ಶಿವಮೊಗ್ಗ : ಶಿವಮೊಗ್ಗ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಏ.18 ರಂದು ಬೆಳಗ್ಗೆ 10 ಗಂಟೆಗೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ನೇರ ಸಂದರ್ಶನವನ್ನು ಆಯೋಜಿಸಲಾಗಿದೆ.
ಈ ನೇರ ಸಂದರ್ಶನದಲ್ಲಿ ಮುತ್ತೂಟ್ ಫಿನ್‌ಕಾರ್ಪ್ ಮತ್ತು ಎ.ಯು.ಸ್ಮಾಲ್ ಫೈನಾನ್ಸ್ ಬ್ಯಾಂಕ್ ಕಂಪನಿಗಳು ಭಾಗವಹಿಸಲಿದ್ದು, ತಮ್ಮಲ್ಲಿ ಖಾಲಿಯಿರುವ ಹುದ್ದೆಗಳಿಗೆ ನೇರ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಿದ್ದಾರೆ. ಪಿಯುಸಿ ಮತ್ತು ಯಾವುದೇ ಡಿಗ್ರಿ ತೇರ್ಗಡೆ ಹೊಂದಿದ 18 ರಿಂದ 35 ವರ್ಷದೊಳಗಿನ ಅಭ್ಯರ್ಥಿಗಳು ಬಯೋಡೆಟಾ ಮತ್ತು ಆಧಾರ್ ಕಾರ್ಡ್ ಪ್ರತಿಯೊಂದಿಗೆ ಸಂದರ್ಶನದಲ್ಲಿ ಭಾಗವಹಿಸಬಹುದು. ಉಚಿತ ಪ್ರವೇಶ ಇರುತ್ತದೆ.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಗುತ್ಯಪ್ಪ ಕಾಲೋನಿ, 2ನೇ ಕ್ರಾಸ್, ಪಂಪನಗರ, ಸಾಗರ ರಸ್ತೆ, ಶಿವಮೊಗ್ಗ ಇವರನ್ನು ಖುದ್ದಾಗಿ ಅಥವಾ ಮೊಬೈಲ್ ಸಂಖ್ಯೆ 9380663606/ 9108235132 ಗಳನ್ನು ಸಂಪರ್ಕಿಸುವಂತೆ ಉದ್ಯೋಗಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಅಕ್ಷಯ ತೃತೀಯದಂದು ಬಾಲ್ಯವಿವಾಹ ಸಾಧ್ಯತೆ : ತಡೆಗೆ ಕಟ್ಟೆಚ್ಚರ
ಶಿವಮೊಗ್ಗ : ಅಕ್ಷಯ ತೃತೀಯ ದಿನದಂದು ಜಿಲ್ಲೆಯಲ್ಲಿ ಬಾಲ್ಯವಿವಾಹಗಳು ನಡೆಯುವ ಸಾಧ್ಯತೆಗಳಿರುವುದರಿಂದ, ಇದನ್ನು ತಡೆಗಟ್ಟಲು ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮತ್ತು ಜಿಲ್ಲಾಡಳಿತ ಸನ್ನದ್ಧವಾಗಿದೆ.ಬಾಲ್ಯವಿವಾಹವು ಒಂದು ಗಂಭೀರ ಸಾಮಾಜಿಕ ಪಿಡುಗಾಗಿದ್ದು, ಇದು ಮಕ್ಕಳ ಸಾಮಾಜಿಕ, ಮಾನಸಿಕ, ದೈಹಿಕ ಹಾಗೂ ಆರ್ಥಿಕ ಬೆಳವಣಿಗೆಯ ಮೇಲೆ ಮಾರಕ ಪರಿಣಾಮ ಬೀರುತ್ತದೆ. ಅಕ್ಷಯ ತೃತೀಯದಂತಹ ಶುಭ ಮುಹೂರ್ತದ ದಿನಗಳಲ್ಲಿ ಬಾಲ್ಯವಿವಾಹಗಳು ಹೆಚ್ಚಾಗಿ ನಡೆಯುವ ಸಾಧ್ಯತೆಗಳಿದ್ದು, ಈ ಬಗ್ಗೆ ಸಾರ್ವಜನಿಕರು ಜಾಗೃತರಾಗಿರಬೇಕು ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ತಿಳಿಸಿದ್ದಾರೆ.
ದಿನಾಂಕ 20-04-2026 ರಂದು ವಿಶೇಷ ನಿಗಾ: ಏಪ್ರಿಲ್ 20 ರಂದು ಅಕ್ಷಯ ತೃತೀಯ ಆಚರಿಸಲಾಗುತ್ತಿದ್ದು, ಜಿಲ್ಲೆಯಾದ್ಯಂತ ಈ ದಿನದಂದು ನಡೆಯುವ ವಿವಾಹಗಳ ಮೇಲೆ ಹೆಚ್ಚಿನ ನಿಗಾ ಇರಿಸಲಾಗುವುದು. ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಈ ಕುರಿತು ಪ್ರಕಟಣೆ ಹೊರಡಿಸಿದ್ದು, ಬಾಲ್ಯವಿವಾಹ ಮಾಡುವುದು ಅಥವಾ ಅದಕ್ಕೆ ಪ್ರೇರಣೆ ನೀಡುವುದು ಕಾನೂನುಬಾಹಿರ ಎಂದು ಎಚ್ಚರಿಸಿದ್ದಾರೆ.
ಮಾಹಿತಿ ನೀಡಲು ಸಹಾಯವಾಣಿ
ನಿಮ್ಮ ಸುತ್ತಮುತ್ತ ಎಲ್ಲಿಯಾದರೂ ಬಾಲ್ಯವಿವಾಹ ನಡೆಯುವ ಬಗ್ಗೆ ಮಾಹಿತಿ ಲಭಿಸಿದಲ್ಲಿ ಸರ್ಕಾರ ನೇಮಿಸಲ್ಪಟ್ಟ ಗ್ರಾಮ, ತಾಲ್ಲೂಕು, ಜಿಲ್ಲಾ ಮಟ್ಟದ ಬಾಲ್ಯ ವಿವಾಹ ನಿಷೇಧಾಧಿಕಾರಿಗಳು , ಮಕ್ಕಳ ಸಹಾಯವಾಣಿ: 1098 ಪೊಲೀಸ್ ಸಹಾಯವಾಣಿ: 112 ಕರೆ ಮಾಡಿ ಮಾಹಿತಿನೀಡಬೇಕು. ಮಾಹಿತಿ ನೀಡುವವರ ವಿವರಗಳನ್ನು ಗೌಪ್ಯವಾಗಿಡಲಾಗುವುದು. ಬಾಲ್ಯವಿವಾಹಗಳನ್ನು ತಡೆಗಟ್ಟುವ ಮೂಲಕ ಮಕ್ಕಳ ಶಿಕ್ಷಣ ಮತ್ತು ಭವಿಷ್ಯಕ್ಕೆ ಆದ್ಯತೆ ನೀಡಬೇಕು ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಕೋರಿದ್ದಾರೆ.

