ಬೆಂಗಳೂರು: ಸಾಮಾಜಿಕ ನ್ಯಾಯ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಅಮಿ ನಡುವೆ ಆರಂಭವಾಗಿರುವ ಜಟಾಪಟಿ ವಿಚಾರವಾಗಿ ಪ್ರತಿಕ್ರಿಯಿಸಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಸಿಎಂ ಸಿದ್ದರಾಮಯ್ಯ ಅವರ ರಾಜಕೀಯ ಅಡಿಪಾಯವೇ ಸಾಮಾಜಿಕ ನ್ಯಾಯ ಎಂದು ಹೇಳುವ ಮೂಲಕ ಸಿದ್ದರಾಮಯ್ಯ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಗೃಹ ಸಚಿವ ಪರಮೇಶ್ವರ್, ಸಿದ್ದರಾಮಯ್ಯ ಅವರು ಸಾಮಾಜಿಕ ನ್ಯಾಯಕ್ಕೆ ಬದ್ಧರಾಗಿದ್ದಾರೆ. ಅವರ ಇಡೀ ಜೀವನ ಸಾಮಾಜಿಕ ನ್ಯಾಯದ ಸಿದ್ಧಂತದಡಿಯೇ ರಾಜಕಾರಣ ಮಾಡಿಕೊಂಡು ಬಂದಿರುವುದು. ಅದರಲ್ಲಿ ಹೊಸದೇನೂ ಇಲ್ಲ. ಅವರ ರಾಜಕೀಯ ಅಡಿಪಾಯವೇ ಸಾಮಾಜಿಕ ನ್ಯಾಯ ಎಂದು ತಿಳಿಸಿದರು.
ಸಿದ್ದರಾಮಯ್ಯನವರು ಮೊದಲು ಜೆಡಿಎಸ್ ನಲ್ಲಿದ್ದರು. ಪಕ್ಷದ ಅಧ್ಯಕ್ಷರಾಗಿದ್ದರು. ಬಳಿಕ ಅವರನ್ನು ಪಕ್ಷದಿಂದ ಹೊರಗೆ ಹಾಕಿದರು. ಏನೆಲ್ಲ ವಿಚಾರಗಳಿವೆಯೋ ಅದು ನಮಗೆ ತಿಳಿದಿಲ್ಲ. ಅವರಿಬ್ಬರ ವಾಕ್ಸಮರದ ಬಗ್ಗೆ ನಾನು ಉತ್ತರಿಸಲು ಆಗಲ್ಲ ಎಂದರು.
ಅಧಿಕಾರ ಹಸ್ತಾಂತರ ವಿಚಾರದ ನಡುವೆಯೇ ಸಚಿವ ಮಹದೇವಪ್ಪ ದಲಿತ ಸಿಎಂ ಹೇಳಿಕೆಗಳನ್ನು ಕೊಡುತ್ತಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಪರಮೇಶ್ವರ್, ದಲಿತರನ್ನು ಸಿಎಂ ಮಾಡೋದು ಕಾಂಗ್ರೆಸ್ ಪಕ್ಷನೇ ಇನ್ಯಾರು ಮಾಡ್ತಾರೆ? ಯಾವಾಗ ದಲಿತ ಸಿಎಂ ಮಾಡಬೇಕು ಎಂಬುದನ್ನು ಹೈಕಮಾಂಡ್ ತೀರ್ಮಾನ ಮಾಡುತ್ತದೆ. ವಿಪಕ್ಷಗಳು ತಮ್ಮ ಹುಳುಕು ಮುಚ್ಚಿಕೊಳ್ಳಲು ದಲಿತ ಸಿಎಂ ಕೂಗು ತಂದಿದ್ದಾರೆ ಎಂದರು.

