ಇಂದಿನ ಕಲುಷಿತ ವಾತಾವರಣ ಮತ್ತು ಬದಲಾದ ಜೀವನಶೈಲಿಯಲ್ಲಿ ಶ್ವಾಸಕೋಶದ ಕ್ಯಾನ್ಸರ್ (Lung Cancer) ಅತ್ಯಂತ ಅಪಾಯಕಾರಿ ಕಾಯಿಲೆಯಾಗಿ ಹೊರಹೊಮ್ಮಿದೆ. ವಿಶ್ವ ಆರೋಗ್ಯ ಸಂಸ್ಥೆಯ (WHO) ಪ್ರಕಾರ, ಶ್ವಾಸಕೋಶದ ಕ್ಯಾನ್ಸರ್ಗೆ ಧೂಮಪಾನವೇ 85% ರಷ್ಟು ಮುಖ್ಯ ಕಾರಣ. ಆದರೆ ಧೂಮಪಾನ ಮಾಡದವರಿಗೂ ಇದು ಬರುವ ಸಾಧ್ಯತೆ ಇರುವುದರಿಂದ, ಇದರ ಲಕ್ಷಣಗಳನ್ನು ಆರಂಭದಲ್ಲೇ ಗುರುತಿಸುವುದು ಜೀವ ಉಳಿಸಲು ಸಹಕಾರಿ.
ಶ್ವಾಸಕೋಶದ ಕ್ಯಾನ್ಸರ್ನ 10 ಪ್ರಮುಖ ಲಕ್ಷಣಗಳು ಇಲ್ಲಿವೆ:
1.ವಾರಗಳ ಕಾಲ ಕಾಡುವ ಕೆಮ್ಮು
ಸಾಮಾನ್ಯ ಶೀತದ ಕೆಮ್ಮು ಕೆಲವೇ ದಿನಗಳಲ್ಲಿ ಗುಣವಾಗುತ್ತದೆ. ಆದರೆ ಒಂದು ಹೊಸ ರೀತಿಯ ಕೆಮ್ಮು ಬಂದು, ಅದು ವಾರಗಳ ಕಾಲ ಕಡಿಮೆಯಾಗದಿದ್ದರೆ ಅಥವಾ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದರೆ ಅದು ಅಪಾಯದ ಮುನ್ಸೂಚನೆ ಇರಬಹುದು.
2.ಎದೆ ಭಾಗದಲ್ಲಿ ತೀವ್ರ ನೋವು
ಆಳವಾಗಿ ಉಸಿರಾಡುವಾಗ, ಜೋರಾಗಿ ನಗುವಾಗ ಅಥವಾ ಕೆಮ್ಮುವಾಗ ಎದೆಯಲ್ಲಿ ಚುಚ್ಚಿದಂತೆ ನೋವಾಗುತ್ತಿದ್ದರೆ ಎಚ್ಚರವಿರಲಿ. ಶ್ವಾಸಕೋಶದ ಗೆಡ್ಡೆಗಳು ಎದೆಯ ಒಳಗಿನ ಭಾಗಗಳ ಮೇಲೆ ಒತ್ತಡ ಹೇರಿದಾಗ ಈ ರೀತಿ ನೋವು ಕಾಣಿಸಿಕೊಳ್ಳುತ್ತದೆ.
3.ಕಫದಲ್ಲಿ ರಕ್ತದ ಕಲೆ
ಕೆಮ್ಮಿದಾಗ ರಕ್ತ ಬರುವುದು ಅಥವಾ ತುಕ್ಕು ಬಣ್ಣದ ಕಫ (Sputum) ಕಾಣಿಸಿಕೊಳ್ಳುವುದು ಅತ್ಯಂತ ಗಂಭೀರ ಲಕ್ಷಣ. ಇದನ್ನು ಸಣ್ಣ ಸೋಂಕು ಎಂದು ಕಡೆಗಣಿಸದೆ ತಕ್ಷಣ ತಜ್ಞ ವೈದ್ಯರ ಬಳಿ ತಪಾಸಣೆ ಮಾಡಿಸಿಕೊಳ್ಳುವುದು ಉತ್ತಮ.
4.ಕಾರಣವಿಲ್ಲದ ಉಸಿರಾಟದ ತೊಂದರೆ
ಮೆಟ್ಟಿಲು ಹತ್ತುವಾಗ ಅಥವಾ ದೈನಂದಿನ ಕೆಲಸ ಮಾಡುವಾಗ ಹಿಂದೆಂದಿಗಿಂತಲೂ ಹೆಚ್ಚು ದಮ್ಮು ಅಥವಾ ಉಸಿರಾಟದ ತೊಂದರೆ ಎನಿಸುತ್ತಿದ್ದರೆ, ಅದು ಶ್ವಾಸಕೋಶದ ನಳಿಕೆಗಳು ಬ್ಲಾಕ್ ಆಗುತ್ತಿರುವ ಲಕ್ಷಣವಾಗಿರಬಹುದು.
5.ಧ್ವನಿಯಲ್ಲಿನ ಬದಲಾವಣೆ
ಸತತವಾಗಿ ಧ್ವನಿ ಗಾರಟದಂತೆ (Hoarseness) ಬದಲಾಗಿದ್ದು, ಹಲವು ವಾರಗಳ ಕಾಲ ಅದು ಸರಿಹೋಗದಿದ್ದರೆ ಗಮನಹರಿಸಿ. ಕ್ಯಾನ್ಸರ್ ಜೀವಕೋಶಗಳು ಧ್ವನಿಪೆಟ್ಟಿಗೆಯನ್ನು ನಿಯಂತ್ರಿಸುವ ನರಗಳ ಮೇಲೆ ಪರಿಣಾಮ ಬೀರಿದಾಗ ಧ್ವನಿ ಬದಲಾಗುತ್ತದೆ.
6.ಉಸಿರಾಡುವಾಗ ಬರುವ ಶಿಳ್ಳೆಯ ಶಬ್ದ
ನೀವು ಉಸಿರು ಎಳೆದುಕೊಳ್ಳುವಾಗ ಅಥವಾ ಬಿಡುವಾಗ ಸೀಟಿ ಹೊಡೆದಂತಹ ಶಬ್ದ ಬರುತ್ತಿದ್ದರೆ, ಗಾಳಿಯ ಸಂಚಾರಕ್ಕೆ ಅಡ್ಡಿಯಾಗುತ್ತಿದೆ ಎಂದರ್ಥ. ಇದನ್ನು ಕೇವಲ ಅಸ್ತಮಾ ಎಂದು ಭಾವಿಸದೆ ಪರೀಕ್ಷಿಸಿಕೊಳ್ಳಿ.
7.ಹಠಾತ್ ತೂಕ ಇಳಿಕೆ
ಯಾವುದೇ ವಿಶೇಷ ಡಯಟ್ ಅಥವಾ ಜಿಮ್ ಮಾಡದಿದ್ದರೂ ಇದ್ದಕ್ಕಿದ್ದಂತೆ ದೇಹದ ತೂಕ ಕಡಿಮೆಯಾಗುತ್ತಿದ್ದರೆ, ಅದು ದೇಹದ ಒಳಗಿನ ಗಂಭೀರ ಆರೋಗ್ಯ ಸಮಸ್ಯೆಯ ಸಂಕೇತವಾಗಿರಬಹುದು.
8.ಮತ್ತೆ ಮತ್ತೆ ಕಾಡುವ ಸೋಂಕುಗಳು
ನ್ಯುಮೋನಿಯಾ ಅಥವಾ ಬ್ರಾಂಕೈಟಿಸ್ನಂತಹ ಸೋಂಕುಗಳು ಒಮ್ಮೆ ಗುಣವಾದರೂ ಪದೇ ಪದೇ ನಿಮ್ಮನ್ನು ಕಾಡುತ್ತಿದ್ದರೆ, ನಿಮ್ಮ ಶ್ವಾಸಕೋಶದ ರಕ್ಷಣಾ ವ್ಯವಸ್ಥೆ ದುರ್ಬಲವಾಗಿದೆ ಎಂದರ್ಥ.
9.ಅಸಹನೀಯ ಮೂಳೆ ನೋವು
ಕ್ಯಾನ್ಸರ್ ಒಂದು ಹಂತ ಮೀರಿದಾಗ ಅದು ದೇಹದ ಇತರ ಭಾಗಗಳಿಗೆ ಹರಡಬಹುದು. ಅಂತಹ ಸಮಯದಲ್ಲಿ ಸೊಂಟ ಅಥವಾ ಬೆನ್ನಿನ ಮೂಳೆಗಳಲ್ಲಿ ತೀವ್ರವಾದ ನೋವು ಕಾಣಿಸಿಕೊಳ್ಳುತ್ತದೆ.
10.ವಿಪರೀತ ತಲೆನೋವು ಮತ್ತು ಆಯಾಸ
ದಿನವಿಡೀ ವಿಪರೀತ ನಿಶ್ಯಕ್ತಿ ಎನಿಸುವುದು ಅಥವಾ ತೀವ್ರವಾದ ತಲೆನೋವು ಕಾಣಿಸಿಕೊಳ್ಳುವುದು ಕೂಡ ದೇಹದಲ್ಲಿ ಆಗುತ್ತಿರುವ ಅಸಹಜ ಬದಲಾವಣೆಗಳ ಮುನ್ಸೂಚನೆಯಾಗಿದೆ.

