HomeKarnatakaಸುವರ್ಣ ಮಹೋತ್ಸವ ಸಮಾರಂಭದಲ್ಲಿ ಕಿಯೊನಿಕ್ಸ್ ಬಣ್ಣಿಸಿದ ಮುಖ್ಯಮಂತ್ರಿ ಡಿಕೆ ಶಿವಕುಮಾರ್‌

ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಕಿಯೊನಿಕ್ಸ್ ಬಣ್ಣಿಸಿದ ಮುಖ್ಯಮಂತ್ರಿ ಡಿಕೆ ಶಿವಕುಮಾರ್‌

ಬೆಂಗಳೂರು- “ಕರ್ನಾಟಕವು ನವೋದ್ಯಮ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ನಾಯಕತ್ವ ಸಾಧಿಸುವ ಸುದೀರ್ಘ ಪಯಣದ ಪ್ರಮುಖ ಭಾಗವಾಗಿರುವ ಕಿಯೊನಿಕ್ಸ್‌, ಮುಂದಿನ ದಿನಗಳಲ್ಲಿ ಕರ್ನಾಟಕದ ಪ್ರತಿಯೊಂದು ಭಾಗಕ್ಕೂ ತಂತ್ರಜ್ಞಾನ ಮೂಲಸೌಕರ್ಯ ಮತ್ತು ಅವಕಾಶಗಳು ತಲುಪುವಂತೆ ಮಾಡುವಲ್ಲಿ ಮಹತ್ವದ ಪಾತ್ರ ವಹಿಸಬೇಕಾಗಿದೆ” ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಹೇಳಿದರು.

ಸುವರ್ಣ ಮಹೋತ್ಸವದ ಉದ್ಘಾಟನೆ

ಇಂದು ಬೆಂಗಳಗರಿನಲ್ಲಿ ನಡೆದ ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮ ಲಿಮಿಟೆಡ್‌ನ (ಕಿಯೊನಿಕ್ಸ್‌) ಸುವರ್ಣ ಮಹೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

‘ಎಲೆಕ್ಟ್ರಾನಿಕ್‌ ಸಿಟಿಯ ಆರಂಭಿಕ ಅಡಿಪಾಯದಿಂದ ಹಿಡಿದು ಇಂದು ನಾವು ಕಾಣುತ್ತಿರುವ ತಂತ್ರಜ್ಞಾನದ ಅಗಾಧ ಪರಿವರ್ತನೆ ಹಾಗೂ ಸಾಧನೆಗೆ ಕಿಯೊನಿಕ್ಸ್‌ ಗಮನಾರ್ಹ ಕೊಡುಗೆ ನೀಡಿದೆ. ಕಿಯೊನಿಕ್ಸ್‌ನ ಐದು ದಶಕಗಳ ಯಶಸ್ವಿ ಪಯಣವು ಕರ್ನಾಟಕವು ಜಾಗತಿಕ ತಂತ್ರಜ್ಞಾನ ತಾಣವಾಗಿ ರೂಪುಗೊಂಡಿರುವ ದೊಡ್ಡ ಪರಿವರ್ತನೆಯನ್ನು ಪ್ರತಿಬಿಂಬಿಸುತ್ತದೆʼ ಎಂದು ಮುಖ್ಯಮಂತ್ರಿಗಳು ಹೇಳಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಗೃಹ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ಇ-ಆಡಳಿತ ಸಚಿವ ಪ್ರಿಯಾಂಕ್‌ ಖರ್ಗೆ ಅವರು ಮಾತನಾಡಿ, ‘ರಾಜ್ಯದ ತಂತ್ರಜ್ಞಾನ ಮಹತ್ವಾಕಾಂಕ್ಷೆಗಳ ಜೊತೆಗೆ ಕಿಯೊನಿಕ್ಸ್‌ನ ಪಾತ್ರವೂ ವಿಸ್ತರಿಸಿದೆ. ಕಿಯೊನಿಕ್ಸ್‌ ಐದು ದಶಕಗಳ ಇತಿಹಾಸ ಹೊಂದಿರುವ ಸಂಸ್ಥೆ ಮಾತ್ರವಷ್ಟೇ ಅಲ್ಲದೆ, ರಾಜ್ಯದ ತಂತ್ರಜ್ಞಾನ ಪರಿಸರ ವ್ಯವಸ್ಥೆಯಲ್ಲಿ ಪ್ರಮುಖ ಅನುಷ್ಠಾನ ಸಂಸ್ಥೆಯೂ ಆಗಿದೆ. ಮೂಲಸೌಕರ್ಯ ಮತ್ತು ಐಟಿ ಸೇವೆಗಳಿಂದ ಹಿಡಿದು ಕೌಶಲ ಅಭಿವೃದ್ಧಿ, ಡಿಜಿಟಲ್‌ ಆಡಳಿತ ಮತ್ತು ಹೊಸ ತಂತ್ರಜ್ಞಾನ ಉಪಕ್ರಮಗಳವರೆಗೆ, ರಾಜ್ಯದ ತಂತ್ರಜ್ಞಾನ ದೃಷ್ಟಿಕೋನವನ್ನು ತಳಮಟ್ಟದಲ್ಲಿ ಕಾರ್ಯರೂಪಕ್ಕೆ ತರುವುದೇ ಇಂದು ಕಿಯೊನಿಕ್ಸ್‌ನ ಪ್ರಮುಖ ಜವಾಬ್ದಾರಿಯಾಗಿದೆ’ ಎಂದು ಹೇಳಿದರು.

ಶರತ್‌ ಕುಮಾರ್‌ ಬಚ್ಚೇಗೌಡ ಅವರ ಭಾಷಣ

ಕಿಯೊನಿಕ್ಸ್‌ ಅಧ್ಯಕ್ಷರು ಹಾಗೂ ಹೊಸಕೋಟೆ ಶಾಸಕರೂ ಆಗಿರುವ ಶರತ್‌ ಕುಮಾರ್‌ ಬಚ್ಚೇಗೌಡ ಅವರು ಮಾತನಾಡಿ, ‘ಸುವರ್ಣ ಮಹೋತ್ಸವವು ಹಿಂದಿನ ಸಾಧನೆಗಳನ್ನು ಸಂಭ್ರಮಿಸುವುದರ ಜೊತೆಗೆ ಮುಂದಿನ ಬೆಳವಣಿಗೆಯ ಹಂತಕ್ಕೆ ಬದ್ಧತೆ ವ್ಯಕ್ತಪಡಿಸುವ ಸುಸಂದರ್ಭವಾಗಿದೆ’ ಎಂದು ಹೇಳಿದರು.

“ಕರ್ನಾಟಕದ ಅಗತ್ಯಗಳಿಗೆ ಅನುಗುಣವಾಗಿ ಕಿಯೊನಿಕ್ಸ್‌ ನಿರಂತರವಾಗಿ ಬದಲಾವಣೆಗೊಂಡಿದೆ. ಈಗ ನಮ್ಮ ಗಮನ ತಂತ್ರಜ್ಞಾನ ಮೂಲಸೌಕರ್ಯ ಬಲಪಡಿಸುವುದು, ಬೆಂಗಳೂರಿನಾಚೆಗೂ ಅವಕಾಶಗಳನ್ನು ಸೃಷ್ಟಿಸುವುದು, ಕೌಶಲ ಅಭಿವೃದ್ಧಿ ವಿಸ್ತರಿಸುವುದು ಮತ್ತು ಪ್ರವರ್ಧಮಾನಕ್ಕೆ ಬರುತ್ತಿರುವ ತಂತ್ರಜ್ಞಾನಗಳನ್ನು ಹೆಚ್ಚಿನ ಜನರಿಗೆ ತಲುಪಿಸುವುದರ ಮೇಲಿದೆ. ಮುಂದಿನ 50 ವರ್ಷಗಳು ತಂತ್ರಜ್ಞಾನದ ಪ್ರಯೋಜನಗಳನ್ನು ಕರ್ನಾಟಕದ ಪ್ರತಿಯೊಂದು ಪ್ರದೇಶ ಮತ್ತು ಸಮಾಜದ ಪ್ರತಿಯೊಂದು ವರ್ಗಕ್ಕೂ ತಲುಪಿಸುವುದರ ಬಗ್ಗೆ ಕೇಂದ್ರೀಕರಣಗೊಳ್ಳಲಿದೆ’ ಎಂದರು.

ಮಾಜಿ ಮುಖ್ಯಮಂತ್ರಿಗಳ ನೆನಪುಗಳು

ಕಿಯೊನಿಕ್ಸ್‌ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಮಾತನಾಡಿ ಕಿಯೊನಿಕ್ಸ್‌ ಸಂಸ್ಥೆಯನ್ನು ಹುಟ್ಟುಹಾಕಿದ ದಿನಗಳನ್ನು ನೆನಪು ಮಾಡಿಕೊಂಡರು.

ಶ್ರೀಮತಿ ಶಾಂತಿ ರಾಮಕೃಷ್ಣ ಬಾಳಿಗಾ, ಮಾಜಿ ವಿಧಾನ ಪರಿಷತ್‌ ಸದಸ್ಯ ಯು.ಬಿ. ವೆಂಕಟೇಶ್‌, ವಿರಾಜಪೇಟೆ ಶಾಸಕ ಎ.ಎಸ್‌. ಪೊನ್ನಣ್ಣ, ಕೆಡಿಇಎಂ ಅಧ್ಯಕ್ಷ ಬಿ.ವಿ. ನಾಯ್ಡು, ವಿದ್ಯುನ್ಮಾನ, ಐಟಿ, ಜೈವಿಕ ತಂತ್ರಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಡಾ. ಎನ್‌. ಮಂಜುಳಾ, ʼಇಎಲ್‌ಸಿಐಎʼ ಅಧ್ಯಕ್ಷೆ ನಂದಿನಿ ಬಿ. ಮತ್ತು ಕಿಯೊನಿಕ್ಸ್‌ ವ್ಯವಸ್ಥಾಪಕ ನಿರ್ದೇಶಕ ಡಾ. ಅವಿನಾಶ್‌ ಮೆನನ್‌ ರಾಜೇಂದ್ರನ್‌ ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಿದ್ದರು.

ಹೊಸ ಲಾಂಛನ ಅನಾವರಣ

ಹೊಸ ಲಾಂಛನ ಅನಾವರಣ

ಸುವರ್ಣ ಮಹೋತ್ಸವದ ಅಂಗವಾಗಿ ಕಿಯೊನಿಕ್ಸ್‌ನ ಹೊಸ ಲಾಂಛನ ಅನಾವರಣ, ಸಿಎಲ್‌ಟಿ ಮಾದರಿ ಬಿಡುಗಡೆ, ಐದು ದಶಕಗಳ ಪಯಣ ದಾಖಲಿಸುವ ಕಾಫಿ-ಟೇಬಲ್‌ ಪುಸ್ತಕ ಬಿಡುಗಡೆ, ಎಲೆಕ್ಟ್ರಾನಿಕ್‌ ಸಿಟಿ ಮತ್ತು ಕಿಯೊನಿಕ್ಸ್‌ನ ಮೊದಲ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಆರ್‌.ಕೆ. ಬಾಳಿಗಾ ಅವರ ಭಾವಚಿತ್ರ/ಪ್ರತಿಮೆ ಅನಾವರಣ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

ಪ್ರಾದೇಶಿಕ ತಂತ್ರಜ್ಞಾನದ ಅಭಿವೃದ್ಧಿ

ರಾಜ್ಯದಾದ್ಯಂತ ತಂತ್ರಜ್ಞಾನದ ಅವಕಾಶಗಳನ್ನು ವಿಸ್ತರಿಸುವಲ್ಲಿಯೂ ಸಂಸ್ಥೆ ತನ್ನ ಪಾತ್ರವನ್ನು ಮತ್ತಷ್ಟು ಬಲಪಡಿಸುತ್ತಿದೆ. 130ಕ್ಕೂ ಹೆಚ್ಚು ತರಬೇತಿ ಕೇಂದ್ರಗಳ ಮೂಲಕ 2019–20ರಿಂದ 2025–26ರ ಹಣಕಾಸು ವರ್ಷದ ಅವಧಿಯಲ್ಲಿ 1.39 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ತರಬೇತಿ ನೀಡಿ ಪ್ರಮಾಣಪತ್ರಗಳನ್ನು ನೀಡಲಾಗಿದೆ. ಇದೇ ವೇಳೆ, ಪ್ರಾದೇಶಿಕ ಕೇಂದ್ರಗಳಾದ್ಯಂತ ತನ್ನ ಐಟಿ ಮೂಲಸೌಕರ್ಯವನ್ನು ಕಿಯೊನಿಕ್ಸ್‌ ನಿರಂತರವಾಗಿ ವಿಸ್ತರಿಸುತ್ತಿದೆ.

ಸುವರ್ಣ ಮಹೋತ್ಸವವು ಕರ್ನಾಟಕದ ತಂತ್ರಜ್ಞಾನ ಕ್ಷೇತ್ರದ ಬೆಳವಣಿಗೆಗೆ ದಾರಿ ಮಾಡಿಕೊಟ್ಟ ದೂರದೃಷ್ಟಿಯನ್ನೂ ಸ್ಮರಿಸಿತು.

ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಅವರು , ಎಲೆಕ್ಟ್ರಾನಿಕ್‌ ಸಿಟಿಯ ಆರಂಭಿಕ ಪರಿಕಲ್ಪನೆಯ ಮಹತ್ವವನ್ನು ಸ್ಮರಿಸಿಕೊಂಡರು., ಅದರ ಅಭಿವೃದ್ಧಿಗೆ ಕಾರಣವಾದ ಆರಂಭಿಕ ದೂರದೃಷ್ಟಿಯ ಮಹತ್ವವನ್ನು ವಿವರಿಸಿದರು.

1976ರಲ್ಲಿ ಸ್ಥಾಪನೆಯಾದ ಕಿಯೊನಿಕ್ಸ್‌, ಎಲೆಕ್ಟ್ರಾನಿಕ್‌ ಸಿಟಿಯ ಅಭಿವೃದ್ಧಿಗೆ ಅಗತ್ಯವಾದ 332 ಎಕರೆ ಭೂಮಿಯ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿತು. ನಂತರದ ವರ್ಷಗಳಲ್ಲಿ ಎಲೆಕ್ಟ್ರಾನಿಕ್ಸ್‌ ಕ್ಷೇತ್ರದ ಉತ್ತೇಜನ ಸಂಸ್ಥೆಯಿಂದ ಸರ್ಕಾರ, ಕೈಗಾರಿಕೆ ಮತ್ತು ನಾಗರಿಕರಿಗೆ ತಂತ್ರಜ್ಞಾನ ಪಾಲುದಾರನಾಗಿ ಸಂಸ್ಥೆ ರೂಪಾಂತರಗೊಂಡಿದೆ.

ಸದ್ಯಕ್ಕೆ ಕಿಯೊನಿಕ್ಸ್‌ನ ಕಾರ್ಯವ್ಯಾಪ್ತಿಯು ಐಟಿ ಮೂಲಸೌಕರ್ಯ, ಡಿಜಿಟಲ್‌ ಸೇವೆಗಳು, ಸರ್ಕಾರಿ ತಂತ್ರಜ್ಞಾನ, ಕೌಶಲ ಅಭಿವೃದ್ಧಿ ಮತ್ತು ಡಿಜಿಟಲ್‌ ಖರೀದಿ ವ್ಯವಸ್ಥೆ ಸೇರಿದಂತೆ ಹಲವು ಕ್ಷೇತ್ರಗಳನ್ನು ಒಳಗೊಂಡಿದೆ. ಬೆಂಗಳೂರಿನಾಚೆಗೂ ತಂತ್ರಜ್ಞಾನದ ಅವಕಾಶಗಳನ್ನು ವಿಸ್ತರಿಸುವತ್ತ ಸಂಸ್ಥೆ ಹೆಚ್ಚಿನ ಗಮನ ಹರಿಸುತ್ತಿದೆ.

ಮುಂಬರುವ ತಂತ್ರಜ್ಞಾನ ಯೋಜನೆಗಳು

ಮುಂದಿನ ಪೀಳಿಗೆಯ ತಂತ್ರಜ್ಞಾನ ಮೂಲಸೌಕರ್ಯ ನಿರ್ಮಾಣ

ಕಿಯೊನಿಕ್ಸ್‌ ಆರನೇ ದಶಕಕ್ಕೆ ಕಾಲಿಡುತ್ತಿರುವ ಸಂದರ್ಭದಲ್ಲಿ, ಬೆಂಗಳೂರಿನಾಚೆಗೂ ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸುತ್ತಿದೆ.

ಕರ್ನಾಟಕದ ಪ್ರಾದೇಶಿಕ ತಂತ್ರಜ್ಞಾನ ಪರಿಸರ ವ್ಯವಸ್ಥೆ ಬಲಪಡಿಸುವ ಉದ್ದೇಶದಿಂದ ತಂತ್ರಜ್ಞಾನ ಮೂಲಸೌಕರ್ಯ, ಡಿಜಿಟಲ್‌ ಸೇವೆಗಳು, ಕೌಶಲ್ಯಾಭಿವೃದ್ಧಿ ಮತ್ತು ಎಐ ಉಪಕ್ರಮಗಳನ್ನು ಒಳಗೊಂಡ ಹಲವು ಯೋಜನೆಗಳನ್ನು ಕೈಗೆತ್ತಿಕೊಳ್ಳುತ್ತಿದೆ.

ಪ್ರಮುಖ ಉಪಕ್ರಮಗಳು

ಪ್ರಮುಖ ಉಪಕ್ರಮಗಳು:

• ಕರ್ನಾಟಕದಾದ್ಯಂತ ಮುಂದಿನ ಪೀಳಿಗೆಯ ಐಟಿ ಪಾರ್ಕ್‌ಗಳು: ಶಿವಮೊಗ್ಗ, ಮಂಗಳೂರು ಮತ್ತು ಮೈಸೂರಿನಲ್ಲಿ ಹೊಸ ತಂತ್ರಜ್ಞಾನ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಲಾಗುತ್ತಿದೆ.

• ಶಿವಮೊಗ್ಗ – ತಂತ್ರಜ್ಞಾನ ಕೇಂದ್ರದ ವಿಸ್ತರಣೆ: ಈಗಿರುವ ಐಟಿ ಪಾರ್ಕ್‌ಗೆ ಹೊಂದಿಕೊಂಡಿರುವ 2.5 ಎಕರೆ ಪ್ರದೇಶದಲ್ಲಿ ಎರಡನೆ ಹಂತ ಅಭಿವೃದ್ಧಿಪಡಿಸಲಾಗುತ್ತಿದೆ.

• ಮಂಗಳೂರು – ಕರಾವಳಿ ತಂತ್ರಜ್ಞಾನ ಕೇಂದ್ರ: ದೇರೆಬೈಲ್‌ನ ಬ್ಲೂಬೆರಿ ಹಿಲ್‌ನಲ್ಲಿ 3.25 ಎಕರೆ ಐಟಿ ಪಾರ್ಕ್‌ ಅಭಿವೃದ್ಧಿಪಡಿಸಲಾಗುತ್ತಿದೆ.

• ಮೈಸೂರಿನಲ್ಲಿ 3.48 ಎಕರೆ ಐಟಿ ಪಾರ್ಕ್‌ ಅಭಿವೃದ್ಧಿಪಡಿಸಲಾಗುತ್ತಿದೆ.

• ಬೆಂಗಳೂರಿನಾಚೆಗೂ ವಿಸ್ತರಣೆ: ಹುಬ್ಬಳ್ಳಿ, ಕಲಬುರಗಿ ಮತ್ತು ಶಿವಮೊಗ್ಗದ ಐಟಿ ಪಾರ್ಕ್‌ಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ.

• ಸರ್ಕಾರಿ ಇಲಾಖೆಗಳು ಮತ್ತು ಸಾರ್ವಜನಿಕ ಸಂಸ್ಥೆಗಳಿಗೆ ಐಟಿ ಸಲಹಾ ಸೇವೆ, ಸಾಫ್ಟ್‌ವೇರ್‌ ಮತ್ತು ಐಟಿ ಸೇವೆಗಳು, ಕೇಂದ್ರೀಕೃತ ಖರೀದಿ, ಮೂಲಸೌಕರ್ಯ ನಿರ್ವಹಣೆ ಮತ್ತು ತಾಂತ್ರಿಕ ಸಿಬ್ಬಂದಿ ನಿಯೋಜನೆ ಕ್ಷೇತ್ರಗಳಲ್ಲಿ ಕಿಯೊನಿಕ್ಸ್‌ ತನ್ನ ಪಾತ್ರವನ್ನು ವಿಸ್ತರಿಸುತ್ತಿದೆ.

• ಕಿಯೊನೆಕ್ಸ್ಟ್‌ ಡಿಜಿಟಲ್‌ ಮಾರುಕಟ್ಟೆ ವೇದಿಕೆಯು ಐಸಿಟಿ ಉತ್ಪನ್ನಗಳು, ಐಟಿ ಸೇವೆಗಳು, ಮೂಲಸೌಕರ್ಯ, ತರಬೇತಿ ಮತ್ತು ತಾಂತ್ರಿಕ ಮಾನವ ಸಂಪನ್ಮೂಲಗಳ ಸರ್ಕಾರದಿಂದ ಸರ್ಕಾರಕ್ಕೆ (ಜಿ2ಜಿ) ಖರೀದಿ ಮತ್ತು ಸೇವಾ ವಿತರಣೆಯನ್ನು ಸರಳಗೊಳಿಸುವ ಉದ್ದೇಶ ಹೊಂದಿದೆ.

• ವಿದ್ಯಾರ್ಥಿಗಳು ಮತ್ತು ಉದ್ಯೋಗಸ್ಥರಿಗೆ ಡಿಜಿಟಲ್‌ ಹಾಗೂ ಹೈಬ್ರಿಡ್‌ ಕಲಿಕೆ ಒದಗಿಸಲು ಕಿಯೊನಿಕ್ಸ್‌ ತನ್ನ ತರಬೇತಿ ವ್ಯವಸ್ಥೆಯನ್ನು ಆಧುನೀಕರಿಸುತ್ತಿದೆ.

• ರಾಜ್ಯದಲ್ಲಿ ಅಭಿವೃದ್ಧಿಪಡಿಸಲಾಗಿರುವ ಕೃತಕ ಬುದ್ಧಿಮತ್ತೆ ಕಂಪ್ಯೂಟರ್‌ ಕಿಯೊ (KEO AI PC) ಮೂಲಕ ವಿದ್ಯಾರ್ಥಿಗಳು ಮತ್ತು ಕಲಿಯುವವರಿಗೆ ಕೈಗೆಟುಕುವ ದರದಲ್ಲಿ ಎಐ ಆಧಾರಿತ ಕಂಪ್ಯೂಟಿಂಗ್‌ ಸೌಲಭ್ಯ ಒದಗಿಸಲಾಗುತ್ತಿದೆ.

ಕಿಯೊನಿಕ್ಸ್‌ ಆರನೇ ದಶಕಕ್ಕೆ ಕಾಲಿಡುತ್ತಿರುವ ಸಂದರ್ಭದಲ್ಲಿ, ಮುಂದಿನ ಪೀಳಿಗೆಯ ತಂತ್ರಜ್ಞಾನ ಮೂಲಸೌಕರ್ಯ, ಡಿಜಿಟಲ್‌ ಆಡಳಿತ, ಭವಿಷ್ಯಕ್ಕೆ ಸಿದ್ಧಗೊಳಿಸುವ ಕೌಶಲ ಅಭಿವೃದ್ಧಿ, ಎಐ ಆಧಾರಿತ ತಂತ್ರಜ್ಞಾನ ಲಭ್ಯತೆ ಮತ್ತು ಬಲಿಷ್ಠ ಪ್ರಾದೇಶಿಕ ತಂತ್ರಜ್ಞಾನ ಕೇಂದ್ರಗಳ ಜಾಲದ ಮೂಲಕ ತನ್ನ ಪರಂಪರೆಯನ್ನು ಮತ್ತಷ್ಟು ಬಲಪಡಿಸಲು ಕ್ರಮ ಕೈಗೊಳ್ಳಲಾಗಿದೆ. ಈ ಮೂಲಕ ಕರ್ನಾಟಕದ ನಿರಂತರ ತಂತ್ರಜ್ಞಾನ ಆಧಾರಿತ ಬೆಳವಣಿಗೆಯಲ್ಲಿ ತನ್ನ ಪಾತ್ರವನ್ನು ಮತ್ತಷ್ಟು ಗಟ್ಟಿಗೊಳಿಸುವ ಗುರಿ ಹೊಂದಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular