ಮೈಸೂರು: ನೆರೆಯ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರ ಧರ್ಮಪತ್ನಿ ದುರ್ಗಾ ಸ್ಟಾಲಿನ್ ಅವರು ಮೈಸೂರಿನಲ್ಲಿ ಜೆಡಿಎಸ್ ಹಿರಿಯ ನಾಯಕ ಹಾಗೂ ಶಾಸಕ ಜಿ.ಟಿ. ದೇವೇಗೌಡ ಅವರ ನಿವಾಸಕ್ಕೆ ಭೇಟಿ ನೀಡಿದ್ದು, ದೈವಭಕ್ತೆಯಾಗಿರುವ ದುರ್ಗಾ ಸ್ಟಾಲಿನ್ ಅವರು ಮೈಸೂರಿನ ಅಧಿದೇವತೆ ತಾಯಿ ಚಾಮುಂಡೇಶ್ವರಿ ದರ್ಶನಕ್ಕಾಗಿ ಸಾಂಸ್ಕೃತಿಕ ನಗರಿಗೆ ಆಗಮಿಸಿದ ವೇಳೆ ಈ ಅಪರೂಪದ ಭೇಟಿ ನಡೆದಿದೆ.
ಶಾಸಕ ಜಿ.ಟಿ. ದೇವೇಗೌಡರ ಮನೆಗೆ ತಮಿಳುನಾಡು ಸಿಎಂ ಪತ್ನಿ ದುರ್ಗಾ ಸ್ಟಾಲಿನ್ ಎಂಟ್ರಿ ಕೊಡುತ್ತಿದ್ದಂತೆ, ಜಿಟಿಡಿ ಕುಟುಂಬಸ್ಥರು ಅತ್ಯಂತ ಪ್ರೀತಿಯಿಂದ ಸ್ವಾಗತಿಸಿ ಬರಮಾಡಿಕೊಂಡರು
ಸಾಂಪ್ರದಾಯಿಕ ಸನ್ಮಾನ: ಜಿ.ಟಿ. ದೇವೇಗೌಡರು ದುರ್ಗಾ ಸ್ಟಾಲಿನ್ ಅವರಿಗೆ ಶಾಲು ಹೊದಿಸಿ ಗೌರವಿಸಿದರೆ, ಜಿಟಿಡಿ ಧರ್ಮಪತ್ನಿ ಲಲಿತಾ ಅವರು ಮೈಸೂರಿನ ಸಾಂಪ್ರದಾಯಿಕ ಶೈಲಿಯಲ್ಲಿ ಹೂವಿನ ಹಾರ ಹಾಕಿ, ಉಡುಗೊರೆ ನೀಡಿ ಸತ್ಕರಿಸಿದ್ದಾರೆ.
ಪಾದ ಮುಟ್ಟಿ ನಮಸ್ಕರಿಸಿದ ಸಿಎಂ ಪತ್ನಿ: ವೀಡಿಯೊದ ಅತ್ಯಂತ ಆಕರ್ಷಕ ಕ್ಷಣವೆಂದರೆ, ನೆರೆಯ ರಾಜ್ಯದ ಮುಖ್ಯಮಂತ್ರಿಯ ಪತ್ನಿಯಾಗಿದ್ದರೂ ದುರ್ಗಾ ಸ್ಟಾಲಿನ್ ಅವರು ಹಿರಿಯರಾದ ಜಿ.ಟಿ. ದೇವೇಗೌಡ ಹಾಗೂ ಲಲಿತಾ ದೇವೇಗೌಡ ಅವರ ಪಾದಗಳನ್ನು ಮುಟ್ಟಿ ಅತ್ಯಂತ ಭಕ್ತಿ-ಭಾವದಿಂದ ನಮಸ್ಕರಿಸಿ ಆಶೀರ್ವಾದ ಪಡೆದುಕೊಂಡಿದ್ದಾರೆ.
ಸೌಹಾರ್ದಯುತ ಭೇಟಿ:
ಈ ಸಂದರ್ಭದಲ್ಲಿ ಜಿ.ಟಿ. ದೇವೇಗೌಡರ ಪುತ್ರ ಹಾಗೂ ಮೈಸೂರು ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಜಿ.ಡಿ. ಹರೀಶ್ ಗೌಡ ಸೇರಿದಂತೆ ಕುಟುಂಬದ ಇತರ ಸದಸ್ಯರು ಉಪಸ್ಥಿತರಿದ್ದು, ತಮಿಳುನಾಡು ಸಿಎಂ ಪತ್ನಿ ಜೊತೆ ಕೆಲಕಾಲ ಕುಶಲೋಪರಿ ಮಾತುಕತೆ ನಡೆಸಿದ್ದಾರೆ.
ಯಾವುದೇ ರಾಜಕೀಯ ಬಣ್ಣವಿಲ್ಲದ, ಸಂಪೂರ್ಣ ವೈಯಕ್ತಿಕ ಹಾಗೂ ಸಾಂಸ್ಕೃತಿಕ ಸೌಹಾರ್ದತೆಯ ಸಂಕೇತವಾಗಿರುವ ಈ ವೀಡಿಯೊ ಝಲಕ್ ಇದೀಗ ಡಿಜಿಟಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದ್ದು, ದುರ್ಗಾ ಸ್ಟಾಲಿನ್ ಅವರ ಸರಳತೆ ಮತ್ತು ವಿನಯತೆಗೆ ಕನ್ನಡಿಗರು ಫಿದಾ ಆಗಿದ್ದಾರೆ.

