HomeAgricultureಕಬ್ಬು ಬೆಳೆಗಾರರ ಸಮಸ್ಯೆ ಪರಿಹಾರಕ್ಕಾಗಿ Modi ಗೆ DKಶಿ ಪತ್ರ

ಕಬ್ಬು ಬೆಳೆಗಾರರ ಸಮಸ್ಯೆ ಪರಿಹಾರಕ್ಕಾಗಿ Modi ಗೆ DKಶಿ ಪತ್ರ

ಬೆಂಗಳೂರು-: ರಾಜ್ಯದ ಕಬ್ಬು ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಹಾಗೂ ಪ್ರಸಕ್ತ ಹಂಗಾಮಿನಲ್ಲಿ ರೈತರ ಹಿತದೃಷ್ಟಿಯಿಂದ ತ್ವರಿತ ನಿರ್ಧಾರ ಕೈಗೊಳ್ಳುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

ಅಕ್ಟೋಬರ್ 19ರಂದು ಬರೆದಿದ್ದ ಪತ್ರದ ಮುಂದುವರಿದ ಭಾಗವಾಗಿ ಅಕ್ಟೋಬರ್ 30ರಂದು ಮತ್ತೊಂದು ಪತ್ರ ಬರೆದಿರುವ ಅವರು, ಕಬ್ಬಿನ ಕನಿಷ್ಠ ಬೆಂಬಲ ಬೆಲೆ, ಸಕ್ಕರೆಯ ಕನಿಷ್ಠ ಮಾರಾಟ ಬೆಲೆ (MSP), ಎಥೆನಾಲ್ ನೀತಿ ಸೇರಿದಂತೆ ಐದು ಪ್ರಮುಖ ಬೇಡಿಕೆಗಳನ್ನು ಕೇಂದ್ರ ಸರ್ಕಾರದ ಮುಂದಿಟ್ಟಿದ್ದಾರೆ.

ಎಥೆನಾಲ್ ಉತ್ಪಾದನೆ ನಿರ್ಬಂಧದಿಂದ ಕೊಡಗು

ಎಥೆನಾಲ್ ಉತ್ಪಾದನೆ ನಿರ್ಬಂಧದಿಂದ ಕಾರ್ಖಾನೆಗಳಿಗೆ ಆದಾಯದ ಹೊಡೆತ

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

2026-27ನೇ ಎಥೆನಾಲ್ ಪೂರೈಕೆ ವರ್ಷದಲ್ಲಿ ಕಬ್ಬಿನ ರಸ, ಸಿರಪ್ ಮತ್ತು ಬಿ-ಹೆವಿ ಮೊಲಾಸಸ್ ಬಳಸಿ ಎಥೆನಾಲ್ ಉತ್ಪಾದಿಸದಂತೆ ಅಕ್ಟೋಬರ್ 22ರಂದು ಕೇಂದ್ರ ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆ ನಿರ್ದೇಶನ ನೀಡಿರುವುದನ್ನು ಡಿ.ಕೆ. ಶಿವಕುಮಾರ್ ಪತ್ರದಲ್ಲಿ ಪ್ರಸ್ತಾಪಿಸಿದ್ದಾರೆ.

2025-26ನೇ ಸಾಲಿನಲ್ಲಿ ಕರ್ನಾಟಕದ ಕಬ್ಬು ಆಧಾರಿತ ಡಿಸ್ಟಿಲರಿಗಳು ಎಥೆನಾಲ್ ಮಾರಾಟದಿಂದ 5,803.7 ಕೋಟಿ ರೂ. ಆದಾಯ ಗಳಿಸಿದ್ದವು. ಈ ಆದಾಯದಿಂದ ಸಕ್ಕರೆ ಕಾರ್ಖಾನೆಗಳು ರೈತರಿಗೆ 14 ದಿನಗಳೊಳಗೆ ಕಬ್ಬಿನ ಹಣ ಪಾವತಿಸಲು ಸಾಧ್ಯವಾಗಿತ್ತು. ಹೀಗಾಗಿ ಎಥೆನಾಲ್ ಉತ್ಪಾದನೆಗೆ ಸಂಬಂಧಿಸಿದ ನಿರ್ಬಂಧಗಳು ಕಾರ್ಖಾನೆಗಳ ಆರ್ಥಿಕ ಸ್ಥಿತಿಯ ಮೇಲೆ ಪರಿಣಾಮ ಬೀರಬಹುದು ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ಸಕ್ಕರೆ ಕಾರ್ಖಾನೆಗಳ ಭರವಸೆ

ಸಕ್ಕರೆ ಕಾರ್ಖಾನೆಗಳ ಭರವಸೆ

ಅಕ್ಟೋಬರ್ 26ರಂದು ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ರೈತ ಮುಖಂಡರು ಹಾಗೂ ರಾಜ್ಯದ ಎಲ್ಲ ಸಕ್ಕರೆ ಕಾರ್ಖಾನೆಗಳ ಪ್ರತಿನಿಧಿಗಳ ಸಭೆ ನಡೆಸಿ ಎರಡೂ ಕಡೆಯವರ ಅಹವಾಲು ಆಲಿಸಿರುವುದಾಗಿ ತಿಳಿಸಿದ್ದಾರೆ. ಸಕ್ಕರೆಯ ಕನಿಷ್ಠ ಮಾರಾಟ ಬೆಲೆ ಹೆಚ್ಚಳವಾದರೆ ಅದರ ಲಾಭವನ್ನು ರೈತರಿಗೆ ತಲುಪಿಸುವುದಾಗಿ ಕಾರ್ಖಾನೆಗಳು ಭರವಸೆ ನೀಡಿವೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಪ್ರೊ. ರಮೇಶ್ ಚಂದ್ ನೇತೃತ್ವದ ಸಮಿತಿಯು ಅಕ್ಟೋಬರ್ 29ರಂದು ಬೆಂಗಳೂರಿನಲ್ಲಿ ರೈತರು ಮತ್ತು ತಜ್ಞರ ಅಭಿಪ್ರಾಯ ಆಲಿಸಿದ್ದು, ಅಕ್ಟೋಬರ್ 30ರಂದು ರಾಜ್ಯ ಸರ್ಕಾರದ ಪ್ರತಿನಿಧಿಗಳ ಅಹವಾಲುಗಳನ್ನು ಸ್ವೀಕರಿಸಿದೆ. ಈ ಸಂದರ್ಭದಲ್ಲಿ ರಾಜ್ಯ ಸರ್ಕಾರವು ತನ್ನ ಬೇಡಿಕೆಗಳ ಕುರಿತು ಸಮಿತಿಗೆ ವಿವರವಾದ ಮನವಿ ಸಲ್ಲಿಸಿದೆ.

ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ 81 ಸಕ್ಕರೆ ಕಾರ್ಖಾನೆಗಳಲ್ಲಿ ಡಿಜಿಟಲ್ ತೂಕದ ಸೇತುವೆಗಳನ್ನು ಅಳವಡಿಸಲಾಗಿದೆ. ಕಾರ್ಖಾನೆಗಳ ಪ್ರಯೋಗಾಲಯಗಳನ್ನು ತಿಂಗಳಿಗೆ ಎರಡು ಬಾರಿ ಪರಿಶೀಲಿಸಲಾಗುತ್ತಿದೆ. 2025-26ನೇ ಸಾಲಿನಲ್ಲಿ ಸರಾಸರಿ ಸಕ್ಕರೆ ಇಳುವರಿ ಪ್ರಮಾಣ ಶೇ.11.09ಕ್ಕೆ ಏರಿಕೆಯಾಗಿದೆ. ಅದೇ ಸಾಲಿನ ಕಬ್ಬಿನ ಬಾಕಿ ಮೊತ್ತದಲ್ಲಿ ಶೇ.99.85ರಷ್ಟು ಪಾವತಿಸಲಾಗಿದೆ ಎಂದು ಶಿವಕುಮಾರ್ ವಿವರಿಸಿದ್ದಾರೆ.

ಆದರೆ, ಕಬ್ಬಿನ ಬೆಲೆಯನ್ನು ಸಿ2+50% ಸೂತ್ರದ ಆಧಾರದಲ್ಲಿ ನಿಗದಿಪಡಿಸುವುದು ಹಾಗೂ ಎಫ್‌ಆರ್‌ಪಿ ಲೆಕ್ಕಾಚಾರಕ್ಕೆ ಮೂಲ ಸಕ್ಕರೆ ಇಳುವರಿ ಪ್ರಮಾಣವನ್ನು ಕಡಿಮೆ ಮಾಡುವುದು ಸೇರಿದಂತೆ ಹಲವು ಪ್ರಮುಖ ಬೇಡಿಕೆಗಳು ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಒಳಪಟ್ಟಿವೆ ಎಂದು ತಿಳಿಸಿದ್ದಾರೆ.

ರಾಜ್ಯದ 240 ತಾಲೂಕುಗಳ ಪೈಕಿ 226 ತಾಲೂಕುಗಳಲ್ಲಿ ಬರ ಪರಿಸ್ಥಿತಿ ಇರುವುದರಿಂದ ಈ ಬಾರಿ ಕಬ್ಬಿನ ಇಳುವರಿ ಕುಸಿಯುವ ಸಾಧ್ಯತೆಯಿದೆ. ಕಬ್ಬು ನುರಿಸುವ ಹಂಗಾಮು ಕೂಡ ವಿಳಂಬವಾಗಿದ್ದು, ರೈತರು ಕೇಂದ್ರ ಸರ್ಕಾರದ ನಿರ್ಧಾರಕ್ಕಾಗಿ ಕಾಯುತ್ತಿದ್ದಾರೆ ಎಂದು ಪತ್ರದಲ್ಲಿ ಗಮನ ಸೆಳೆದಿದ್ದಾರೆ.

ಪ್ರಧಾನಿ ಮುಂದಿಟ್ಟ ಐದು ಪ್ರಮುಖ ಬೇಡಿಕೆಗಳು

ಪ್ರಧಾನಿ ಮುಂದಿಟ್ಟ ಐದು ಪ್ರಮುಖ ಬೇಡಿಕೆಗಳು

1. ಸಕ್ಕರೆಯ ಕನಿಷ್ಠ ಮಾರಾಟ ಬೆಲೆ ಹೆಚ್ಚಳ: 2019ರ ಫೆಬ್ರವರಿ 14ರಿಂದ ಪ್ರತಿ ಕೆಜಿಗೆ 31 ರೂ.ನಲ್ಲೇ ಉಳಿದಿರುವ ಸಕ್ಕರೆಯ ಕನಿಷ್ಠ ಮಾರಾಟ ಬೆಲೆಯನ್ನು ಪರಿಷ್ಕರಿಸಬೇಕು. ಇದೇ ಅವಧಿಯಲ್ಲಿ ಕಬ್ಬಿನ ಎಫ್‌ಆರ್‌ಪಿ ಪ್ರತಿ ಟನ್‌ಗೆ 2,750 ರೂ.ನಿಂದ 3,650 ರೂ.ಗೆ ಏರಿಕೆಯಾಗಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಸಕ್ಕರೆ ಕೆಜಿಗೆ ಸುಮಾರು 45 ರೂ.ಗೆ ಮಾರಾಟವಾಗುತ್ತಿರುವುದರಿಂದ ಬೆಲೆ ಹೆಚ್ಚಳದಿಂದ ಗ್ರಾಹಕರಿಗೆ ಹೆಚ್ಚಿನ ಹೊರೆ ಆಗುವುದಿಲ್ಲ ಎಂಬುದು ರಾಜ್ಯದ ವಾದ.

2. ಎಥೆನಾಲ್ ನೀತಿ ಮರುಪರಿಶೀಲನೆ: ಫೆಬ್ರವರಿ 2027ರಲ್ಲಿ ಬೆಳೆ ಅಂದಾಜು ಪ್ರಕಟವಾದ ಬಳಿಕ ಬಿ-ಹೆವಿ ಮೊಲಾಸಸ್ ಸೇರಿದಂತೆ ಕಬ್ಬು ಆಧಾರಿತ ಎಥೆನಾಲ್ ಉತ್ಪಾದನೆಗೆ ವಿಧಿಸಿರುವ ನಿರ್ಬಂಧಗಳನ್ನು ಮರುಪರಿಶೀಲಿಸಬೇಕು. 2022-23ರಿಂದ ಬದಲಾಗದ ಎಥೆನಾಲ್ ಖರೀದಿ ಬೆಲೆಯನ್ನೂ ಪರಿಷ್ಕರಿಸಬೇಕು.

3. ಎಫ್‌ಆರ್‌ಪಿ ಮೂಲ ಇಳುವರಿ ಪ್ರಮಾಣ ಶೇ.9.5ಕ್ಕೆ ನಿಗದಿ: ಕಡಿಮೆ ಸಕ್ಕರೆ ಇಳುವರಿ ಹೊಂದಿರುವ ಪ್ರದೇಶಗಳ ರೈತರಿಗೆ ಮಣ್ಣು ಮತ್ತು ಹವಾಮಾನದಂತಹ ನೈಸರ್ಗಿಕ ಕಾರಣಗಳಿಂದ ಆರ್ಥಿಕ ನಷ್ಟವಾಗದಂತೆ ಎಫ್‌ಆರ್‌ಪಿ ಲೆಕ್ಕಾಚಾರದ ಮೂಲ ಇಳುವರಿ ಪ್ರಮಾಣವನ್ನು ಮತ್ತೆ ಶೇ.9.5ಕ್ಕೆ ನಿಗದಿಪಡಿಸಬೇಕು.

4. ದೇಶೀಯ ಮತ್ತು ವಾಣಿಜ್ಯ ಸಕ್ಕರೆಗೆ ಪ್ರತ್ಯೇಕ ಬೆಲೆ: ಗೃಹಬಳಕೆ ಹಾಗೂ ವಾಣಿಜ್ಯ ಬಳಕೆಯ ಸಕ್ಕರೆಗೆ ಪ್ರತ್ಯೇಕ ಕನಿಷ್ಠ ಮಾರಾಟ ಬೆಲೆ ನಿಗದಿಪಡಿಸಬೇಕು. ಇದರಿಂದ ಸಾಮಾನ್ಯ ಗ್ರಾಹಕರ ಹಿತಾಸಕ್ತಿ ರಕ್ಷಿಸುವುದರ ಜೊತೆಗೆ ಸಗಟು ಖರೀದಿದಾರರಿಂದ ನ್ಯಾಯಯುತ ಬೆಲೆ ದೊರೆಯಲಿದೆ.

5. ಆದಾಯ ಹಂಚಿಕೆ ಸೂತ್ರ ಪರಿಷ್ಕರಣೆ: ಎಥೆನಾಲ್ ಮತ್ತು ಸಹ-ವಿದ್ಯುತ್ ಉತ್ಪಾದನೆಯಿಂದ ಬರುವ ಆದಾಯವನ್ನೂ ಒಳಗೊಂಡಂತೆ ಆದಾಯ ಹಂಚಿಕೆ ಸೂತ್ರವನ್ನು ಪರಿಷ್ಕರಿಸಬೇಕು. ನೀತಿ ಆಯೋಗದ ಕಾರ್ಯಪಡೆ ಹಾಗೂ ಕೃಷಿ ವೆಚ್ಚ ಮತ್ತು ಬೆಲೆ ಆಯೋಗದ ಶಿಫಾರಸಿನಂತೆ ಬೆಲೆ ಸ್ಥಿರೀಕರಣ ನಿಧಿ ಸ್ಥಾಪಿಸಬೇಕು.

ಪ್ರಸಕ್ತ ಹಂಗಾಮಿನಲ್ಲೇ ನಿರ್ಧಾರಕ್ಕೆ ಆಗ್ರಹ

ಪ್ರಸಕ್ತ ಹಂಗಾಮಿನಲ್ಲೇ ನಿರ್ಧಾರಕ್ಕೆ ಆಗ್ರಹ

ಮೊದಲ ಎರಡು ಬೇಡಿಕೆಗಳಾದ ಸಕ್ಕರೆಯ ಕನಿಷ್ಠ ಮಾರಾಟ ಬೆಲೆ ಪರಿಷ್ಕರಣೆ ಮತ್ತು ಎಥೆನಾಲ್ ನೀತಿ ಮರುಪರಿಶೀಲನೆ ಕುರಿತು ಪ್ರಸಕ್ತ ಹಂಗಾಮಿನಲ್ಲೇ ನಿರ್ಧಾರ ಕೈಗೊಳ್ಳಬೇಕೆಂದು ಡಿ.ಕೆ. ಶಿವಕುಮಾರ್ ಒತ್ತಾಯಿಸಿದ್ದಾರೆ. ಉಳಿದ ಮೂರು ಬೇಡಿಕೆಗಳು ದೀರ್ಘಾವಧಿಯ ರಚನಾತ್ಮಕ ಸುಧಾರಣೆಗಳಾಗಿದ್ದು, ಇವುಗಳ ಕುರಿತು ಸೂಕ್ತ ಸಮಯದಲ್ಲಿ ಘೋಷಣೆ ಮಾಡಿದರೆ ರೈತರ ಪ್ರತಿಭಟನೆ ಹಿಂಪಡೆಯುವಂತೆ ಮನವೊಲಿಸಲು ಹಾಗೂ ಕಬ್ಬು ನುರಿಸುವ ಪ್ರಕ್ರಿಯೆ ಮುಂದುವರಿಸಲು ರಾಜ್ಯ ಸರ್ಕಾರಕ್ಕೆ ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ.

ಲಕ್ಷಾಂತರ ಕಬ್ಬು ಬೆಳೆಗಾರರ ಹಾಗೂ ಕರ್ನಾಟಕದ ಜನರ ಹಿತದೃಷ್ಟಿಯಿಂದ ಪ್ರಧಾನಿ ನರೇಂದ್ರ ಮೋದಿ ಅವರು ವೈಯಕ್ತಿಕವಾಗಿ ಮಧ್ಯಪ್ರವೇಶಿಸಿ, ಈ ಬೇಡಿಕೆಗಳ ಕುರಿತು ಶೀಘ್ರ ನಿರ್ಧಾರ ಕೈಗೊಳ್ಳಬೇಕು ಎಂದು ಡಿ.ಕೆ. ಶಿವಕುಮಾರ್ ಪತ್ರದಲ್ಲಿ ಕಳಕಳಿಯ ಮನವಿ ಮಾಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular