HomeLatest Newsವಿಶ್ವದಾದ್ಯಂತ ಅಬ್ಬರಿಸಿದ 'ಧುರಂಧರ್'ಗೆ ಜಪಾನ್‌ನಲ್ಲಿ ಶಾಕ್: ಮೊದಲ ದಿನ ಥಿಯೇಟರ್‌ಗೆ ಬಂದಿದ್ದು ಕೇವಲ 900 ಮಂದಿ!

ವಿಶ್ವದಾದ್ಯಂತ ಅಬ್ಬರಿಸಿದ ‘ಧುರಂಧರ್’ಗೆ ಜಪಾನ್‌ನಲ್ಲಿ ಶಾಕ್: ಮೊದಲ ದಿನ ಥಿಯೇಟರ್‌ಗೆ ಬಂದಿದ್ದು ಕೇವಲ 900 ಮಂದಿ!

ವಿಶ್ವದಾದ್ಯಂತ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದು ಹೊಸ ದಾಖಲೆ ಬರೆದಿದ್ದ ಬಾಲಿವುಡ್ ನಟ ರಣವೀರ್ ಸಿಂಗ್ ಅಭಿನಯದ ‘ಧುರಂಧರ್’ ಸಿನಿಮಾ ಜಪಾನ್‌ನಲ್ಲಿ ಮಾತ್ರ ಅಂದುಕೊಂಡ ಮಟ್ಟಿಗೆ ಸದ್ದು ಮಾಡಿಲ್ಲ. ಚಿತ್ರತಂಡ ಜಪಾನ್ ದೇಶದಲ್ಲಿ ಭರ್ಜರಿ ಪ್ರಚಾರ ಕೈಗೊಂಡಿದ್ದರೂ ಸಹ, ಅಲ್ಲಿನ ಪ್ರೇಕ್ಷಕರನ್ನು ಸೆಳೆಯುವಲ್ಲಿ ಸಿನಿಮಾ ವಿಫಲವಾಗಿದೆ.

ಇತ್ತೀಚೆಗಷ್ಟೇ ಜಪಾನ್ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಈ ಚಿತ್ರಕ್ಕೆ ಮೊದಲ ದಿನ ಅತ್ಯಂತ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಾಕ್ಸ್ ಆಫೀಸ್ ವರದಿಗಳ ಪ್ರಕಾರ, ಸಿನಿಮಾ ಬಿಡುಗಡೆಯಾದ ಮೊದಲ ದಿನ ಕೇವಲ ೯೦೦ ವೀಕ್ಷಕರು ಮಾತ್ರ ಚಿತ್ರಮಂದಿರಕ್ಕೆ ಭೇಟಿ ನೀಡಿದ್ದಾರೆ. ವಾರಾಂತ್ಯದ ಗಳಿಕೆಯಲ್ಲೂ ಸಹ ಜಪಾನ್ ದೇಶದ ಟಾಪ್ ೨೫ ಸಿನಿಮಾಗಳ ಪಟ್ಟಿಯಲ್ಲಿ ಸ್ಥಾನ ಪಡೆಯಲು ಧುರಂಧರ್ ಚಿತ್ರಕ್ಕೆ ಸಾಧ್ಯವಾಗಿಲ್ಲ.

ಬಿಡುಗಡೆಯಾದ ದಿನ ಮಧ್ಯಾಹ್ನದ ವೇಳೆಗೆ ಜಪಾನ್‌ನ ೫೭ ಚಿತ್ರಮಂದಿರಗಳಿಂದ ಕೇವಲ ೪೪೯ ಟಿಕೆಟ್‌ಗಳು ಮಾತ್ರ ಮಾರಾಟವಾಗಿದ್ದವು. ದ್ವಿತೀಯಾರ್ಧದಲ್ಲಾದರೂ ಪ್ರೇಕ್ಷಕರ ಸಂಖ್ಯೆ ಹೆಚ್ಚಾಗಬಹುದು ಎಂಬ ನಿರೀಕ್ಷೆ ಇತ್ತಾದರೂ, ಯಾವುದೇ ಪ್ರಗತಿ ಕಾಣದೆ ಒಟ್ಟು ೮೦ ಚಿತ್ರಮಂದಿರಗಳಿಂದ ದಿನದ ಅಂತ್ಯಕ್ಕೆ ಕೇವಲ ೯೦೦ ಜನ ಪ್ರೇಕ್ಷಕರು ಮಾತ್ರ ಸಿನಿಮಾ ನೋಡಿದ್ದಾರೆ. ಇದರಿಂದಾಗಿ ಜಪಾನ್‌ನಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಭಾರತದ ಟಾಪ್ ೧೦ ಸಿನಿಮಾಗಳ ಲಿಸ್ಟ್‌ ಸೇರಲು ಈ ಚಿತ್ರಕ್ಕೆ ಸಾಧ್ಯವಾಗಿಲ್ಲ. ಪ್ರಸ್ತುತ ಈ ಪಟ್ಟಿಯಲ್ಲಿ ಸಲ್ಮಾನ್ ಖಾನ್ ಅವರ ಟೈಗರ್ ೩ ಸಿನಿಮಾ ೧,೩೦೦ ವೀಕ್ಷಕರೊಂದಿಗೆ ಹತ್ತನೇ ಸ್ಥಾನದಲ್ಲಿದೆ. ಇದಕ್ಕೂ ಮುನ್ನ ಅಲ್ಲು ಅರ್ಜುನ್ ಅವರ ಪುಷ್ಪ ೨ ಸಿನಿಮಾ ಕೂಡ ಜಪಾನ್‌ನಲ್ಲಿ ಈ ಸಾಧನೆ ಮಾಡಲು ಯಶಸ್ವಿಯಾಗಿರಲಿಲ್ಲ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪ್ರಸ್ತುತ ಜಪಾನ್ ದೇಶದಲ್ಲಿ ಅತ್ಯಂತ ಯಶಸ್ವಿ ಆರಂಭ ಪಡೆದ ಭಾರತೀಯ ಸಿನಿಮಾಗಳ ಪಟ್ಟಿಯಲ್ಲಿ ರಾಜಮೌಳಿ ನಿರ್ದೇಶನದ ಆರ್‌ಆರ್‌ಆರ್ ಮೊದಲ ಸ್ಥಾನದಲ್ಲಿದೆ. ಈ ಸಿನಿಮಾ ಮೊದಲ ದಿನವೇ ೮,೨೩೦ ವೀಕ್ಷಕರನ್ನು ಸೆಳೆದಿತ್ತು. ಇದರ ನಂತರದ ಸ್ಥಾನಗಳಲ್ಲಿ ಸಾಹೋ, ಕಲ್ಕಿ ೨೮೯೮ ಎಡಿ, ಪಠಾಣ್, ಸಲಾರ್, ಜವಾನ್, ರಂಗಸ್ಥಲಂ, ದೇವರ, ಬಾಹುಬಲಿ ೨ ಮತ್ತು ಟೈಗರ್ ೩ ಚಿತ್ರಗಳಿವೆ.

ಜಪಾನ್‌ನಲ್ಲಿ ಮಂಕಾದರೂ ಜಾಗತಿಕ ಮಟ್ಟದಲ್ಲಿ ದಾಖಲೆ

ಜಪಾನ್ ದೇಶದಲ್ಲಿ ಧುರಂಧರ್ ಸಿನಿಮಾ ನಿರಾಸೆ ಮೂಡಿಸಿದ್ದರೂ, ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ ಮಾತ್ರ ಈ ಫ್ರಾಂಚೈಸಿ ಹಿಸ್ಟರಿ ಕ್ರಿಯೇಟ್ ಮಾಡಿದೆ. ಧುರಂಧರ್ ಸರಣಿಯ ಎರಡು ಸಿನಿಮಾಗಳು ಸೇರಿ ಒಟ್ಟಾರೆ ೩,೦೧೯ ಕೋಟಿ ರೂಪಾಯಿಗಳಿಗಿಂತ ಹೆಚ್ಚು ಕಲೆಕ್ಷನ್ ಮಾಡುವ ಮೂಲಕ ೩,೦೦೦ ಕೋಟಿ ಕ್ಲಬ್ ಸೇರಿದ ಭಾರತದ ಮೊದಲ ಸಿನಿಮಾ ಫ್ರಾಂಚೈಸಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದಕ್ಕೂ ಮುನ್ನ ಬಾಹುಬಲಿ ಸರಣಿ ೨,೪೩೮ ಕೋಟಿ ರೂಪಾಯಿ ಹಾಗೂ ಪುಷ್ಪ ಸರಣಿ ೨,೦೯೨ ಕೋಟಿ ರೂಪಾಯಿ ಗಳಿಸಿ ಮುಂಚೂಣಿಯಲ್ಲಿದ್ದವು.

ಇದಲ್ಲದೆ ಚೀನಾ ಮತ್ತು ಗಲ್ಫ್ ದೇಶಗಳ ಮಾರುಕಟ್ಟೆಯ ನೆರವೇ ಇಲ್ಲದೆ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಭಾರತದ ಮೊದಲ ಸಿನಿಮಾ ಎಂಬ ಹೆಮ್ಮೆಯೂ ಈ ಚಿತ್ರಕ್ಕಿದೆ. ಧುರಂಧರ್ ಮೊದಲ ಭಾಗ ಜಾಗತಿಕವಾಗಿ ೧,೩೦೭ ಕೋಟಿ ರೂಪಾಯಿ ಗಳಿಸಿ ಬ್ಲಾಕ್‌ಬಸ್ಟರ್ ಆಗಿತ್ತು. ಈಗ ಅದರ ಮುಂದುವರಿದ ಭಾಗವಾದ ಧುರಂಧರ್ ದಿ ರಿವೆಂಜ್ ವಿಶ್ವದಾದ್ಯಂತ ಬರೋಬ್ಬರಿ ೧,೮೧೩ ಕೋಟಿ ರೂಪಾಯಿ ಕೊಳ್ಳೆ ಹೊಡೆಯುವ ಮೂಲಕ ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಅತಿ ಹೆಚ್ಚು ಗಳಿಕೆ ಮಾಡಿದ ಎರಡನೇ ಸಿನಿಮಾ ಎಂಬ ದಾಖಲೆಯನ್ನು ತನ್ನದಾಗಿಸಿಕೊಂಡಿದೆ.

ಆದಿತ್ಯ ಧರ್ ಬರವಣಿಗೆ ಹಾಗೂ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಬಿಗ್ ಬಜೆಟ್ ಚಿತ್ರವನ್ನು ಜಿಯೋ ಸ್ಟುಡಿಯೋಸ್ ಮತ್ತು ಬಿ೬೨ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಲೋಕೇಶ್ ಧರ್ ಹಾಗೂ ಜ್ಯೋತಿ ದೇಶಪಾಂಡೆ ಜಂಟಿಯಾಗಿ ನಿರ್ಮಿಸಿದ್ದಾರೆ. ಚಿತ್ರದಲ್ಲಿ ರಣವೀರ್ ಸಿಂಗ್ ಜೊತೆಗೆ ಅಕ್ಷಯ್ ಖನ್ನಾ, ಸಂಜಯ್ ದತ್, ಅರ್ಜುನ್ ರಾಂಪಾಲ್, ಆರ್ ಮಾಧವನ್ ಸೇರಿದಂತೆ ದೊಡ್ಡ ತಾರಾಬಳಗವೇ ನಟಿಸಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular