ಧಾರವಾಡ : ರಾಜ್ಯ ಸರ್ಕಾರವು ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯಡಿ ಪಡಿತರ ಆಹಾರ ಧಾನ್ಯಗಳನ್ನು ಪೂರೈಸುತ್ತಿದ್ದು, ಅದರಂತೆ ಮೇ, 2026 ಹಾಗೂ ಜೂನ, 2026ನೇ ಈ ಎರಡು ಮಾಹೆಗಳಿಗೆ ಸಂಬಂಧಿಸಿದಂತೆ ಜಿಲ್ಲೆಯ ಅಂತ್ಯೋದಯ ಅನ್ನ ಪಡಿತರ ಚೀಟಿ & ಪಿಎಚ್‍ಎಚ್ (ಬಿಪಿಎಲ್) ಪಡಿತರ ಚೀಟಿದಾರರಿಗೆ ಆಹಾರಧಾನ್ಯವನ್ನು ವಿತರಣೆ ಮಾಡಲಾಗುತ್ತಿದೆ.
ಅಂತ್ಯೋದಯ ಪಡಿತರ ಚೀಟಿ (ಪ್ರತಿ ಕಾರ್ಡಿಗೆ) 35 ಕೆಜಿ + 35 ಕೆಜಿ = ಒಟ್ಟು 70 ಕೆಜಿ ಅಕ್ಕಿ, ಆದ್ಯತಾ (ಬಿಪಿಎಲ್) ಪಡಿತರ ಚೀಟಿಯ ಪ್ರತಿ ಸದಸ್ಯರಿಗೆ ರಾಜ್ಯ ಮತ್ತು ಕೇಂದ್ರ ವರ್ಗದಡಿಯ ಪಡಿತರ ಕಾರ್ಡುಗಳಿಗೆ 5 ಕೆಜಿ + 5 ಕೆಜಿ = ಒಟ್ಟು 10 ಕೆಜಿ ಅಕ್ಕಿಯನ್ನು ವಿತರಣೆ ಮಾಡಲಾಗುತ್ತದೆ.
ಮೇ, 2026ನೇ ಮಾಹೆಯಲ್ಲಿ ಕೇಂದ್ರ ವ್ಯಾಪ್ತಿ ಅಂದರೆ ಎನ್‍ಎಫ್‍ಎಸ್‍ಎ ವರ್ಗದಡಿ ಮೇ ಮತ್ತು ಜೂನ-2026 ಎರಡೂ ಮಾಹೆಗಳ ಪಡಿತರ ಆಹಾರಧಾನ್ಯವನ್ನು ವಿತರಿಸಲಾಗುತ್ತಿದ್ದು, ಎಲ್ಲ ಅರ್ಹ ಫಲಾನುಭವಿಗಳು ತಮ್ಮ ವ್ಯಾಪ್ತಿಯ ನ್ಯಾಯ ಬೆಲೆ ಅಂಗಡಿಗಳಲ್ಲಿ ಎರಡೂ ಮಾಹೆಗಳಿಗೆ ಸಂಬಂಧಿಸಿದಂತೆ ಮಾಹೆವಾರು ಪ್ರತ್ಯೇಕವಾಗಿ ಬೆರಳಚ್ಚು ನೀಡಿ ಉಚಿತವಾಗಿ ಪಡಿತರವನ್ನು ಪಡೆಯಬಹುದು ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಡಲೆ ಕಾಳು ಉತ್ಪನ್ನ ಖರೀದಿ ಕಾರ್ಯ ಮೇ. 28 ರವರೆಗೆ ವಿಸ್ತರಣೆ
ಧಾರವಾಡ : 2025-26 ನೇ ಸಾಲಿನ ಹಿಂಗಾರು ಹಂಗಾಮಿನಲ್ಲಿ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಎಫ್.ಎ.ಕ್ಯೂ. ಗುಣಮಟ್ಟದ ಕಡಲೆಕಾಳು ಉತ್ಪನ್ನವನ್ನು ಪ್ರತಿ ಕ್ವಿಂಟಲ್‍ಗೆ ರೂ. 5,875 ರಂತೆ ಖರೀದಿಸಲು ನಿಗದಿಪಡಿಸಿರುವ ಕಾಲಾವಧಿಯನ್ನು ಏಪ್ರೀಲ್ 28, 2026 ರಿಂದ ಮೇ 28, 2026 ರವರೆಗೆ ವಿಸ್ತರಿಸಿದ್ದು, ನೋಂದಾಯಿತ ರೈತರಿಂದ ಮಾತ್ರ ಖರೀದಿಸಲಾಗುವುದು.
ಕಡಲೆಕಾಳು ಉತ್ಪನ್ನವನ್ನು ಪ್ರತಿ ಎಕರೆಗೆ 4 ಕ್ವಿಂಟಲ್‍ನಂತೆ ಪ್ರತಿ ರೈತರಿಂದ ಗರಿಷ್ಟ 40 ಕ್ವಿಂಟಲ್ ಖರೀದಿಸಲಾಗುತ್ತಿದ್ದು, ಜಿಲ್ಲೆಯಲ್ಲಿ 35 ಕಡಲೆಕಾಳು ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ. ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು.
ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ರಾಜ್ಯ ಸಹಕಾರಿ ಮಾರಾಟ ಮಹಾಮಂಡಳ ಶಾಖೆ ಹುಬ್ಬಳ್ಳಿ ದೂರವಾಣಿ ಸಂಖ್ಯೆ: 0836-2004419 ಗೆ ಸಂಪರ್ಕಿಸಬಹುದು ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

