HomeLatest Newsಹೋಟೆಲ್ ರುಚಿಯನ್ನು ಮರೆಸುತ್ತೆ ಮನೆಯಲ್ಲೇ ಮಾಡುವ ಈ ಸ್ಪೆಷಲ್ ಪಾಸ್ತಾ: ಮಕ್ಕಳಿಗಂತೂ ಸಖತ್ ಇಷ್ಟವಾಗುತ್ತೆ

ಹೋಟೆಲ್ ರುಚಿಯನ್ನು ಮರೆಸುತ್ತೆ ಮನೆಯಲ್ಲೇ ಮಾಡುವ ಈ ಸ್ಪೆಷಲ್ ಪಾಸ್ತಾ: ಮಕ್ಕಳಿಗಂತೂ ಸಖತ್ ಇಷ್ಟವಾಗುತ್ತೆ

ವೀಕೆಂಡ್ ಬಂತೆಂದರೆ ಸಾಕು, ಮನೆಯಲ್ಲಿ ಏನಾದರೂ ಸ್ಪೆಷಲ್ ಹಾಗೂ ಹೊಸ ರುಚಿಯ ಅಡುಗೆ ಮಾಡಬೇಕು ಎನಿಸುವುದು ಸಹಜ. ಹಬ್ಬ ಹರಿದಿನಗಳಲ್ಲಾಗಲಿ ಅಥವಾ ಸ್ನೇಹಿತರು, ಕುಟುಂಬದವರು ಮನೆಗೆ ಬಂದಾಗ ವಿಭಿನ್ನವಾದ ವಿದೇಶಿ ಶೈಲಿಯ ಖಾದ್ಯವನ್ನು ಸವಿಯಲು ಇಷ್ಟಪಡುವವರಿಗಾಗಿ ಅತ್ಯಂತ ಸರಳ ಹಾಗೂ ರುಚಿಕರವಾದ ಪಾಸ್ತಾ ಬೆಲ್ಲೆ ರೋಮಾ ರೆಸಿಪಿ ಇಲ್ಲಿದೆ. ಕೇವಲ ಕೆಲವೇ ನಿಮಿಷಗಳಲ್ಲಿ ಸಿದ್ಧವಾಗುವ ಈ ಇಟಾಲಿಯನ್ ಶೈಲಿಯ ಪಾಸ್ತಾವನ್ನು ಮನೆಯಲ್ಲೇ ಸುಲಭವಾಗಿ ಹೇಗೆ ತಯಾರಿಸಬಹುದು ಎಂಬುದರ ವಿವರ ಇಲ್ಲಿದೆ.

ಬೇಕಾಗುವ ಸಾಮಗ್ರಿಗಳು

  • ಪಾಸ್ತಾ: ೨೦೦ ಗ್ರಾಂ

    📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
    APP ತೆರೆಯಿರಿ
  • ಟೊಮೆಟೊ ಸಾಸ್: ೩೦೦ ಗ್ರಾಂ

  • ಚೆರ್ರಿ ಟೊಮೆಟೊ: ೫

  • ಈರುಳ್ಳಿ: ೫೦ ಗ್ರಾಂ

  • ಬೆಳ್ಳುಳ್ಳಿ: ೨೦ ಗ್ರಾಂ

  • ಎಣ್ಣೆ: ೩೦ ಎಂಎಲ್

  • ಲೀಕ್ಸ್: ೨೦ ಗ್ರಾಂ

  • ಸೆಲರಿ ಕಡ್ಡಿಗಳು: ೨೦ ಗ್ರಾಂ

  • ತಾಜಾ ತುಳಸಿ ಎಲೆಗಳು: ೨೦ ಗ್ರಾಂ

  • ಉಪ್ಪು ಮತ್ತು ಕಾಳುಮೆಣಸಿನ ಪುಡಿ: ೧೦ ಗ್ರಾಂ

  • ತುರಿದ ಚೀಸ್: ಅಲಂಕರಿಸಲು ಬೇಕಾಗುವಷ್ಟು

ತಯಾರಿಸುವ ಸರಳ ವಿಧಾನ

ಮೊದಲಿಗೆ ಒಂದು ಪಾತ್ರೆಯಲ್ಲಿ ನೀರನ್ನು ಬಿಸಿ ಮಾಡಿ, ಅದಕ್ಕೆ ಸ್ವಲ್ಪ ಉಪ್ಪು ಮತ್ತು ಸ್ವಲ್ಪ ಎಣ್ಣೆ ಸೇರಿಸಿ ಪಾಸ್ತಾವನ್ನು ಚೆನ್ನಾಗಿ ಬೇಯಿಸಿ ಸೋಸಿಕೊಳ್ಳಿ. ಬೆಂದ ಪಾಸ್ತಾವನ್ನು ಪಕ್ಕಕ್ಕೆ ಎತ್ತಿಟ್ಟುಕೊಳ್ಳಿ.

ಈಗ ಒಂದು ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ. ಇದಕ್ಕೆ ಸಣ್ಣಗೆ ಹೆಚ್ಚಿದ ಈರುಳ್ಳಿ, ಜಜ್ಜಿದ ಬೆಳ್ಳುಳ್ಳಿ, ಲೀಕ್ಸ್ ಮತ್ತು ಸೆಲರಿಯನ್ನು ಸೇರಿಸಿ ಒಂದು ನಿಮಿಷದ ಕಾಲ ಮಧ್ಯಮ ಉರಿಯಲ್ಲಿ ಲಘುವಾಗಿ ಹುರಿದುಕೊಳ್ಳಿ.

ನಂತರ ಅದೇ ಪ್ಯಾನ್‌ಗೆ ಸಿದ್ಧವಾಗಿಟ್ಟುಕೊಂಡ ಟೊಮೆಟೊ ಸಾಸ್ ಅನ್ನು ಸೇರಿಸಿ ಚೆನ್ನಾಗಿ ಕೈಯಾಡಿಸಿ. ಮಸಾಲೆ ಹದವಾಗಿ ಬೆರೆತ ಬಳಿಕ ತಾಜಾ ತುಳಸಿ ಎಲೆಗಳು ಮತ್ತು ನಿಮ್ಮ ಖಾರಕ್ಕೆ ತಕ್ಕಷ್ಟು ಹಸಿಮೆಣಸಿನಕಾಯಿಯನ್ನು ಸಣ್ಣದಾಗಿ ಹೆಚ್ಚಿ ಸೇರಿಸಿ.

ಈ ಮಿಶ್ರಣಕ್ಕೆ ಮೊದಲೇ ಬೇಯಿಸಿಟ್ಟುಕೊಂಡ ಪಾಸ್ತಾ, ಅರ್ಧಕ್ಕೆ ಕತ್ತರಿಸಿದ ಚೆರ್ರಿ ಟೊಮೆಟೊಗಳು, ಕಾಳುಮೆಣಸಿನ ಪುಡಿ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಎಲ್ಲವನ್ನೂ ಚೆನ್ನಾಗಿ ಬೆರೆಸಿ.

ಈ ಇಡೀ ಮಿಶ್ರಣವನ್ನು ಕೇವಲ ಎರಡು ನಿಮಿಷಗಳ ಕಾಲ ಸಣ್ಣ ಉರಿಯಲ್ಲಿ ಬೇಯಿಸಿ, ನಂತರ ಒಂದು ಬೌಲ್‌ಗೆ ವರ್ಗಾಯಿಸಿ. ಕೊನೆಯದಾಗಿ ಬಿಸಿಯಾದ ಪಾಸ್ತಾ ಮೇಲೆ ನಿಮ್ಮಿಷ್ಟದ ತುರಿದ ಚೀಸ್ ಅನ್ನು ಉದುರಿಸಿದರೆ, ಬಾಯಲ್ಲಿ ನೀರೂರಿಸುವ ಪಾಸ್ತಾ ಬೆಲ್ಲೆ ರೋಮಾ ಸವಿಯಲು ಸಿದ್ಧ. ಇದನ್ನು ಬಿಸಿಬಿಸಿಯಾಗಿರುವಾಗಲೇ ಹೆಚ್ಚುವರಿ ಟೊಮೆಟೊ ಸಾಸ್‌ನೊಂದಿಗೆ ಸವಿಯಲು ನೀಡಬಹುದು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular