ಹೈದರಾಬಾದ್: ಖ್ಯಾತ ನಿರ್ದೇಶಕ ಗುಣಶೇಖರ್ ಸಾರಥ್ಯದಲ್ಲಿ ಮೂಡಿಬರುತ್ತಿರುವ ‘ಯುಫೋರಿಯಾ’ (Euphoria) ಚಿತ್ರದ ಮೂಲಕ ಬಾಲನಟಿ ಸಾರಾ ಅರ್ಜುನ್ ಈಗ ಪೂರ್ಣಪ್ರಮಾಣದ ನಾಯಕಿಯಾಗಿ ಟಾಲಿವುಡ್‌ಗೆ ಪದಾರ್ಪಣೆ ಮಾಡುತ್ತಿದ್ದಾರೆ. ಇತ್ತೀಚೆಗಷ್ಟೇ ಬಾಲಿವುಡ್‌ನ ‘ಧುರಂಧರ್’ ಚಿತ್ರದಲ್ಲಿ ಮಿಂಚಿದ್ದ ಈ ಪ್ರತಿಭಾವಂತ ನಟಿ, ಈಗ ತೆಲುಗು ಪ್ರೇಕ್ಷಕರನ್ನು ಸೆಳೆಯಲು ಸಜ್ಜಾಗಿದ್ದಾರೆ.
ನೀಲಿ ಸೀರೆಯಲ್ಲಿ ಕಂಗೊಳಿಸಿದ ನಟಿ ಚಿತ್ರದ ಪ್ರಚಾರದ ಅಂಗವಾಗಿ ಹೈದರಾಬಾದ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸಾರಾ ಅರ್ಜುನ್ ಉಟ್ಟಿದ್ದ ನೀಲಿ ಬಣ್ಣದ ಆರ್ಗನ್ಜಾ ಸಿಲ್ಕ್ ಸೀರೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸುಂದರವಾದ ಗುಲಾಬಿ ಬಣ್ಣದ ಬಾರ್ಡರ್ ಹೊಂದಿರುವ ಈ ಸೀರೆಗೆ ಮ್ಯಾಚಿಂಗ್ ಬ್ಲೌಸ್ ಧರಿಸಿದ್ದ ಅವರು, ಮುತ್ತಿನ ಹಾರ ಮತ್ತು ಕಿವಿಯೋಲೆಗಳೊಂದಿಗೆ ರಾಜಕುಮಾರಿಯಂತೆ ಕಂಗೊಳಿಸುತ್ತಿದ್ದರು. ಸಾರಾ ಅವರ ಈ ಸೊಗಸಾದ ನೋಟಕ್ಕೆ ಫ್ಯಾಷನ್ ಪ್ರಿಯರು ಮನಸೋತಿದ್ದಾರೆ.
ಸಮಾಜದ ಅನಿಷ್ಟಗಳ ಮೇಲೆ ಬೆಳಕು ಚೆಲ್ಲುವ ‘ಯುಫೋರಿಯಾ’ ಇದು ಕೇವಲ ಯುವಜನತೆಯ ಮನರಂಜನೆಯ ಸಿನಿಮಾ ಮಾತ್ರವಲ್ಲ, ಸಮಾಜದಲ್ಲಿ ನಡೆಯುತ್ತಿರುವ ಮಾದಕ ದ್ರವ್ಯ ವ್ಯಸನ, ಲೈಂಗಿಕ ದೌರ್ಜನ್ಯ ಮತ್ತು ಅಪರಾಧಗಳ ಸುತ್ತ ಸಾಗುವ ಗಂಭೀರ ಕಥಾಹಂದರವನ್ನು ಹೊಂದಿದೆ. ಚಿತ್ರದಲ್ಲಿ ಸಾರಾ ಅರ್ಜುನ್ ಐಎಎಸ್ ಅಧಿಕಾರಿ ಆಗಬೇಕೆಂದು ಕನಸು ಕಾಣುವ ಹುಡುಗಿಯ ಪಾತ್ರದಲ್ಲಿ ನಟಿಸಿದ್ದು, ಹದಿಹರೆಯದ ಹಾದಿ ತಪ್ಪುವಿಕೆ ಮತ್ತು ಅದರ ಪರಿಣಾಮಗಳನ್ನು ಈ ಚಿತ್ರ ಎಳೆಎಳೆಯಾಗಿ ಬಿಚ್ಚಿಡಲಿದೆ ಎಂದು ನಿರ್ದೇಶಕ ಗುಣಶೇಖರ್ ತಿಳಿಸಿದ್ದಾರೆ.
ಫೆಬ್ರವರಿ 6ಕ್ಕೆ ಬಿಡುಗಡೆ ಸಾರಾ ಅರ್ಜುನ್ ಜೊತೆಗೆ ಅನುಭವಿ ನಟಿ ಭೂಮಿಕಾ ಚಾವ್ಲಾ ಅವರು ಶಾಲಾ ಪ್ರಾಂಶುಪಾಲರಾಗಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನುಳಿದಂತೆ ಗೌತಮ್ ವಾಸುದೇವ್ ಮೆನನ್, ನಾಸರ್ ಸೇರಿದಂತೆ ದೊಡ್ಡ ತಾರಾಬಳಗವೇ ಚಿತ್ರದಲ್ಲಿದೆ. ಕಾಲ ಭೈರವ ಅವರ ಸಂಗೀತವಿರುವ ಈ ಚಿತ್ರವು ಫೆಬ್ರವರಿ 6 ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

