ಮಂಗಳೂರು: ರಾಜ್ಯಾದ್ಯಂತ ಭಾರಿ ಸಂಚಲನ ಸೃಷ್ಟಿಸಿದ್ದ ಧರ್ಮಸ್ಥಳ ಬುರುಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ದಳ (SIT)ದ ಅಧಿಕಾರಿಗಳು ಮತ್ತೆ ಬಂಗ್ಲಗುಡ್ದೆಯಲ್ಲಿ ಶೋಧ ಕಾರ್ಯ ಆರಂಭಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಕ್ಷೇತ್ರದ ನೇತ್ರಾವತಿ ನದಿಯ ಸ್ನಾನ ಘಟ್ಟದ ಬಳಿಯಿರುವ ಬಂಗ್ಲಗುಡ್ಡೆಯಲ್ಲಿ ಎಸ್ ಐಟಿ ಅಧಿಕಾರಿಗಳು ಶೋಧ ಕಾರ್ಯ ಆರಂಭಿಸಿದ್ದಾರೆ. ಬುರುಡೆ ಪ್ರಕರಣಕ್ಕೆ ಸಂಬಂಧಿಸಿದ ಕೆಲ ಸಾಕ್ಷಿಗಳನ್ನು ಕರೆತಂದು ಸ್ಥಳದಲ್ಲಿ ಶೋಧ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ.
ಎಸ್ ಐಟಿ ಅಧಿಕಾರಿಗಳು, ಎಫ್ ಎಸ್ ಎಲ್ ತಜ್ಞರು, ಸೋಕೋ ಟೀಂ ಸೇರಿದಂತೆ ಅಧಿಕಾರಿಗಳ ತಂಡ ಸ್ಥಳದಲ್ಲಿ ಬೀಡು ಬಿಟ್ಟಿದ್ದು, ಪರಿಶೀಲನೆ ನಡೆಸಲಾಗುತ್ತಿದೆ. ಎರಡನೇ ಬಾರಿ ಎಸ್ ಐಟಿ ತಂಡ ನಡೆಸುತ್ತಿರುವ ಈ ಶೋಧಕಾರ್ಯಾಚರಣೆ ತೀವ್ರ ಕುತೂಹಲ ಮೂಡಿಸಿದೆ.

