ಬೆಂಗಳೂರು : ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ ದುರಂತ ಸಂಭವಿಸಿದ್ದು, ರೈಲು ಡಿಕ್ಕಿಯಾಗಿ ವೃದ್ಧೆ ಹಾಗೂ ಆಕೆಯ ಇಬ್ಬರು ಮೊಮ್ಮಕ್ಕಳು ಮೃತಪಟ್ಟಿದ್ದಾರೆ.
ದೊಡ್ಡಬಳ್ಳಾಪುರ ನಗರದ ರೈಲ್ವೆ ನಿಲ್ದಾಣದ ಬಳಿ ಈ ದುರ್ಘಟನೆ ಸಂಭವಿಸಿದೆ. ಹಳಿ ದಾಟುತ್ತಿದ್ದ ವೇಳೆ ರೈಲು ಡಿಕ್ಕಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಮೃತರನ್ನು ಇರ್ಫಾನಾ (46) , ಹಾಗೂ ಮೊಮ್ಮಕ್ಕಳಾದ ರುಕಿಯಾ (13) ಹಾಗೂ ರಾಕಿಯಾ (8) ಎಂದು ಗುರುತಿಸಲಾಗಿದೆ.
ರಜೆ ಹಿನ್ನೆಲೆಯಲ್ಲಿ ಹಿಂದೂಪುರದಿಂದ ಅಜ್ಜಿ ಮನೆಗೆ ಇಬ್ಬರು ಮೊಮ್ಮಕ್ಕಳು ಬಂದಿದ್ದರು ಎನ್ನಲಾಗಿದೆ. ರಜೆ ಮುಗಿದ ಹಿನ್ನೆಲೆಯಲ್ಲಿ ಅಜ್ಜಿಯೊಂದಿಗೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.
ರೈಲ್ವೆ ಹಳಿ ದಾಟುತ್ತಿದ್ದ ಸಂದರ್ಭದಲ್ಲಿ ವೇಗವಾಗಿ ಬಂದ ರೈಲು ಡಿಕ್ಕಿ ಹೊಡೆದಿದೆ ಎನ್ನಲಾಗಿದ್ದು, ಘಟನೆಯಿಂದ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಯಶವಂತಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.

