ಅನೇಕರು ವಾಹನ ಚಾಲನಾ ಪರವಾನಗಿ (ಲೈಸೆನ್ಸ್) ಪಡೆದಿದ್ದರೂ ಗಾಡಿ ಓಡಿಸಲು ಭಯಪಡುತ್ತಾರೆ. ಆದರೆ ಕೇರಳದ ಕೊಚ್ಚಿಯ 75 ವರ್ಷದ ರಾಧಾಮಣಿ ಅಮ್ಮ ಅವರ ಕಥೆಯೇ ಬೇರೆ. ಇವರನ್ನು ಪ್ರೀತಿಯಿಂದ ‘ಮಣಿಯಮ್ಮ’ ಎಂದು ಕರೆಯಲಾಗುತ್ತದೆ. ಇವರು ಕೇವಲ ಸ್ಕೂಟರ್ ಅಥವಾ ಕಾರ್ ಓಡಿಸುವುದಲ್ಲ, ರಸ್ತೆಯಲ್ಲಿ ಚಲಿಸುವ ಬಹುತೇಕ ಎಲ್ಲಾ ಮಾದರಿಯ ವಾಹನಗಳನ್ನು ಅನಾಯಾಸವಾಗಿ ಚಲಾಯಿಸುತ್ತಾರೆ. ಜೆಸಿಬಿ, ಕ್ರೇನ್, ಲಾರಿ ಸೇರಿದಂತೆ ಬರೋಬ್ಬರಿ 12 ವಿಭಿನ್ನ ವಿಭಾಗದ ಚಾಲನಾ ಪರವಾನಗಿಗಳನ್ನು ಇವರು ಹೊಂದಿದ್ದಾರೆ.
ಅನಿವಾರ್ಯತೆಯಿಂದ ಆರಂಭವಾದ ಪಯಣ ಮಣಿಯಮ್ಮ ಅವರ ಈ ಸಾಧನೆಯ ಹಿಂದೆ ಒಂದು ಆಸಕ್ತಿದಾಯಕ ಕಥೆಯಿದೆ. ಅವರಿಗೆ 17 ವರ್ಷವಿರುವಾಗ ವಿವಾಹವಾಯಿತು. ಅವರ ಪತಿ ಮನೆಯಲ್ಲೇ ಡ್ರೈವಿಂಗ್ ಸ್ಕೂಲ್ ನಡೆಸುತ್ತಿದ್ದರು. ಆ ಸಮಯದಲ್ಲಿ ಪತ್ನಿಯೂ ವಾಹನ ಚಾಲನೆ ಕಲಿಯಬೇಕೆಂದು ಪತಿ ಒತ್ತಾಯಿಸಿದರು. ಆಗಿನ ಕಾಲದಲ್ಲಿ ಡ್ರೈವಿಂಗ್ ಸ್ಕೂಲ್ ನಡೆಸಲು ಕನಿಷ್ಠ ಐದು ವರ್ಷಗಳ ಚಾಲನಾ ಅನುಭವದ ಅಗತ್ಯವಿತ್ತು. ಆರಂಭದಲ್ಲಿ ಭಯವಿದ್ದರೂ, ಪತಿಯ ಪ್ರೋತ್ಸಾಹದಿಂದ 30ನೇ ವಯಸ್ಸಿನಲ್ಲಿ ಅಂಬಾಸಿಡರ್ ಕಾರ್ ಮೂಲಕ ಮೊದಲ ಲೈಸೆನ್ಸ್ ಪಡೆದರು. ನಂತರ ಕೇರಳದಲ್ಲೇ ಡ್ರೈವಿಂಗ್ ಸ್ಕೂಲ್ ಪರವಾನಗಿ ಪಡೆದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಸ್ಥಾನ ಅಂಬಾಸಿಡರ್ ಕಾರ್‌ನಿಂದ ಆರಂಭವಾದ ಇವರ ಆಸಕ್ತಿ ಅಲ್ಲಿಗೆ ನಿಲ್ಲಲಿಲ್ಲ. ಬಸ್, ಲಾರಿ, ಟ್ರೈಲರ್ ಮತ್ತು ಬೃಹತ್ ಗಾತ್ರದ ಕ್ರೇನ್‌ಗಳನ್ನು ಓಡಿಸಲು ಕಲಿತರು. ಪ್ರಸ್ತುತ ಇವರು ಭಾರೀ ವಾಹನಗಳು ಸೇರಿದಂತೆ ಒಟ್ಟು 12 ಲೈಸೆನ್ಸ್ ಹೊಂದಿದ್ದಾರೆ. ಇವರ ಈ ಅಪ್ರತಿಮ ಸಾಧನೆಯನ್ನು ಗುರುತಿಸಿ ‘ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್’ ಅತಿ ಹೆಚ್ಚು ಲೈಸೆನ್ಸ್ ಹೊಂದಿರುವ ಹಿರಿಯ ಮಹಿಳೆ ಎಂದು ಗೌರವಿಸಿದೆ. ಇತ್ತೀಚೆಗೆ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಕೊಚ್ಚಿ ಕಾರ್ಪೊರೇಷನ್ ಇವರನ್ನು ವಿಶೇಷವಾಗಿ ಸನ್ಮಾನಿಸಿದೆ.
ಮಹಿಳೆಯರಿಗೆ ಮಣಿಯಮ್ಮ ನೀಡುವ ಸಂದೇಶವೇನು? “ಮಹಿಳೆಯರು ಮನಸ್ಸು ಮಾಡಿದರೆ ಯಾವುದೂ ಅಸಾಧ್ಯವಲ್ಲ. ಯಾವುದನ್ನಾದರೂ ಕಲಿಯಬೇಕೆಂಬ ಇಚ್ಛಾಶಕ್ತಿ ಇದ್ದರೆ ವಯಸ್ಸು ಕೇವಲ ಒಂದು ಸಂಖ್ಯೆಯಷ್ಟೇ” ಎಂದು ಮಣಿಯಮ್ಮ ನಗುಮೊಗದಿಂದ ಹೇಳುತ್ತಾರೆ. ಅವರಿಗೆ ರಸ್ತೆಯಲ್ಲಿ ಹೋಗುವಾಗ ಯಾವುದಾದರೂ ಹೊಸ ಮಾದರಿಯ ವಾಹನ ಕಂಡರೆ ಅದನ್ನು ಓಡಿಸಬೇಕೆಂಬ ಆಸೆ ಇಂದಿಗೂ ಕಡಿಮೆಯಾಗಿಲ್ಲ. ಅವರ ಪುತ್ರಿ ಕೂಡ ವೈಕೋಮ್‌ನಲ್ಲಿ ಡ್ರೈವಿಂಗ್ ಸ್ಕೂಲ್ ನಡೆಸುತ್ತಿದ್ದು, ತಾಯಿಯ ಪರಂಪರೆಯನ್ನು ಮುಂದುವರಿಸುತ್ತಿದ್ದಾರೆ. ಸದ್ಯ ಮಣಿಯಮ್ಮ ಅವರ ಆರು ಮಂದಿ ಮೊಮ್ಮಕ್ಕಳು ಕೂಡ ಹೊಸ ತಂತ್ರಜ್ಞಾನದ ವಾಹನಗಳನ್ನು ಕಲಿಯಲು ಇವರಿಗೆ ಸಾಥ್ ನೀಡುತ್ತಿದ್ದಾರೆ.

