ಬೆಂಗಳೂರು: ಮಹತ್ವದ ತನಿಖೆಯಲ್ಲಿ ಕರ್ನಾಟಕದ ಎಂಜಿನಿಯರಿಂಗ್ ಸೀಟ್ ಬ್ಲಾಕಿಂಗ್ ಮತ್ತು ಪಿಎಸ್ಐ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ED) ಒಟ್ಟು 21 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಿದೆ.
ಬೆಂಗಳೂರಿನ ಬಿಎಂಎಸ್ ಎಜುಕೇಶನ್ ಟ್ರಸ್ಟ್ಗೆ ಸಂಬಂಧಿಸಿದ ಎಂಜಿನಿಯರಿಂಗ್ ಸೀಟ್ ಬ್ಲಾಕಿಂಗ್ ಹಗರಣಕ್ಕೆ ಸಂಬಂಧಿಸಿದಂತೆ ಇಡಿ ಮಹತ್ವದ ಕ್ರಮ ಕೈಗೊಂಡಿದ್ದು, 19.46 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದೆ. ಅದಲ್ಲದೆ ರಾಜ್ಯದಲ್ಲಿ 2021–22ರಲ್ಲಿ ನಡೆದ 545 ಪಿಎಸ್ಐಗಳ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ 1.53 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಿದೆ.
ಎಂಜಿನಿಯರಿಂಗ್ ಪ್ರವೇಶ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಮಲ್ಲೇಶ್ವರಂ ಹಾಗೂ ಹನುಮಂತನಗರ ಪೊಲೀಸ್ ಠಾಣೆಗಳಲ್ಲಿ ದೂರು ನೀಡಿತ್ತು. ಈ ಸಂಬಂಧ ಪ್ರತ್ಯೇಕವಾಗಿ ಕೇಸ್ ದಾಖಲಿಸಿಕೊಂಡ ಇಡಿ ತನಿಖೆ ಆರಂಭಿಸಿತ್ತು. 2025ರಲ್ಲಿ ಬಿಎಂಎಸ್ ಟ್ರಸ್ಟ್ ಸದಸ್ಯರು, ಎಂಜಿನಿಯರಿಂಗ್ ಕಾಲೇಜುಗಳು, ಮಧ್ಯವರ್ತಿಗಳು ಹಾಗೂ ಏಜೆಂಟರ ಮನೆಗಳು ಸೇರಿ 18 ಸ್ಥಳಗಳಲ್ಲಿ ಇಡಿ ದಾಳಿ ನಡೆಸಿತ್ತು.
ತನಿಖೆಯಲ್ಲಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಿಗದಿತ ಶುಲ್ಕಕ್ಕಿಂತ ಹತ್ತುಪಟ್ಟು ಹೆಚ್ಚು ಹಣ ಪಡೆಯುತ್ತಿರುವುದು ಸಾಬೀತಾಗಿದೆ. ಬಿಎಂಎಸ್ ಟ್ರಸ್ಟ್ನ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಸೀಟ್ ಬ್ಲಾಕಿಂಗ್ ಗೆ ಕಾಲೇಜು ಆಡಳಿತ ಮಂಡಳಿ ಮಧ್ಯವರ್ತಿಗಳು ಹಾಗೂ ಏಜೆಂಟರ ಮೂಲಕ ವಿದ್ಯಾರ್ಥಿಗಳಿಂದ ನೇರವಾಗಿ ಮತ್ತು ಶೈಕ್ಷಣಿಕ ಸಲಹೆಗಾರರ ಮೂಲಕ ಹಣ ಸಂಗ್ರಹಿಸುತ್ತಿತ್ತು. ಈ ಹಣವನ್ನು ಟ್ರಸ್ಟ್ನ ಲೆಕ್ಕಪತ್ರಗಳಲ್ಲಿ ದಾಖಲಿಸದೆ, ಸೀಟ್ಗಳನ್ನು ನಿಗದಿತ ಶುಲ್ಕಕ್ಕಿಂತ 10 ಪಟ್ಟು ಹೆಚ್ಚು ದರಕ್ಕೆ ಮಾರಾಟ ಮಾಡಿರುವುದು ತಿಳಿದುಬಂದಿದೆ.

