ಜಲಂಧರ್: ಆಮ್ ಆದ್ಮಿ ಪಾರ್ಟಿಯ (AAP) ಪ್ರಭಾವಿ ನಾಯಕ, ರಾಜ್ಯಸಭಾ ಸಂಸದ ಅಶೋಕ್ ಕುಮಾರ್ ಮಿತ್ತಲ್ ಅವರಿಗೆ ಇಂದು ಬೆಳ್ಳಂಬೆಳಗ್ಗೆ ಜಾರಿ ನಿರ್ದೇಶನಾಲಯ (ED) ಶಾಕ್ ನೀಡಿದೆ. ಮಿತ್ತಲ್ ಅವರ ನಿವಾಸ ಹಾಗೂ ಅವರಿಗೆ ಸಂಬಂಧಿಸಿದ ಲವ್ಲಿ ಪ್ರೊಫೆಷನಲ್ ಯೂನಿವರ್ಸಿಟಿ (LPU) ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿ ಶೋಧ ಕಾರ್ಯ ಆರಂಭಿಸಿದ್ದಾರೆ.
ಎಲ್ಲೆಲ್ಲಿ ದಾಳಿ?: ಜಲಂಧರ್ ಕ್ಯಾಂಟ್‌ನ ಮಾಲ್ ರಸ್ತೆಯಲ್ಲಿರುವ ಮಿತ್ತಲ್ ಅವರ ನಿವಾಸ, ಫಾಗ್ವಾರಾದ ಎಲ್‌ಪಿಯು (LPU) ಕ್ಯಾಂಪಸ್, ಲವ್ಲಿ ಸ್ವೀಟ್ಸ್ ಮತ್ತು ಲವ್ಲಿ ಆಟೋಸ್ ಸಂಸ್ಥೆಗಳ ಮೇಲೆ ಏಕಕಾಲಕ್ಕೆ ದಾಳಿ ನಡೆದಿದೆ.
ಕಾರಣವೇನು?: ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (FEMA) ಉಲ್ಲಂಘನೆ ಆರೋಪದಡಿ ಈ ತನಿಖೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.
ಟೈಮಿಂಗ್ ಸಂಶಯ?: ಇತ್ತೀಚೆಗಷ್ಟೇ ರಾಘವ್ ಚಡ್ಡಾ ಅವರ ಸ್ಥಾನಕ್ಕೆ ಮಿತ್ತಲ್ ಅವರನ್ನು ರಾಜ್ಯಸಭೆಯ ಎಎಪಿ ಉಪನಾಯಕನನ್ನಾಗಿ ನೇಮಿಸಲಾಗಿತ್ತು. ಈ ಬೆನ್ನಲ್ಲೇ ದಾಳಿ ನಡೆದಿರುವುದು ತೀವ್ರ ರಾಜಕೀಯ ಚರ್ಚೆಗೆ ಗ್ರಾಸವಾಗಿದೆ.
ಸಿಡಿದೆದ್ದ ಕೇಜ್ರಿವಾಲ್ ಮತ್ತು ಭಗವಂತ್ ಮಾನ್
ಈ ಇಡಿ ದಾಳಿಯನ್ನು ಕೇಂದ್ರ ಸರ್ಕಾರದ ರಾಜಕೀಯ ಸೇಡು ಎಂದು ಎಎಪಿ ನಾಯಕರು ಕಿಡಿಕಾರಿದ್ದಾರೆ:
ಅರವಿಂದ್ ಕೇಜ್ರಿವಾಲ್: ಮೋದಿ ಜೀ ಪಂಜಾಬ್ ಚುನಾವಣೆಗೆ ತಯಾರಿ ಆರಂಭಿಸಿದಂತಿದೆ. ಪಂಜಾಬಿಗಳು ಇಂತಹ ಕ್ರಮಗಳನ್ನು ಸಹಿಸುವುದಿಲ್ಲ, ಸರಿಯಾದ ಪಾಠ ಕಲಿಸಲಿದ್ದಾರೆ” ಎಂದು ಎಚ್ಚರಿಸಿದ್ದಾರೆ.
ಸಿಎಂ ಭಗವಂತ್ ಮಾನ್: ಇದು ಮೋದಿ ಅವರ ಹಳೆಯ ಟೆಕ್ನಿಕ್. ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧ ಪಕ್ಷಗಳನ್ನು ಹತ್ತಿಕ್ಕುವ ಕೆಲಸ ನಡೆಯುತ್ತಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಅಶೋಕ್ ಕುಮಾರ್ ಮಿತ್ತಲ್ ಅವರು ಕೇವಲ ರಾಜಕಾರಣಿಯಲ್ಲ, ದೇಶದ ಅತಿದೊಡ್ಡ ಖಾಸಗಿ ವಿಶ್ವವಿದ್ಯಾಲಯಗಳಲ್ಲಿ ಒಂದಾದ ಎಲ್‌ಪಿಯುನ ಸಂಸ್ಥಾಪಕರು. ಇವರ ಕುಟುಂಬಕ್ಕೆ ಸೇರಿದ ಲವ್ಲಿ ಸ್ವೀಟ್ಸ್ ಮತ್ತು ಆಟೋ ಮೊಬೈಲ್ ವ್ಯವಹಾರಗಳು ಪಂಜಾಬ್‌ನಲ್ಲಿ ಅತ್ಯಂತ ಪ್ರಸಿದ್ಧವಾಗಿವೆ.

