ಧಾರವಾಡ: ಕೊಲೆ ಆರೋಪದಲ್ಲಿ ಜೈಲು ಸೇರಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಕೈದಿ ಕಾರಾಗೃಹದಲ್ಲಿಯೇ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಧಾರವಾಡ ಕೇಂದ್ರ ಕಾರಾಗೃಹದಲ್ಲಿ ನಡೆದಿದೆ.
ಈಶ್ವರಪ್ಪ ಪೂಜಾರ್ ಆತ್ಮಹತ್ಯೆಗೆ ಶರಣಾದ ಕೈದಿ. 14 ವರ್ಷಗಳ ಜೈಲು ಶಿಕ್ಷೆ ಪೈಕಿ 7 ವರ್ಷ ಪೂರೈಸಿದ್ದ ಈಶ್ವರಪ್ಪ, ಇದೀಗ ಏಕಾಏಕಿ ಜೈಲಿನಲ್ಲಿಯೇ ನೇಣು ಬಿಗಿದಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಈಶ್ವರಪ್ಪ ಗದಗ ಜಿಲ್ಲೆಯ ಲಕ್ಷ್ಮೀಶ್ವರ ಮೂಲದವನು. ಪತ್ನಿ ಹತ್ಯೆಗೈದು ಜೈಲು ಸೇರಿದ್ದ. ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಲಯ ಈಶ್ವರಪ್ಪೆಗೆ 14 ವರ್ಷಗಳ ಕಾಲ ಜೀವಾವಧಿ ಶಿಕ್ಷೆ ವಿಧಿಸಿತ್ತು. ಏಳು ವರ್ಷದ ಜೈಲು ಶಿಕ್ಷೆ ಮುಗಿಸಿದ್ದ. ಇದೀಗ ಜೈಲಿನ ಆವರಣದಲ್ಲಿದ್ದ ನಿರ್ಮಾಣ ಹಂತದ ಕಟ್ಟಡದಲ್ಲಿ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾನೆ.
ಜೈಲು ಸಿಬ್ಬಂದಿಗಳ ನಿರ್ಲಕ್ಷವೇ ಕೈದಿ ಆತ್ಮಹತ್ಯೆಗೆ ಕಾರಣ ಎಂಬ ಆರೋಪ ಕೇಳಿಬಂದಿದೆ. ಧಾರವಾಡ ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

