ಬಳ್ಳಾರಿ: ಉಗ್ರ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿದ ಆರೋಪದ ಮೇಲೆ ಬಳ್ಳಾರಿಯ ಅಬ್ದುಲ್ ಸಲಾಂ(36) ಎಂಬುವನನ್ನು ಆಂಧ್ರಪ್ರದೇಶದ ವಿಜಯವಾಡ ಪೊಲೀಸರು ಬಂಧಿಸಿದ್ದಾರೆ.
ಉಗ್ರಸಂಘಟನೆಯ ನಂಟು ಹೊಂದಿದ್ದ ವಿಜಯವಾಡದ ಮೊಹಮ್ಮದ್ ರೆಹಮತ್ ಉಲ್ಲಾ ಶರೀಫ್(24)ನನ್ನು ಬಂಧಿಸಿ ವಿಚಾರಣೆ ನಡೆಸಿದ ವೇಳೆ ಬಳ್ಳಾರಿಯ ಅಬ್ದುಲ್ ಸಲಾಂ ಜೊತೆಗೆ ನಿರಂತರ ಸಂಪರ್ಕದಲ್ಲಿರುವ ಮಾಹಿತಿ ಪೊಲೀಸರಿಗೆ ಸಿಕ್ಕಿದೆ. ಶೋಧನಾ ವಾರಂಟ್ ನೊಂದಿಗೆ ಬಂದ ವಿಜಯವಾಡ ಪೊಲೀಸರು ಅಬ್ದುಲ್ ಸಲಾಂನನ್ನು ಮಂಗಳವಾರ ರಾತ್ರಿ ಬಂಧಿಸಿದ್ದಾರೆ.
ಬಳ್ಳಾರಿಯ ಕೌಲ್ ಬಜಾರ್ ಠಾಣೆಗೆ ಆತನನ್ನು ಹಾಜರುಪಡಿಸಿ, ನ್ಯಾಯಾಲಯದ ಆದೇಶದಂತೆ ಆಂಧ್ರಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದಾರೆ. ಅಬ್ದುಲ್ ಸಲಾಂ ಲಾರಿ ಚಾಲಕನಾಗಿದ್ದು ಮೆಣಸಿನಕಾಯಿ, ತರಕಾರಿಗಳನ್ನು ಸಾಗಿಸುತ್ತಿದ್ದ. ಆತನಿಗೆ ಪತ್ನಿ, ಒಬ್ಬ ಪುತ್ರ ಮತ್ತು ಮೂವರು ಪುತ್ರಿಯರು ಇದ್ದಾರೆ.
ಕೌಲ್ ಬಜಾರ್ ನಿವಾಸಿ ಅಬ್ದುಲ್ ಸಲಾಂ ಜೊತೆಗೆ ಸಂಪರ್ಕ ಸಾಧಿಸುವಂತೆ ವಿಜಯವಾಡದಲ್ಲಿ ಬಂಧಿತ ಮೊಹಮ್ಮದ್ ರೆಹಮತ್ ಉಲ್ಲಾ ಶರೀಫ್ ಗೆ ವಿದೇಶಿ ಉಗ್ರ ಸೂಚನೆ ನೀಡಿದ್ದ. ನಿಷೇಧಿತ ಸಂಘಟನೆ ಜೊತೆಗೆ ಸಂಪರ್ಕ ಹೊಂದಿದ ಆರೋಪದ ಮೇಲೆ ಅಬ್ದುಲ್ ಸಲಾಂನನ್ನು ವಿಜಯವಾಡ ಪೊಲೀಸರು ಬಂಧಿಸಿ ಕರೆದೊಯ್ದಿದ್ದಾರೆ.

