ಮಲಯಾಳಂನ ಥ್ರಿಲ್ಲರ್ ಕಥಾಹಂದರದ ಚಿತ್ರಗಳ ಮಾಂತ್ರಿಕ ಜೀತು ಜೋಸೆಫ್ ನಿರ್ದೇಶನದ ಮಾಸ್ಟರ್ ಪೀಸ್ ಚಿತ್ರ ಸರಣಿ ದೃಶ್ಯಂ ಚಿತ್ರದ ಮೂರನೇ ಭಾಗ ಇಂದು ( ಮೇ 21 ) ಮೋಹನ್‌ಲಾಲ್ ಹುಟ್ಟುಹಬ್ಬದ ಪ್ರಯುಕ್ತ ಬಿಡುಗಡೆಯಾಗುತ್ತಿದೆ.
ಮೊದಲ ಭಾಗದಲ್ಲಿ ತನ್ನ ಕುಟುಂಬವನ್ನು ಕೆಣಕಿದ ವ್ಯಕ್ತಿಯ ಕೊಲೆಯಾಗಿದ್ದನ್ನು ತನ್ನ ಬುದ್ದಿವಂತಿಕೆಯಿಂದ ಪೊಲೀಸ್ ಠಾಣೆಯಡಿಯಲ್ಲೇ ಮುಚ್ಚಿಟ್ಟು ಪಾರಾಗಿದ್ದ ಜಾರ್ಜ್ ಕುಟ್ಟಿ ಎರಡನೇ ಭಾಗದಲ್ಲಿ ಆ ಹೆಣವನ್ನು ಸ್ಥಳಾಂತರಿಸಿ ಬೇರೊಂದು ಹೆಣವನ್ನು ಅಲ್ಲಿಟ್ಟು, ಅದರ ಮೇಲೆ ತಾನೇ ಒಂದು ಪುಸ್ತಕ ಸಿದ್ಧವಾಗುವ ಹಾಗೆ ಯೋಜನೆ ಹೆಣೆದು ಮತ್ತೊಮ್ಮೆ ಪೊಲೀಸರಿಗೆ ಮಣ್ಣು ಮುಕ್ಕಿಸಿದ್ದ .
ಹೀಗೆ ಇಡೀ ಪೊಲೀಸ್ ಇಲಾಖೆಯನ್ನೇ ಶವವಿಲ್ಲದೇ ಯಾಮಾರಿಸಿ ಬಚಾವಾಗಿರುವ ಜಾರ್ಜ್ ಕುಟ್ಟಿ ಹಿಂದೆ ಮತ್ತೊಮ್ಮೆ ಪೊಲೀಸರು ಬಿದ್ದಿದ್ದು ಮೂರನೇ ಬಾರಿಯಾದರೂ ಜಾರ್ಜ್ ಕುಟ್ಟಿ ಸಿಕ್ಕಿಬೀಳಲಿದ್ದಾನಾ ಎಂಬ ಪ್ರಶ್ನೆ ಎದ್ದಿದೆ.
ಈ ಪ್ರಶ್ನೆಗೆ ಇಂದು ಉತ್ತರ ಸಿಗಲಿದ್ದು, ದೃಶ್ಯಂ ಚಿತ್ರ ಸರಣಿಯ ಪ್ರೇಮಿಗಳು ಮೊದಲ ದಿನದ ಟಿಕೆಟ್ ಬುಕ್ ಮಾಡಿಕೊಂಡು ಕಾಯತೊಡಗಿದ್ದಾರೆ. ಇನ್ನು ದೃಶ್ಯಂ ಮೊದಲ ಹಾಗೂ ಎರಡನೇ ಭಾಗದ ಚಿತ್ರಗಳು ಕನ್ನಡಕ್ಕೆ ರಿಮೇಕ್ ಆಗಿ ಬಿಡುಗಡೆಯಾಗಿದ್ದವು.
ಚಿತ್ರ ರಿಮೇಕ್ ಆಗಲಿ ಏನೇ ಆಗಲಿ ಚೆನ್ನಾಗಿದ್ದರೆ ನಮ್ಮ ಜನ ಗೆಲ್ಲಿಸುತ್ತಾರೆ ನಿಜ. ಆದರೆ ಸಾಮಾಜಿಕ ಜಾಲತಾಣದಲ್ಲಿ ರಿಮೇಕ್ ನಿಲ್ಲಿಸಿ ಬೇರೆ ಭಾಷೆಯ ಚಿತ್ರಗಳನ್ನು ಕನ್ನಡದಲ್ಲೇ ಡಬ್ ನೋಡಿ ಎಂದು ಮನವಿ ಮಾಡಿಕೊಳ್ಳುತ್ತಿದ್ದಾರೆ. ಏಕೆಂದರೆ ರಿಮೇಕ್ ಹಕ್ಕಿಗಾಗಿ ಡಬಿಂಗ್ ಮಾಡದಿದ್ದರೆ ಸಿನಿ ರಸಿಕರು ಚಿತ್ರವನ್ನು ಮೂಲ ಭಾಷೆಯಲ್ಲಿ ನೋಡಲಿದ್ದು, ಇದು ಕನ್ನಡಕ್ಕೆ ಆಗುವ ನಷ್ಟ ಎನ್ನುವುದು ಅವರ ಅಭಿಪ್ರಾಯ.
ಇನ್ನು ದೃಶ್ಯಂ 3 ಚಿತ್ರತಂಡ ಸಹ ರಿಮೇಕ್‌ಗೆ ಅವಕಾಶ ಕೊಡದೇ ಕನ್ನಡದಲ್ಲೂ ಚಿತ್ರವನ್ನು ಬಿಡುಗಡೆ ಮಾಡುತ್ತಿದೆ. ಬೆಂಗಳೂರಿನಲ್ಲಿ 61 ಪ್ರದರ್ಶನ, ಮೈಸೂರಿನಲ್ಲಿ 15, ಹುಬ್ಬಳ್ಳಿಯಲ್ಲಿ 12, ಧಾರವಾಡದಲ್ಲಿ 3, ಶಿವಮೊಗ್ಗದಲ್ಲಿ 6, ತುಮಕೂರಿನಲ್ಲಿ 9, ಬೆಳಗಾವಿಯಲ್ಲಿ 5, ಬಿಜಾಪುರದಲ್ಲಿ 4, ಉಡುಪಿಯಲ್ಲಿ 3, ದಾವಣಗೆರೆಯಲ್ಲಿ 10, ಬೀದರ್ 1, ಗುಲ್ಬರ್ಗಾ 10, ಚಿಕ್ಕಮಗಳೂರು 4 ಹಾಗೂ ಹಾಸನದಲ್ಲಿ 4 ಪ್ರದರ್ಶನಗಳು ಆಯೋಜನೆಯಾಗಿದ್ದು, ನಿಮ್ಮ ನಗರಗಳಲ್ಲೇ ಕನ್ನಡದಲ್ಲಿ ದೃಶ್ಯಂ 3 ಪ್ರದರ್ಶನವಾಗುತ್ತಿದೆ. ಹೀಗಾಗಿ ಮಲಯಾಳಂನಲ್ಲಿ ಚಿತ್ರವನ್ನು ನೋಡುವ ಬದಲು ಕನ್ನಡದಲ್ಲಿ ವೀಕ್ಷಿಸಿ ಡಬಿಂಗ್ ಬೆಂಬಲಿಸಿ ಹಾಗೂ ರಿಮೇಕ್ ತೊಡೆದುಹಾಕಿ.

