ಬೆಂಗಳೂರು: ಮುಖ್ಯಮಂತ್ರಿಯಾಗಿ ವಿಧಾನಸೌಧದ ಮುಂಭಾಗ ಗ್ರ್ಯಾಂಡ್ ಸ್ಟೆಪ್ಸ್ ಮೇಲೆ ಪ್ರಮಾಣ ವಚನ ಸ್ವೀಕರಿಸುವ ಡಿ.ಕೆ. ಶಿವಕುಮಾರ್ ಕನಸು ಕೊನೆ ಕ್ಷಣದಲ್ಲಿ ಲೋಕಭವನ ಅಂಗಳಕ್ಕೆ ಶಿಫ್ಟ್ ಆಗಿದೆ.
ಡಿ.ಕೆ. ಶಿವಕುಮಾರ್ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಅಪಾರ ಬೆಂಬಲಿಗರು, ಅಭಿಮಾನಿಗಳು, ಪಕ್ಷದ ಕಾರ್ಯಕರ್ತರು ಆಗಮಿಸಲಿದ್ದು, ಲಕ್ಷಾಂತರ ಮಂದಿ ಸೇರುವ ನಿರೀಕ್ಷೆಯಲ್ಲಿ ಗುಪ್ತಚರ ಇಲಾಖೆ ಮುನ್ನೆಚ್ಚರಿಕೆ ವರದಿ ನೀಡಿರುವುದನ್ನು ಆಧರಿಸಿ ಕಾರ್ಯಕ್ರಮವನ್ನು ಸರಳವಾಗಿ ನಡೆಸಲಾಗುತ್ತಿದೆ.
ಪ್ರಮಾಣವಚನ ಸಮಾರಂಭಕ್ಕೆ ಆಗಮಿಸಲು ಸಾವಿರಾರು ಬಸ್ ಗಳು ಬುಕ್ ಆಗಿರುವ ಮಾಹಿತಿ ದೊರೆತಿದ್ದು, ವಿಧಾನಸೌಧ ಮುಂಭಾಗದಲ್ಲಿ ದೊಡ್ಡ ಪ್ರಮಾಣದಲ್ಲಿ ಲಕ್ಷಾಂತರ ಜನ ಸೇರಿ ಜನ ಜಂಗುಳಿ ಸೃಷ್ಟಿಯಾಗಲಿದೆ. ಇತ್ತೀಚೆಗೆ ಆರ್.ಸಿ.ಬಿ. ವಿಜಯೋತ್ಸವದ ವೇಳೆ ಕಾಲ್ತುಳಿತ ದುರಂತ ಘಟನೆ ಗಮನದಲ್ಲಿಟ್ಟುಕೊಂಡು ರಾಜಭವನದಲ್ಲಿ ಸರಳ ಸಮಾರಂಭದಲ್ಲಿ ಪದಗ್ರಹಣ ಸಮಾರಂಭ ನಡೆಯಲಿದೆ.
ಇನ್ನು ಹೈಕಮಾಂಡ್ ಕೂಡ ಈ ಬಗ್ಗೆ ಸೂಚನೆ ನೀಡಿದೆ. ಅದ್ಧೂರಿ ಸಮಾರಂಭ ಮಾಡದೇ ಸರಳವಾಗಿ ಪ್ರಮಾಣ ವಚನ ಸ್ವೀಕರಿಸುವ ಬಗ್ಗೆ ಹೈಕಮಾಂಡ್ ತಿಳಿಸಿದೆ ಎನ್ನಲಾಗಿದೆ.
ಸಿದ್ದರಾಮಯ್ಯ ಪದತ್ಯಾಗದ ಪರಿಣಾಮ ಅರಿತಿರುವ ಹೈಕಮಾಂಡ್ ಸರಳವಾಗಿ ಸರಳ ಸ್ವಾಭಾವಿಕ ಪ್ರಕ್ರಿಯೆಯಂತೆ ಪ್ರಮಾಣ ವಚನ ಇರಬೇಕೆಂದು ಡಿ.ಕೆ. ಶಿವಕುಮಾರ್ ಗೆ ತಿಳಿಸಿದೆ. ಸಿದ್ದರಾಮಯ್ಯ ಇಳಿಸಿ ಡಿ.ಕೆ. ಶಿವಕುಮಾರ್ ಗೆ ಪಟ್ಟ ಕಟ್ಟುತ್ತಿರುವ ಕಾರ್ಯಕ್ರಮ ನಮ್ಮವರನ್ನೇ ಇಳಿಸಿ ಮತ್ತೊಬ್ಬರನ್ನು ಮುಖ್ಯಮಂತ್ರಿ ಮಾಡಲಾಗುತ್ತಿದೆ. ಇದು ಸಂಭ್ರಮಪಡುವ ವಿಚಾರವಲ್ಲ ಎಂದು ಹೈಕಮಾಂಡ್ ಸೂಚಿಸಿದೆ. ಹೀಗಾಗಿ ಸರಳ ಪ್ರಕ್ರಿಯೆ ರೀತಿ ಪ್ರಮಾಣವಚನ ಕಾರ್ಯಕ್ರಮಕ್ಕೆ ನಿರ್ಧಾರ ಕೈಗೊಳ್ಳಲಾಗಿದೆ. ಆ ಕಾರಣಕ್ಕೆ ವಿಧಾನಸೌಧದಿಂದ ಲೋಕಭವನಕ್ಕೆ ಕಾರ್ಯಕ್ರಮ ಸ್ಥಳಾಂತರಿಸಲಾಗಿದೆ.
ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ರಾಜ್ಯಾದ್ಯಂತ ಜಂಟಿ ಯಾತ್ರೆ ಕೈಗೊಳ್ಳಲಿದ್ದಾರೆ. ಕನಿಷ್ಠ ಎಂಟರಿಂದ ಹತ್ತು ಕಡೆ ಜನಾಶೀರ್ವಾದ ಯಾತ್ರೆ ನಡೆಸಲು ಹೈಕಮಾಂಡ್ ಸೂಚನೆ ನೀಡಿದೆ. ಎರಡರಿಂದ ಮೂರು ಜಿಲ್ಲೆ ಅಥವಾ ಪ್ರಾದೇಶಿಕವಾರು ಜನಾಶೀರ್ವಾದ ಯಾತ್ರೆ ನಡೆಸಲಾಗುವುದು. ನಾನೇ ಒಪ್ಪಿ ಡಿಕೆಗೆ ಪಟ್ಟ ಕಟ್ಟಿದ್ದೇನೆ ಎಂದು ಸಿದ್ದರಾಮಯ್ಯ ತಿಳಿಸಲಿದ್ದಾರೆ. ಮುಂದೆ ಗೊಂದಲ ಆಗಬಾರದು ಎಂಬ ಕಾರಣಕ್ಕೆ ಹೈಕಮಾಂಡ್ ಈ ನಿರ್ಧಾರ ಕೈಗೊಂಡಿದೆ ಎನ್ನಲಾಗಿದೆ.

