ತಮಿಳುನಾಡು ವಿಧಾನಸಭಾ ಚುನಾವಣೆ-2026 ವೇಳಾಪಟ್ಟಿ ಮಾರ್ಚ್‌ನಲ್ಲಿ ಘೋಷಣೆಯಾಗಲಿದೆ. ಚುನಾವಣೆ ತಯಾರಿ ಆರಂಭಿಸಿರುವ ರಾಜ್ಯದ ಆಡಳಿತ ಪಕ್ಷ ಡಿಎಂಕೆ ಮುಂದಿನ ಚುನಾವಣೆ ಸೀಟು ಹಂಚಿಕೆ ಮಾತುಕತೆಯನ್ನು ಆರಂಭಿಸಿದೆ. ಕಾಂಗ್ರೆಸ್ ಮತ್ತು ಡಿಎಂಕೆ ನಡುವಿನ ಸೀಟು ಹಂಚಿಕೆ ಮಾತುಕತೆ ಕುತೂಹಲಕ್ಕೆ ಕಾರಣವಾಗಿದೆ.
ತಮಿಳುನಾಡಿನ ಒಟ್ಟು 234 ಸ್ಥಾನಗಳಿಗೆ ಮಾರ್ಚ್ ಅಂತ್ಯ ಅಥವ ಏಪ್ರಿಲ್‌ನಲ್ಲಿ ಚುನಾವಣೆ ನಡೆಯಲಿದೆ. ರಾಜ್ಯದ ಹಾಲಿ ಆಡಳಿತ ಪಕ್ಷ ಡಿಎಂಕೆ, ಎಂ.ಕೆ.ಸ್ಟಾಲಿನ್ ಮುಖ್ಯಮಂತ್ರಿ. ದ್ರಾವಿಡ ಮುನ್ನೇಟ್ರಾ ಕಳಗಂ (ಡಿಎಂಕೆ) ಹೊರತುಪಡಿಸಿ ಜಾತ್ಯತೀತ ಪ್ರಗತಿಪರ ಮೈತ್ರಿಕೂಟ (ಎಸ್‌ಪಿಎ)ದಲ್ಲಿ ಕಾಂಗ್ರೆಸ್, ಭಾರತೀಯ ಕಮ್ಯುನಿಸ್ಟ್ ಪಕ್ಷ ಮಾರ್ಕ್ಸ್‌ವಾದಿ (CPI-M) ಭಾರತೀಯ ಕಮ್ಯುನಿಸ್ಟ್ ಪಕ್ಷ (CPI) ಮತ್ತು ವಿಡುದಲೈ ಚಿರುತ್ತೈಗಳ್ ಕಚ್ಚಿ (VCK) ಪಕ್ಷಗಳಿವೆ.
ಮಾಹಿತಿಗಳ ಪ್ರಕಾರ ಎಐಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ರಾಹುಲ್ ಗಾಂಧಿ ಪರಮಾಪ್ತ ನಾಯಕ ಕೆ.ಸಿ.ವೇಣುಗೋಪಾಲ್ ಭಾನುವಾರ ಎಂ.ಕೆ.ಸ್ಟಾಲಿನ್ ಭೇಟಿ ಮಾಡಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಹೆಚ್ಚು ಸೀಟು ನೀಡಬೇಕು, ಅಧಿಕಾರ ಹಂಚಿಕೆ ಸೂತ್ರ ಅಂತಿಮಗೊಳಿಸಬೇಕು ಎಂಬುದು ಕಾಂಗ್ರೆಸ್ ನಾಯಕರ ಬೇಡಿಕೆಯಾಗಿದೆ.
ಆದರೆ ಅಧಿಕಾರ ಹಂಚಿಕೆ ಸೂತ್ರದ ಕುರಿತು ಸದ್ಯಕ್ಕೆ ಚರ್ಚೆ ಬೇಡ ಎಂದು ಹೈಕಮಾಂಡ್ ನಾಯಕರು ಸೂಚನೆ ನೀಡಿರುವ ಕಾರಣ ಕಾಂಗ್ರೆಸ್ ಸೀಟುಗಳಿಗೆ ಬೇಡಿಕೆ ಇಟ್ಟಿದೆ. ಕನಿಷ್ಠ 50 ಸೀಟು ಬೇಕು ಎಂಬುದು ಕಾಂಗ್ರೆಸ್ ಬೇಡಿಕೆ. ಡಿಎಂಕೆ ಈ ಹಿಂದೆ 32 ಸೀಟು ನೀಡುವುದಾಗಿ ಹೇಳಿತ್ತು.
ಡಿಎಂಕೆ ಪಕ್ಷ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಜೊತೆಗೆ ಅಧಿಕೃತವಾಗಿ ಸೀಟು ಹಂಚಿಕೆ ಮಾತುಕತೆಗಳನ್ನು ಆರಂಭಿಸಿದ ದಿನವೇ, ಕಾಂಗ್ರೆಸ್ ಕೂಡ ತನ್ನ ನಿರೀಕ್ಷೆಗಳನ್ನು ಡಿಎಂಕೆ ಪಕ್ಷಕ್ಕೆ ತಿಳಿಸಿದೆ.
ಆದರೆ ಕಾಂಗ್ರೆಸ್ ಜೊತೆಗಿನ ಮಾತುಕತೆಗಳು ಮೂಲತಃ ಅಂದು ನಿಗದಿಯಾಗಿರಲಿಲ್ಲ. ಆದರೂ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅಲ್ವಾರ್‌ಪೇಟೆಯಲ್ಲಿರುವ ಡಿಎಂಕೆ ಅಧ್ಯಕ್ಷ ಹಾಗೂ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರ ನಿವಾಸಕ್ಕೆ ಭೇಟಿ ನೀಡಿದ್ದು, ಕುತೂಹಲಕ್ಕೆ ಕಾರಣವಾಗಿದೆ.
ರಾಜ್ಯ ಕಾಂಗ್ರೆಸ್ ನಾಯಕರು ಡಿಎಂಕೆ ಜೊತೆಗಿನ ಸೀಟು ಹಂಚಿಕೆ ಕುರಿತು ದಿನಕ್ಕೊಂದು ಹೇಳಿಕೆ ನೀಡುತ್ತಿದ್ದರು. ಆದ್ದರಿಂದ ಉಂಟಾಗಿದ್ದ ಗೊಂದಲ ಬಗೆಹರಿಸುವಂತೆ ರಾಹುಲ್ ಗಾಂಧಿ ಸೂಚನೆ ನೀಡಿದ ಕಾರಣಕ್ಕೆ ಕೆ.ಸಿ.ವೇಣುಗೋಪಾಲ್ ಭೇಟಿಯಾಗಿದ್ದಾರೆ ಎಂಬ ಮಾಹಿತಿ ಇದೆ.
ಸೀಟು ಹಂಚಿಕೆ, ಅಧಿಕಾರ ಹಂಚಿಕೆ ಸೂತ್ರಕ್ಕೆ ಡಿಎಂಕೆ ಒಪ್ಪದಿದ್ದರೆ ಕಾಂಗ್ರೆಸ್ ನಟ ವಿಜಯ್ ನೇತೃತ್ವದ ಟಿವಿಕೆ ಪಕ್ಷದ ಜೊತೆ ಮೈತ್ರಿ ಮಾಡಿಕೊಳ್ಳಲಿದೆ ಎಂಬ ಸುದ್ದಿ ಇತ್ತು. ಆದರೆ ಈ ಸುದ್ದಿಯನ್ನು ಕಾಂಗ್ರೆಸ್ ನಾಯಕರು ತಳ್ಳಿ ಹಾಕಿದ್ದರು.
ತಮಿಳುನಾಡಿನ ರಾಜಕೀಯ ಸಂಪ್ರದಾಯದಂತೆ ಮೈತ್ರಿಕೂಟದಲ್ಲಿ ಸೀಟು ಹಂಚಿಕೆ ಮಾತ್ರ. ಅಧಿಕಾರ ಹಂಚಿಕೆ ಇಲ್ಲ. ಈ ಕುರಿತು ರಾಹುಲ್ ಗಾಂಧಿ ಭೇಟಿಯ ಸಂದರ್ಭದಲ್ಲಿಯೇ ಸಂಸದೆ ಕನ್ನಿಮೋಳಿ ಸ್ಪಷ್ಟಪಡಿಸಿದ್ದರು. ಆದ್ದರಿಂದ ಅಧಿಕಾರ ಹಂಚಿಕೆ ಸೂತ್ರವನ್ನು ಸದ್ಯಕ್ಕೆ ಕೈಬಿಡಲಾಗಿದೆ ಎಂಬ ಮಾಹಿತಿ ಇದೆ.

