ಬೆಂಗಳೂರು: ಕಚೇರಿಯಲ್ಲಿ ಎಂದಿನಂತೆ ತಮ್ಮ ಕೆಲಸದಲ್ಲಿ ತೊಡಗಿದ್ದ ಸಿಬ್ಬಂದಿಗೆ ಏಕಾಏಕಿ ಭಯಾನಕ ಅನುಭವ ಎದುರಾಗಿದೆ. ಕೈಯಲ್ಲಿ ಚಾಕು ಹಿಡಿದು ಕಚೇರಿಗೆ ನುಗ್ಗಿದ ವ್ಯಕ್ತಿಯೊಬ್ಬ ಚಿನ್ನ ನೀಡುವಂತೆ ಒತ್ತಾಯಿಸಿದ್ದಾನೆ. ಚಿನ್ನ ಕೊಡದಿದ್ದರೆ ಕತ್ತು ಸೀಳುವುದಾಗಿ ಬೆದರಿಸಿ ಕುತ್ತಿಗೆಗೆ ಚಾಕು ಹಿಡಿದಿದ್ದಾನೆ. ಬೆಂಗಳೂರಿನ ದೊಮ್ಮಲೂರಿನ 100 ಅಡಿ ರಸ್ತೆಯಲ್ಲಿ ಈ ಘಟನೆ ನಡೆದಿದೆ.
ಬೆಂಗಳೂರಿನಲ್ಲಿ ಹಾಡಹಗಲೇ ಕಚೇರಿಯೊಂದಕ್ಕೆ ನುಗ್ಗಿದ ವ್ಯಕ್ತಿಯೊಬ್ಬ ಚಿನ್ನ ನೀಡುವಂತೆ ಬೆದರಿಕೆ ಹಾಕಿರುವ ಘಟನೆ ನಡೆದಿದೆ. ಚಿನ್ನ ನೀಡಲು ನಿರಾಕರಿಸಿದರೆ ಕತ್ತು ಸೀಳುವುದಾಗಿ ಬೆದರಿಕೆ ಹಾಕಿ ಆತಂಕ ಸೃಷ್ಟಿಸಿದ್ದ ಆರೋಪಿಯನ್ನು ಸ್ಥಳೀಯರು ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಬೆಂಗಳೂರಿನ ದೊಮ್ಮಲೂರಿನ 100 ಅಡಿ ರಸ್ತೆಯಲ್ಲಿರುವ ಕಚೇರಿಯಲ್ಲಿ ಈ ಘಟನೆ ನಡೆದಿದೆ. ಕಚೇರಿಗೆ ನುಗ್ಗಿದ ಆರೋಪಿ ಪ್ರಭುರಾಜ್ ಎಂಬಾತ ಚಿನ್ನ ನೀಡುವಂತೆ ಒತ್ತಾಯಿಸಿದ್ದಾನೆ. ಅಲ್ಲದೆ, ವ್ಯಕ್ತಿಯ ಕುತ್ತಿಗೆಗೆ ಚಾಕು ಹಿಡಿದು ಕಚೇರಿಯಿಂದ ಹೊರಗಡೆ ಕರೆದುಕೊಂಡು ಬಂದಿದ್ದಾನೆ. ಅಲ್ಲದೇ ಕತ್ತು ಸೀಳುವುದಾಗಿ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.
ಕಚೇರಿಯಲ್ಲಿದ್ದ ಸಿಬ್ಬಂದಿ ಈ ಘಟನೆಯಿಂದ ಆತಂಕಗೊಂಡು ಜಮಾಯಿಸಿದ್ದಾರೆ. ಬಳಿಕ ಸ್ಥಳೀಯರು ಹಾಗೂ ಕಚೇರಿ ಸಿಬ್ಬಂದಿ ಸೇರಿಕೊಂಡು ಆರೋಪಿಯನ್ನು ಹಿಡಿದು ಥಳಿಸಿದ್ದಾರೆ. ನಂತರ ಆತನನ್ನು ಇಂದಿರಾನಗರ ಪೊಲೀಸರಿಗೆ ಒಪ್ಪಿಸಿದ್ದಾರೆ.
ಸದ್ಯ ಇಂದಿರಾನಗರ ಪೊಲೀಸರು ಆರೋಪಿ ಪ್ರಭುರಾಜ್ನನ್ನು ಬಂಧಿಸಿದ್ದು, ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಬೆದರಿಕೆ ಹಾಕಲು ಬಳಸಿದ ಚಾಕು ಸೇರಿದಂತೆ ಘಟನೆಯ ಸಂಪೂರ್ಣ ವಿವರಗಳ ಕುರಿತು ಪೊಲೀಸರು ಪರಿಶೀಲನೆ ಮುಂದುವರಿಸಿದ್ದಾರೆ.
*ನಟ ತುಷಾರ್ ಕಪೂರ್ಗೆ ₹5 ಕೋಟಿ ಸುಲಿಗೆ ಬೆದರಿಕೆ! ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಹೆಸರಿನಲ್ಲಿ ಕರೆ
ಮುಂಬೈ: ನಟ ತುಷಾರ್ ಕಪೂರ್ ಅವರಿಗೆ ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿ ₹5 ಕೋಟಿ ನೀಡುವಂತೆ ಬೇಡಿಕೆಯಿಟ್ಟಿದ್ದಾನೆ ಎನ್ನಲಾಗಿದೆ. ಕರೆ ಮಾಡಿದ ವ್ಯಕ್ತಿ ತಾನು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ನ ಸದಸ್ಯ ಹ್ಯಾರಿ ಬಾಕ್ಸರ್ ಎಂದು ಪರಿಚಯಿಸಿಕೊಂಡಿದ್ದಾನೆ. ಗ್ಯಾಂಗ್ನ ಹೆಸರನ್ನು ಬಳಸಿಕೊಂಡು ನಟನನ್ನು ಬೆದರಿಸಿ ಹಣ ಸುಲಿಗೆ ಮಾಡಲು ಪ್ರಯತ್ನಿಸಿರುವ ಶಂಕೆ ವ್ಯಕ್ತವಾಗಿದೆ.
ಈ ಪ್ರಕರಣದ ತನಿಖೆ ಕೈಗೆತ್ತಿಕೊಂಡಿರುವ ಮುಂಬೈ ಕ್ರೈಂ ಬ್ರಾಂಚ್ ಪೊಲೀಸರು, ಕರೆ ಮಾಡಿದ ವ್ಯಕ್ತಿಯ ಧ್ವನಿಮುದ್ರಣವನ್ನು ಪರಿಶೀಲಿಸಿದ್ದಾರೆ. ಅಲ್ಲದೆ, ಹ್ಯಾರಿ ಬಾಕ್ಸರ್ನ ಲಭ್ಯವಿರುವ ಧ್ವನಿ ಮಾದರಿಗಳೊಂದಿಗೆ ಹೋಲಿಕೆ ಮಾಡಿದ್ದಾರೆ.
ಆದರೆ, ಪ್ರಾಥಮಿಕ ಧ್ವನಿ ವಿಶ್ಲೇಷಣೆಯಲ್ಲಿ ಎರಡೂ ಧ್ವನಿಗಳ ನಡುವೆ ಯಾವುದೇ ಸಾಮ್ಯತೆ ಕಂಡುಬಂದಿಲ್ಲ. ಹೀಗಾಗಿ, ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಹೆಸರನ್ನು ದುರ್ಬಳಕೆ ಮಾಡಿಕೊಂಡು ಯಾರೋ ಕಿಡಿಗೇಡಿಗಳು ಬೆದರಿಕೆ ಹಾಕಿರುವ ಸಾಧ್ಯತೆಯಿದೆ ಎಂದು ಪೊಲೀಸರು ಶಂಕಿಸಿದ್ದಾರೆ.ಈ ಕುರಿತು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದ್ದು, ಲಭ್ಯವಿರುವ ಧ್ವನಿ ಮಾದರಿಗಳಿಗೆ ಬೆದರಿಕೆ ಕರೆ ಮಾಡಿದ ವ್ಯಕ್ತಿಯ ಧ್ವನಿ ಹೊಂದಿಕೆಯಾಗದ ಕಾರಣ ಇದೊಂದು ನಕಲಿ ಬೆದರಿಕೆ ಕರೆಯಾಗಿರಬಹುದು ಎಂದು ತಿಳಿಸಿದ್ದಾರೆ.
ಸದ್ಯ ಕರೆ ಮಾಡಿದ ವ್ಯಕ್ತಿ ಯಾರು? ಎಲ್ಲಿಂದ ಕರೆ ಮಾಡಿದ್ದಾನೆ? ಇದರ ಹಿಂದೆ ಯಾರಿದ್ದಾರೆ? ಎಂಬುದನ್ನು ಪತ್ತೆಹಚ್ಚಲು ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ನಟ ತುಷಾರ್ ಕಪೂರ್ ಅವರಿಂದ ದೂರು ಸ್ವೀಕರಿಸಿದ ಬಳಿಕ ಪ್ರಕರಣವನ್ನು ಕ್ರೈಂ ಬ್ರಾಂಚ್ನ ಆ್ಯಂಟಿ ಎಕ್ಸ್ಟಾರ್ಷನ್ ಸೆಲ್ಗೆ ವಹಿಸಲಾಗಿದೆ.ಇದುವರೆಗೆ ಈ ಪ್ರಕರಣದಲ್ಲಿ ಯಾವುದೇ ಎಫ್ಐಆರ್ ದಾಖಲಾಗಿಲ್ಲ ಎಂದು ವರದಿಯಾಗಿದೆ.
ಟೈಗರ್ ಶ್ರಾಫ್ ಪ್ರಕರಣದ ಬೆನ್ನಲ್ಲೇ ಮತ್ತೊಂದು ಬೆದರಿಕೆ!
ಇತ್ತೀಚೆಗಷ್ಟೇ ಮುಂಬೈನ ಜುಹು ಪ್ರದೇಶದಲ್ಲಿ ನಟ ಟೈಗರ್ ಶ್ರಾಫ್ಗೆ ಸಂಬಂಧಿಸಿದ ಗುಂಡಿನ ದಾಳಿ ಪ್ರಕರಣ ನಡೆದಿತ್ತು. ಈ ಪ್ರಕರಣವನ್ನೂ ಮುಂಬೈ ಕ್ರೈಂ ಬ್ರಾಂಚ್ ತನಿಖೆ ನಡೆಸುತ್ತಿದೆ. ಇದರ ಬೆನ್ನಲ್ಲೇ ಮತ್ತೊಬ್ಬ ಬಾಲಿವುಡ್ ನಟನಿಗೆ ₹5 ಕೋಟಿ ಸುಲಿಗೆ ಬೆದರಿಕೆ ಕರೆ ಬಂದಿರುವುದು ಆತಂಕಕ್ಕೆ ಕಾರಣವಾಗಿದೆ.

