ಬೆಂಗಳೂರು : ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಮತ್ತೊಂದು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ವಿದೇಶದಿಂದ ಅಕ್ರಮವಾಗಿ ಸಾಗಿಸುತ್ತಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ಮಾದಕ ವಸ್ತುವನ್ನು ವಶಪಡಿಸಿಕೊಂಡಿದ್ದಾರೆ.
ಘಟನೆಯ ವಿವರ: ಶುಕ್ರವಾರ ಬ್ಯಾಂಕಾಕ್‌ನಿಂದ ಬೆಂಗಳೂರಿಗೆ ಬಂದಿಳಿದ ಪ್ರವಾಸಿಯೊಬ್ಬನನ್ನು ಅನುಮಾನದ ಮೇಲೆ ತಪಾಸಣೆ ನಡೆಸಿದಾಗ ಈ ದಂಧೆ ಬೆಳಕಿಗೆ ಬಂದಿದೆ. ಆತನ ಬ್ಯಾಗ್‌ನಲ್ಲಿ ಅತ್ಯಂತ ದುಬಾರಿ ಎನ್ನಲಾಗುವ 8.93 ಕೆಜಿ ಹೈಡ್ರೋ ಗಾಂಜಾ ಪತ್ತೆಯಾಗಿದ್ದು, ಇದರ ಅಂದಾಜು ಮಾರುಕಟ್ಟೆ ಮೌಲ್ಯ ₹3.12 ಕೋಟಿ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹೆಚ್ಚಿದ ಬ್ಯಾಂಕಾಕ್ ಕನೆಕ್ಷನ್ : ಕಳೆದ ಒಂದು ವಾರದಿಂದ ವಿಮಾನ ನಿಲ್ದಾಣದಲ್ಲಿ ಸತತವಾಗಿ ಡ್ರಗ್ಸ್ ಬೇಟೆ ನಡೆಯುತ್ತಿದೆ. ಗಮನಾರ್ಹ ಸಂಗತಿಯೆಂದರೆ, ಕಳೆದ ಐದಾರು ದಿನಗಳಲ್ಲಿ ಸಿಕ್ಕಿಬಿದ್ದ ಬಹುತೇಕ ಆರೋಪಿಗಳು ಬ್ಯಾಂಕಾಕ್‌ನಿಂದ ಬಂದವರಾಗಿದ್ದಾರೆ. ವಿದೇಶಿ ಪ್ರವಾಸಿಗರ ಮುಖಾಂತರ ನಡೆಯುತ್ತಿರುವ ಈ ವ್ಯವಸ್ಥಿತ ಜಾಲವನ್ನು ಭೇದಿಸಲು ಕಸ್ಟಮ್ಸ್ ಮತ್ತು ಭದ್ರತಾ ಸಂಸ್ಥೆಗಳು ತನಿಖೆಯನ್ನು ತೀವ್ರಗೊಳಿಸಿವೆ.

