ಆಧುನಿಕ ಜೀವನಶೈಲಿಯಲ್ಲಿ ದೀರ್ಘಕಾಲ ಒಂದೇ ಕಡೆ ಕುಳಿತು ಕೆಲಸ ಮಾಡುವುದು ಅನಿವಾರ್ಯವಾಗಿದೆ. ಆದರೆ ಈ ಅಭ್ಯಾಸವು ಕೇವಲ ಬೆನ್ನುನೋವು ಅಥವಾ ಬೊಜ್ಜಿಗೆ ಮಾತ್ರವಲ್ಲದೆ, ಮೂತ್ರ ವಿಸರ್ಜನೆಗೆ ಸಂಬಂಧಿಸಿದ ಗಂಭೀರ ಸಮಸ್ಯೆಗಳಿಗೂ ಕಾರಣವಾಗಬಹುದು ಎಂದು ಇತ್ತೀಚಿನ ಆರೋಗ್ಯ ಸಂಶೋಧನೆಗಳು ಎಚ್ಚರಿಸುತ್ತಿವೆ. ಗಂಟೆಗಟ್ಟಲೆ ಕದಲದೆ ಕುಳಿತುಕೊಳ್ಳುವುದರಿಂದ ಮೂತ್ರನಾಳದ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತದೆ.
ದೀರ್ಘಕಾಲದವರೆಗೆ ಕುಳಿತುಕೊಳ್ಳುವುದರಿಂದ ಸೊಂಟದ ಭಾಗದ ಸ್ನಾಯುಗಳು ಹಾಗೂ ಮೂತ್ರಕೋಶವನ್ನು ನಿಯಂತ್ರಿಸುವ ಶ್ರೋಣಿ ಕುಹರದ ಸ್ನಾಯುಗಳು ದರ್ಬಲಗೊಳ್ಳುತ್ತವೆ. ಇದು ಮೂತ್ರದ ಹರಿವಿನ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಕೆಲವರಲ್ಲಿ ಮೂತ್ರ ವಿಸರ್ಜನೆಯ ಸಮಯದಲ್ಲಿ ತೊಂದರೆ, ಸರಿಯಾಗಿ ಮೂತ್ರ ಹೊರಹೋಗದಿರುವುದು ಅಥವಾ ಪದೇ ಪದೇ ಮೂತ್ರ ವಿಸರ್ಜನೆಗೆ ಮುಖ ಮಾಡಬೇಕಾದ ಪರಿಸ್ಥಿತಿ ಎದುರಾಗುತ್ತದೆ. ವಿಶೇಷವಾಗಿ ಪುರುಷರಲ್ಲಿ ಇದು ಪ್ರೋಸ್ಟೇಟ್ ಗ್ರಂಥಿಯ ಮೇಲೆ ಒತ್ತಡವನ್ನು ಉಂಟುಮಾಡಿ ಸಮಸ್ಯೆಯನ್ನು ಇನ್ನಷ್ಟು ಉಲ್ಬಣಗೊಳಿಸಬಹುದು.
ಅಲ್ಲದೆ, ಕುಳಿತಲ್ಲೇ ಇರುವುದರಿಂದ ದೇಹದಲ್ಲಿ ರಕ್ತ ಪರಿಚಲನೆ ಕಡಿಮೆಯಾಗುತ್ತದೆ ಮತ್ತು ಮೂತ್ರಕೋಶದಲ್ಲಿ ದ್ರವದ ಶೇಖರಣೆಯಾಗಿ ಸೋಂಕುಗಳು ಉಂಟಾಗುವ ಸಾಧ್ಯತೆ ಹೆಚ್ಚಿರುತ್ತದೆ. ನಿಯಮಿತವಾಗಿ ದೈಹಿಕ ಚಟುವಟಿಕೆ ಇಲ್ಲದಿರುವುದು ಮತ್ತು ಕಡಿಮೆ ನೀರು ಕುಡಿಯುವುದು ಈ ರೋಗಲಕ್ಷಣಗಳನ್ನು ಮತ್ತಷ್ಟು ತೀವ್ರಗೊಳಿಸುತ್ತದೆ. ಐಟಿ ಉದ್ಯೋಗಿಗಳು, ಚಾಲಕರು ಮತ್ತು ಡೆಸ್ಕ್ ಕೆಲಸ ಮಾಡುವವರು ಈ ನಿಟ್ಟಿನಲ್ಲಿ ಹೆಚ್ಚಿನ ಜಾಗ್ರತೆ ವಹಿಸಬೇಕಾಗಿದೆ.
ಈ ಸಮಸ್ಯೆಯಿಂದ ದೂರವಿರಲು ಪ್ರತಿ ಒಂದು ಗಂಟೆಗೆ ಒಮ್ಮೆ ಐದು ನಿಮಿಷಗಳ ಕಾಲ ಎದ್ದು ನಿಲ್ಲುವುದು ಅಥವಾ ನಡೆಯುವ ಅಭ್ಯಾಸ ಮಾಡಿಕೊಳ್ಳಬೇಕು. ದಿನವಿಡೀ ದೇಹಕ್ಕೆ ಅಗತ್ಯವಿರುವಷ್ಟು ನೀರನ್ನು ಕುಡಿಯುವುದು ಮತ್ತು ಶ್ರೋಣಿ ಕುಹರದ ಸ್ನಾಯುಗಳನ್ನು ಬಲಪಡಿಸುವ ಸರಳ ವ್ಯಾಯಾಮಗಳನ್ನು ಮಾಡುವುದರಿಂದ ಮೂತ್ರನಾಳದ ಆರೋಗ್ಯವನ್ನು ಉತ್ತಮವಾಗಿಟ್ಟುಕೊಳ್ಳಬಹುದು ಎಂದು ವೈದ್ಯರು ಸಲಹೆ ನೀಡುತ್ತಾರೆ.

