ಬೆಂಗಳೂರು : ನೆರೆಮನೆಯವರ ಮೇಲೆ ವರದಕ್ಷಿಣೆ ಕಿರುಕುಳ ಕೇಸ್ ಹಾಕುವಂತಿಲ್ಲ ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಪ್ರಕರಣವೊಂದರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠ ಈ ಆದೇಶ ಹೊರಡಿಸಿದೆ.
ವರದಕ್ಷಿಣೆ ಕಿರುಕುಳ ನೀಡಲು ಪತಿ ಹಾಗೂ ಅವರ ಮನೆಯವರಿಗೆ ನೆರೆಹೊರೆಯವರು ಪ್ರಚೋದನೆ ನೀಡಿದ್ದಾರೆ ಎಂದು ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣದ ರದ್ದು ಕೋರಿ ನೆರೆಹೊರೆಯವರಾದ ಮಹಾಲಕ್ಷ್ಮಿ ಪುರದ ಭೋವಿಪಾಳ್ಯದ ನಿವಾಸಿ ಆಶಾ ಎಂಬವರು ಅರ್ಜಿ ಸಲ್ಲಿಸಿದ್ದರು. ಈ ಪ್ರಕರಣದ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ತೀರ್ಪು ಪ್ರಕಟಿಸಿದೆ.
ಮಹಿಳೆಯೋರ್ವರು ವರದಕ್ಷಿಣೆ ಕಿರುಕುಳ ಆರೋಪದಲ್ಲಿ ತನ್ನ ಪತಿ, ಅತ್ತೆ, ಮಾವ, ನಾದಿನಿ ಮತ್ತು ನೆರೆಹೊರೆಯವರಾಗಿರುವ ಅರ್ಜಿದಾರ ಅಶಾ ಎಂಬವರ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪದಲ್ಲಿ ಮಹಾಲಕ್ಷ್ಮೀ ಬಡಾವಣೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಸಂಬಂಧ ತನಿಖೆ ನಡೆಸಿದ್ದ ಪೊಲೀಸರು, ಅರ್ಜಿದಾರರು ಸೇರಿದಂತೆ ಇತರರ ವಿರುದ್ಧ ಎಫ್ ಐ ಆರ್ ದಾಖಲಿಸಿದ್ದರು. ಆದ್ದರಿಂದ ತಮ್ಮ ವಿರುದ್ಧ ದಾಖಲಾಗಿರುವ ಎಫ್ಐಆರ್ ಪ್ರಶ್ನಿಸಿ ಆಶಾ ಹೈಕೋರ್ಟ್ ಮೆಟ್ಟಿಲೇರಿದ್ದರು.
ಪತಿ, ಪತ್ನಿ ಸೇರಿದಂತೆ ಇತರೆ ಕುಟುಂಬಸ್ಥರ ನಡುವಿನ ಕೌಟುಂಬಿಕ ಕಲಹದಲ್ಲಿ ಐಪಿಸಿ ಸೆಕ್ಷನ್ 498A (ಪತಿ ಮತ್ತವರ ಕುಟುಂಬಸ್ಥರಿಂದ ಕೌಟುಂಬಿಕ ದೌರ್ಜನ್ಯ ಮತ್ತು ವರದಕ್ಷಿಣೆ ಕಿರುಕುಳ) ಅಡಿಯಲ್ಲಿ ನೆರೆಹೊರೆಯವರ ವಿರುದ್ಧ ಪ್ರಕರಣ ದಾಖಲಿಸುವುದಕ್ಕೆ ಅವಕಾಶವಿಲ್ಲ ಎಂದು ಹೈಕೋರ್ಟ್ ತಿಳಿಸಿದೆ.
ಐಪಿಸಿ ಸೆಕ್ಷನ್ 498A ಅಡಿಯಲ್ಲಿ ಅಪರಾಧಕ್ಕೆ ನೆರೆಹೊರೆಯವರನ್ನು ಸಿಲುಕಿಸುವುದಕ್ಕೆ ಅವಕಾಶವಿಲ್ಲ ಎಂಬುದಾಗಿ ರಮೇಶ್ ಕನ್ನೋಜಿಯಾ ಮತ್ತಿತರರ ವಿರುದ್ಧದ ಉತ್ತರಾಖಂಡ ರಾಜ್ಯ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ತಿಳಿಸಿದೆ. ಆದ್ದರಿಂದ ಅರ್ಜಿದಾರರ ವಿರುದ್ಧ ಮುಂದಿನ ವಿಚಾರಣೆಗೆ ಅನುಮತಿ ನೀಡುವುದು ಕಾನೂನು ಪ್ರಕ್ರಿಯೆಯ ದುರುಪಯೋಗವಾಗಲಿದ್ದು, ನ್ಯಾಯದ ಉಲ್ಲಂಘನೆಗೆ ಕಾರಣವಾಗಲಿದೆ ಎಂದು ಪೀಠ ಆದೇಶದಲ್ಲಿ ತಿಳಿಸಿದೆ.

