ಇಲಾಖಾ ವಿಚಾರಣೆಗೆ ಸೂಚಿಸಿದ್ದಾರೆ.
ರಿಯಲ್ ಎಸ್ಟೇಟ್ ಹಾಗೂ ಅಕ್ರಮ ಚಟುವಟಿಕೆ, ಕರ್ತವ್ಯ ಲೋಪ ಎಸಗಿದ ಆರೋಪದಡಿ ಪಿಎಸ್ಐ ಆರ್. ನಾಗರಾಜ್ ಅವರನ್ನು ಅಮಾನತು ಮಾಡಲಾಗಿದೆ. ಚಿಕ್ಕಜಾಲ ಪೊಲೀಸ್ ಠಾಣೆ ವ್ಯಾಪ್ತಿಯ ರೌಡಿಶೀಟರ್ ಜತೆಗೆ ಹುಟ್ಟುಹಬ್ಬ ಆಚರಿಸಿಕೊಂಡು ಸೆಲ್ಫಿ ತೆಗೆದುಕೊಂಡಿದ್ದರು. ಆತನನ್ನು ಠಾಣೆಗೆ ಕರೆಸಿಕೊಳ್ಳುವುದು ಸೇರಿ ಅಕ್ರಮ ದಂಧೆಕೋರರೊಂದಿಗೆ ಶಾಮೀಲಾದ ಆರೋಪ ಕೇಳಿ ಬಂದಿದ್ದವು. ಆರೋಪಿಗಳಿಂದ ಬೆಲೆ ಬಾಳುವ ಉಡುಗೊರೆ ಪಡೆಯುತ್ತಿರುವುದು ಕೂಡ ಕಂಡುಬಂದ ಹಿನ್ನೆಲೆಯಲ್ಲಿ ಅಮಾನತು ಮಾಡಲಾಗಿದೆ ಎಂದು ಹೇಳಲಾಗಿದೆ.

