ಮಂಗಳೂರು: ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಇಂದು ಬೆಳ್ಳಂಬೆಳಗ್ಗೆ ಮಂಗಳೂರು ಮೀನುಗಾರಿಕೆ ಬಂದರಿಗೆ ಭೇಟಿ ನೀಡಿ, ಮೀನುಗಾರರ ಸಮಸ್ಯೆಗಳನ್ನು ಖುದ್ದು ಆಲಿಸಿದರು.
ಮಂಗಳೂರು ಬಂದರು ಬಳಿಯ ಧಕ್ಕೆ ಪ್ರದೇಶಕ್ಕೆ ಸಿಎಂ ಡಿ.ಕೆ.ಶಿವಕುಮಾರ್ ದಿಢೀರ್ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಯುಟಿ ಖಾದರ್ ಅವರು ಮುಖ್ಯಮಂತ್ರಿಗಳಿಗೆ ಸಾಥ್ ನೀಡಿದರು.
ಬಿಗಿ ಪೊಲೀಸ್ ಬಂದೋಬಸ್ತ್‌ನಲ್ಲಿ ಸಿಎಂ ಡಿ.ಕೆ ಶಿವಕುಮಾರ್ ಧಕ್ಕೆ ಪ್ರದೇಶವನ್ನು ಕಾಲ್ನಡಿಗೆಯಲ್ಲಿ ಸುತ್ತಿ ವೀಕ್ಷಿಸಿದರು. ಸಮುದ್ರದಿಂದ ಬಂದ ತಾಜಾ ಮೀನುಗಳನ್ನು ಪರಿಶೀಲಿಸಿದ ಸಿಎಂ ಮೀನುಗಾರಿಕೆ ಬೋಟ್ ಗಳಲ್ಲಿ ತೆರಳಿ ಸಮುದ್ರ ವೀಕ್ಷಣೆ ಮಾಡಿದರು. ಆಗತಾಅನೆ ಸಮುದ್ರದಿಂದ ಬಂದಿದ್ದ ಬೃಹತ್ ಕಿಂಗ್ ಫಿಶ್ ಮೀನುಗಳನ್ನು ಕೈಯಲ್ಲಿ ಹಿಡಿದು ಆಶ್ಚರ್ಯಚಕಿತರಾದರು.
ಈ ವೇಳೆ ಅಲ್ಲಿದ್ದ ಮೀನುಗಾರರು ಮುಖ್ಯಮಂತ್ರಿಗಳಿಗೆ ಜೈಕಾರ ಕೂಗಿದರು. ಸಿಎಂ ಅವರು ಮೀನುಗಾರರೊಂದಿಗೆ ಕೆಲಕಾಲ ಮಾತುಕತೆ ನಡೆಸಿ, ಅವರ ಸಮಸ್ಯೆಗಳನ್ನು ಆಲಿಸಿದರು.
ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಮೀನುಗಾರಿಕಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಹಲವಾರು ಯೋಜನೆಗಳ ಕುರಿತು ಚರ್ಚೆ ನಡೆದಿರುವುದೂ ಗಮನಾರ್ಹ. ಮೀನುಗಾರಿಕಾ ಇಲಾಖಾ ಅಧಿಕಾರಿಗಳು ಹಾಗೂ ಜಿಲ್ಲಾಡಳಿತ ಅಧಿಕಾರಿಗಳು ಮುಂದಿನ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.
ಇದೇ ವೇಳೆ ಮೀನುಗಾರಿಕೆ ಧಕ್ಕೆಯಲ್ಲಿ ವ್ಯಾಪಾರ ವಹಿವಾಟು ಬಂದ್ ಆಗಿರುವುದನ್ನು ಗಮನಿಸಿದ ಸಿಎಂ ಆ ಬಗ್ಗೆ ಪ್ರಶ್ನಿಸಿದರು. ಸಿಎಂ ಭೇಟಿ ಹಿನ್ನೆಲೆಯಲ್ಲಿ ಭದ್ರತೆ ಕಾರಣಕ್ಕೆ ವ್ಯಾಪಾರ ವಹಿವಾಟು ಬಂದ್ ಮಾಡಿದ್ದಾಗಿ ಅಧಿಕಾರಿಗಳು ತಿಳಿಸಿದರು. ಇದಕ್ಕೆ ಗರಂ ಆದ ಸಿಎಂ ಡಿ.ಕೆ.ಶಿವಕುಮಾರ್, ನಿಮ್ಮ ಭದ್ರತೆ ಯಾರಿಗೆ ಬೇಕು? ಇಲ್ಲಿ ಯಾವ ರೀತಿ ವ್ಯಾಅಪಾರ, ವಹಿವಾಟು ನಡೆಯುತ್ತದೆ ಎಂಬುದನ್ನು ಖುದ್ದು ಪರಿಶೀಲಿಸಲು ಬಂದಿದ್ದೇನೆ. ಆದರೆ ಮೀನುಗಾರಿಕೆ ವ್ಯಾಪಾರ ಬಂದ್ ಮಾಡಿಸಿ ಅವರ ದಿನದ ಬದುಕಿಗೆ ತೊಂದರೆ ಮಾಡುತ್ತಿದ್ದೀರಿ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಅಲ್ಲದೆ, ಧಕ್ಕೆ ಬಂದ್ ಮಾಡಿಸಿದ ಅಧಿಕಾರಿಗಳ ಅಮಾನತಿಗೆ ಸೂಚನೆ ನೀಡಿದರು.
ಸಿಎಂ ಮೀನುಗಾರಿಕಾ ದಕ್ಕೆಗೆ ಭೇಟಿ ನೀಡಿದ್ದ ವೇಳೆ ದಕ್ಕೆಯಲ್ಲಿ ಯಾವುದೇ ವ್ಯಾಪಾರ ವಹಿವಾಟು ಇಲ್ಲದೇ ದಕ್ಕೆ ಖಾಲಿ ಖಾಲಿಯಾಗಿತ್ತು. ವ್ಯಾಪಾರ ಬಂದ್ ಮಾಡಿಸಿದ್ದ ಅಧಿಕಾರಿಗಳನ್ನು ತಕ್ಷಣ ಅಮಾನತುಗೊಳಿಸುವಂತೆ ಮಂಗಳೂರು ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಕಮಿಷನರ್ ಅವರಿಗೆ ಆದೇಶ ನೀಡಿದರು.

