ಬೆಂಗಳೂರು: ಎಲ್ಲಾ ವಿಚಾರಗಳಲ್ಲಿಯೂ ತಪ್ಪು ಹುಡುಕುವುದೇ ಬಿಜೆಪಿಯವರ ಪ್ರವೃತ್ತಿ. ಬಿಜೆಪಿಯವರ ಎದೆ ಸೀಳಿದರೆ ರಾಜ್ಯದ ಹಿತ ಕಾಯುವ ಯಾವ ಅಂಶವೂ ಇಲ್ಲ. ಅವರದ್ದು ಕೇವಲ ರಾಜಕೀಯ ಮನಸ್ಥಿತಿ. ಅವರನ್ನು ಸರಿಪಡಿಸಲು ಆಗುವುದಿಲ್ಲ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕಿಡಿಕಾರಿದ್ದಾರೆ.
ಕೆ ಆರ್ ವೃತ್ತದಲ್ಲಿ ಸರ್ ಎಂ ವಿಶ್ವೇಶ್ವರಯ್ಯ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ ಡಿ.ಕೆ.ಶಿವಕುಮಾರ್, ವಂದೇ ಮಾತರಂ ವಿಚಾರವಾಗಿ ಬಿಜೆಪಿ ಹೋರಾಟಕ್ಕೆ ಕರೆ ನೀಡಿರುವ ವಿಚಾರವಾಗಿ, ಎಲ್ಲದರಲ್ಲೂ ತಪ್ಪು ಕಂಡುಹಿಡಿಯುವ ಪ್ರವೃತ್ತಿ ಬಿಜೆಪಿ ನಾಯಕರದ್ದು. ಒಬ್ಬ ಪೊಲೀಸ್ ಅಧಿಕಾರಿ ಏನು ತಪ್ಪು ಮಾತನಾಡಿದ್ದಾರೆ? ಯಾವುದೇ ಅಹಿತಕರ ಘಟನೆ ನಡೆಯಬಾರದು ಎಂದು ಎಚ್ಚರಿಕೆ ಮಾತುಗಳನ್ನು ಆಡಿದ್ದಾರೆ. ಅದಕ್ಕೆ ಬಿಜೆಪಿಯವರು ಮಹಾರಾಜರನ್ನು ಬೀದಿಗೆ ತಂದು ನಿಲ್ಲಿಸಿದ್ದಾರೆ ಎಂದರು.
ಪಂಚಾಯಿತಿ ಮಟ್ಟದ ವಿಚಾರಕ್ಕೆ ವಿರೋಧ ಪಕ್ಷದ ನಾಯಕರು ಹೋಗಿದ್ದು, ಅವರು ಈ ಮಟ್ಟಕ್ಕೆ ಇಳಿದಿದ್ದು ಯಾಕೆ ಎಂದು ನನಗೆ ಗೊತ್ತಿಲ್ಲ. ವಿರೋಧ ಪಕ್ಷದ ನಾಯಕ ಸ್ಥಾನ ಸಂವಿಧಾನಿಕ ಹುದ್ದೆ. ಅವರಿಂದ ಇನ್ನು ಉನ್ನತ ನಡೆ ನಿರೀಕ್ಷೆ ಮಾಡುತ್ತಿದ್ದೇನೆ ಎಂದು ತಿಳಿಸಿದರು.
ಅವರು ಹೇಳಿದರು ಎಂದು ಪ್ರಹ್ಲಾದ್ ಜೋಶಿಯಿಂದ ಹಿಡಿದು ಎಲ್ಲರೂ ಟ್ವೀಟ್ ಮಾಡಿದ್ದಾರೆ. ಸಮಾಜದಲ್ಲಿ ಕಾನೂನು ಪಾಲನೆ ಮಾಡಬೇಕಾಗಿರುವುದು ಯಾರು? ಬಿಜೆಪಿಯವರು ಜನರನ್ನ ಪ್ರಚೋದನೆ ಮಾಡುವ ಕೆಲಸ ಮಾಡುತ್ತಿದ್ದು, ಇನ್ನಾದರೂ ಇದನ್ನು ಬಿಡಲಿ. ಭಾರತವನ್ನು ಕರ್ನಾಟಕದ ಮೂಲಕ ಗೌರವ ಸಿಗುತ್ತಿದ್ದು, ಇಲ್ಲಿ ಅಹಿತಕರ ಘಟನೆ ನಡೆದರೆ ತೊಂದರೆ ಆಗುವುದು ಭಾರತಕ್ಕೆ. ಪ್ರಧಾನ ಮಂತ್ರಿಗಳು ದೇಶದ ಬಗ್ಗೆ ಕಾಣುತ್ತಿರುವ ಕನಸಿಗೆ ಇಲ್ಲಿನ ಬಿಜೆಪಿ ನಾಯಕರು ಧಕ್ಕೆ ತರುವಂತೆ ರಾಜಕಾರಣ ಮಾಡುತ್ತಿದ್ದಾರೆ. ರಾಜಕೀಯ ಮಾಡುವುದನ್ನು ಮಾಡಿ, ಹೋರಾಟ ಮಾಡಿ. ಆದರೆ ಅಶಾಂತಿ ಮೂಡಿಸಿ, ರಾಜ್ಯಕ್ಕೆ ಕೆಟ್ಟ ಹೆಸರು ತರುವ ಕೆಲಸ ಮಾಡಬೇಡಿ ಎಂದು ಮನವಿ ಮಾಡುವೆ ಎಂದು ತಿಳಿಸಿದರು.
ರಾಜ್ಯದಲ್ಲಿ ಬರವಿದೆ. ಶಾಸಕರು ಆತಂಕಪಡುವ ಅಗತ್ಯವಿಲ್ಲ. ರಾಜಕೀಯಕ್ಕಾಗಿ ಪ್ರತಿಭಟನೆ ಮಾಡುವುದರಲ್ಲಿ ಅರ್ಥವಿಲ್ಲ. ಕೆಲವರು ರಾಜಕೀಯಕ್ಕೆ ಈ ಪರಿಸ್ಥಿತಿ ಬಳಸಿಕೊಳ್ಳುತ್ತಿದ್ದಾರೆ. ಕೇಂದ್ರ ಸರ್ಕಾರ ಪರಿಶೀಲನೆಗೆ ಬಂದಾಗ ವರದಿ ತಪ್ಪಾಗಿರಬಾರದು. ಕೆಲವು ಭಾಗದಲ್ಲಿ ಅಧ್ಯಯನ ಆಗಿದ್ದು, ಉಳಿದ ಕಡೆ ವರದಿ ಸಿದ್ಧವಾಗುತ್ತಿದೆ. ಒಂದು ವಾರ ಮಳೆ ಬೀಳುತ್ತದೆ ಎಂದು ಹವಾಮಾನ ಇಲಾಖೆ ಹೇಳಿತ್ತು, ಆದರೆ ಕೆಲ ಭಾಗದಲ್ಲಿ ಸ್ವಲ್ಪ ಮಳೆ ಆಗಿದ್ದು, ಹೇಳಿಕೊಳುವಂತೆ ಆಗಿಲ್ಲ. ವಿದ್ಯುತ್ ಸಮಸ್ಯೆ ಹೆಚ್ಚಾಗಿದೆ. ಜನರನ್ನು ಮಾನಸಿಕವಾಗಿ ಸಿದ್ಧಪಡಿಸಿ, ಕುಡಿಯುವ ನೀರು ಪೂರೈಕೆಗೆ ತಯಾರಿ ಮಾಡಿಕೊಳ್ಳಲಾಗುತ್ತಿದೆ. ಇದಕ್ಕಾಗಿಯೇ ವಿಶೇಷ ಅಧಿವೇಶನ ಕರೆಯಲಾಗಿದೆ. ರೈತರ ಜೊತೆ ಚರ್ಚೆ ಮಾಡಿ ಇನ್ನಷ್ಟು ಘೋಷಣೆ ಮಾಡಲಾಗುವುದು ಎಂದು ಹೇಳಿದರು.

