ಬೆಂಗಳೂರು: ರಾಜ್ಯದಲ್ಲಿ ಸಂಭವಿಸಿದ ದುರಂತದ ವೇಳೆ ಸಂತ್ರಸ್ತರಿಗೆ ಪರಿಹಾರ ನೀಡುವ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರ ತಾರತಮ್ಯ ಅನುಸರಿಸುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
ಗುರುಮಠಕಲ್ ಕ್ಷೇತ್ರದ ಜೆಡಿಎಸ್ ಶಾಸಕ ಶರಣಗೌಡ ಕಂದಕೂರ ಈ ಕುರಿತಾಗಿ ಆರೋಪ ಮಾಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.
ಮೈಸೂರಿನಲ್ಲಿ ನಡೆದ ದುರಂತಕ್ಕೆ ತಕ್ಷಣ ಸ್ಪಂದಿಸುವ ಸರ್ಕಾರ ಕಲ್ಯಾಣ ಕರ್ನಾಟಕದ ಜನರ ಸಾವಿಗೆ ಕನಿಷ್ಠ ಸಂತಾಪವನ್ನು ಕೂಡ ಸೂಚಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾರ್ಚ್ 29ರಂದು ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ನಗನೂರು ಗ್ರಾಮದ ಕೃಷಿ ಹೊಂಡದಲ್ಲಿ ಈಜಲು ಹೋಗಿ ಒಂದೇ ಕುಟುಂಬದ ನಾಲ್ವರು ಮಕ್ಕಳು ಮೃತಪಟ್ಟಿದ್ದರು. ಏಪ್ರಿಲ್ 17ರಂದು ಸುರಪುರ ತಾಲೂಕಿನ ಗೋಪಾಲಸ್ವಾಮಿ ದೇವಾಲಯ ದರ್ಶನಕ್ಕೆ ತೆರಳಿದ್ದ ಸಿರವಾರ ಗ್ರಾಮದ ಒಂದೇ ಕುಟುಂಬದ 9 ಜನ ರಸ್ತೆ ಅಪಘಾತದಲ್ಲಿ ಸಜೀವ ದಹನವಾಗಿದ್ದರು.
ಈ ದುರಂತಗಳು ಸಂಭವಿಸಿ ಸುಮಾರು ದಿನ ಕಳೆದರೂ ಮೃತರ ಕುಟುಂಬಗಳಿಗೆ ಪರಿಹಾರ ಘೋಷಣೆ ಮಾಡುವುದಾಗಲಿ, ಕನಿಷ್ಠ ಸಾಂತ್ವನ ಹೇಳುವುದಾಗಲಿ ಇದುವರೆಗೆ ಮಾಡಿಲ್ಲ. ಆದರೆ ಏಪ್ರಿಲ್ 19 ರಂದು ನಿಮ್ಮ ಸ್ವಂತ ಮೈಸೂರು ಜಿಲ್ಲೆಯಲ್ಲಿ ಕೆರೆಯಲ್ಲಿ ಈಜಾಡಲು ಹೋಗಿ ಆರು ಜನ ಮೃತಪಟ್ಟ ಕುಟುಂಬದವರಿಗೆ ತಕ್ಷಣವೇ ಜಾಲತಾಣದ ಮೂಲಕ ಸಂತಾಪ, ಸಾಂತ್ವನ ತಿಳಿಸಿ ತಲಾ 5 ಲಕ್ಷ ರೂ. ಪರಿಹಾರ ಘೋಷಣೆ ಮಾಡಿರುತ್ತೀರಿ. ತಾವು ಈ ಮಲತಾಯಿ ಧೋರಣೆಯನ್ನು ಅನುಸರಿಸುತ್ತಿರುವುದರಿಂದ ರಾಜ್ಯದ ಮುಖ್ಯಮಂತ್ರಿಗಳೋ ಅಥವಾ ಮೈಸೂರು ಜಿಲ್ಲೆಗೆ ಮಾತ್ರ ಮುಖ್ಯಮಂತ್ರಿಗಳೋ ಎನ್ನುವ ಸಂಶಯ ವ್ಯಕ್ತವಾಗಿದೆ. ಕಲ್ಯಾಣ ಕರ್ನಾಟಕ ಪ್ರದೇಶದ ಜನ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಹೀಗಾಗಿ ಯಾದಗಿರಿ ಜಿಲ್ಲೆ ಸುರಪುರ ತಾಲೂಕಿನ ನಗನೂರು ಗ್ರಾಮದ ಸಂತ್ರಸ್ತ ಕುಟುಂಬಗಳಿಗೆ ತಲಾ 5 ಲಕ್ಷ ರೂ ಪರಿಹಾರ ಘೋಷಿಸಿ ಸಾಂತ್ವನ ವ್ಯಕ್ತಪಡಿಸುವಂತೆ ಸಿಎಂ ಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

