ಬೆಳಗಿನ ಅವಸರದ ಸಮಯದಲ್ಲಿ ಪೌಷ್ಟಿಕಾಂಶಯುಕ್ತ ಹಾಗೂ ರುಚಿಕರವಾದ ತಿಂಡಿ ಬೇಕೆಂದು ಬಯಸುವವರಿಗೆ ‘ಎಗ್‌ಲೆಸ್ ಫ್ರೆಂಚ್ ಟೋಸ್ಟ್’ ಅತ್ಯುತ್ತಮ ಆಯ್ಕೆ. ಸಾಮಾನ್ಯವಾಗಿ ಫ್ರೆಂಚ್ ಟೋಸ್ಟ್ ಎಂದರೆ ಮೊಟ್ಟೆ ಬೇಕೇ ಬೇಕು ಎಂಬ ಭಾವನೆ ಇರುತ್ತದೆ. ಆದರೆ ಮೊಟ್ಟೆ ಬಳಸದೆಯೇ ಹೆಚ್ಚಿನ ಪ್ರೋಟೀನ್ ಅಂಶವಿರುವ ಈ ಖಾದ್ಯವನ್ನು ಸುಲಭವಾಗಿ ಸಿದ್ಧಪಡಿಸಬಹುದು. ಹೊರಗಡೆ ಗರಿಗರಿಯಾಗಿ, ಒಳಗಡೆ ಮೃದುವಾಗಿರುವ ಈ ಟೋಸ್ಟ್ ದೀರ್ಘಕಾಲದವರೆಗೆ ಹೊಟ್ಟೆ ತುಂಬಿರುವಂತೆ ಮಾಡುತ್ತದೆ.
ಬೇಕಾಗುವ ಪದಾರ್ಥಗಳು: ಒಂದು ಕಪ್ ಸಕ್ಕರೆ ರಹಿತ ಸಸ್ಯಜನ್ಯ ಹಾಲು (ಸೋಯಾ ಅಥವಾ ಬಾದಾಮಿ ಹಾಲು), ಮೂರನೇ ಒಂದು ಭಾಗದಷ್ಟು ಕಡಲೆ ಹಿಟ್ಟು, ಮೂರು ಚಮಚ ನ್ಯೂಟ್ರಿಷನಲ್ ಯೀಸ್ಟ್, ಮೂರು ಚಮಚ ಮೇಪಲ್ ಸಿರಪ್ ಅಥವಾ ಜೇನುತುಪ್ಪ, ಅರ್ಧ ಚಮಚ ಸಮುದ್ರದ ಉಪ್ಪು, ಆರು ಸ್ಲೈಸ್ ಸೋರ್‌ಡೋ ಬ್ರೆಡ್ ಅಥವಾ ಗೋಧಿ ಬ್ರೆಡ್, ನಾಲ್ಕು ಚಮಚ ಬೆಣ್ಣೆ, ಸ್ವಲ್ಪ ಹಣ್ಣುಗಳು (ಬೆರ್ರಿ ಹಣ್ಣುಗಳು), ಎರಡು ಚಮಚ ಸಕ್ಕರೆ ಪುಡಿ.
ತಯಾರಿಸುವ ವಿಧಾನ: ಮೊದಲು ಒಂದು ಅಗಲವಾದ ಪಾತ್ರೆಯಲ್ಲಿ ಸಸ್ಯಜನ್ಯ ಹಾಲು, ಕಡಲೆ ಹಿಟ್ಟು, ನ್ಯೂಟ್ರಿಷನಲ್ ಯೀಸ್ಟ್, ಮೇಪಲ್ ಸಿರಪ್ ಮತ್ತು ಉಪ್ಪನ್ನು ಹಾಕಿ ಚೆನ್ನಾಗಿ ಬೆರೆಸಿ ಮಿಶ್ರಣ ಸಿದ್ಧಪಡಿಸಿಕೊಳ್ಳಿ. ನಂತರ ಒಲೆಯ ಮೇಲೆ ನಾನ್-ಸ್ಟಿಕ್ ಪ್ಯಾನ್ ಇಟ್ಟು ಮಧ್ಯಮ ಉರಿಯಲ್ಲಿ ಬಿಸಿ ಮಾಡಿ.
ಈ ನಡುವೆ ಎರಡು ಬ್ರೆಡ್ ಸ್ಲೈಸ್‌ಗಳನ್ನು ತಯಾರಿಸಿಕೊಂಡ ಮಿಶ್ರಣದಲ್ಲಿ ಎರಡೂ ಬದಿಗೆ ಚೆನ್ನಾಗಿ ಸವರಿ. ಬ್ರೆಡ್ ಹೆಚ್ಚು ಮೆತ್ತಗಾಗದಂತೆ ಎಚ್ಚರ ವಹಿಸಿ. ಪ್ಯಾನ್ ಬಿಸಿಯಾದ ನಂತರ ಸ್ವಲ್ಪ ಬೆಣ್ಣೆ ಹಾಕಿ ಮಿಶ್ರಣ ಸವರಿದ ಬ್ರೆಡ್ ತುಂಡುಗಳನ್ನು ಪ್ಯಾನ್ ಮೇಲೆ ಇಡಿ. ಒಂದು ಬದಿ ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಸುಮಾರು 3 ನಿಮಿಷ ಬೇಯಿಸಿ, ನಂತರ ಇನ್ನೊಂದು ಬದಿಗೆ ಮಗುಚಿ ಹಾಕಿ ಮತ್ತೆ 2-3 ನಿಮಿಷ ಬೇಯಿಸಿ.
ಎಲ್ಲಾ ಬ್ರೆಡ್ ಸ್ಲೈಸ್‌ಗಳನ್ನು ಇದೇ ರೀತಿ ಹದವಾಗಿ ಬೇಯಿಸಿಕೊಂಡು ಒಂದು ಪ್ಲೇಟ್‌ಗೆ ತೆಗೆದುಕೊಳ್ಳಿ. ಇದರ ಮೇಲೆ ಸ್ವಲ್ಪ ಮೇಪಲ್ ಸಿರಪ್, ತಾಜಾ ಹಣ್ಣುಗಳು ಮತ್ತು ಬೇಕಿದ್ದರೆ ಸ್ವಲ್ಪ ಸಕ್ಕರೆ ಪುಡಿಯನ್ನು ಉದುರಿಸಿ ಬಿಸಿಯಾಗಿ ಸವಿಯಲು ನೀಡಿ. ಇದು ಮಕ್ಕಳಿಗೆ ಹಾಗೂ ಡಯಟ್ ಮಾಡುವವರಿಗೆ ಉತ್ತಮವಾದ ಉಪಹಾರವಾಗಿದೆ.

