ಧಾರವಾಡ: ಪೊಲೀಸರ ಕಿರುಕುಳಕ್ಕೆ ಬೇಸತ್ತು ಬಿಎಸ್ ಸಿ ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಧಾರವಾಡ ವಿದ್ಯಾಗಿರಿ ಠಾಣೆ ಇನ್ಸ್ ಪೆಕ್ಟರ್ ನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ವಿದ್ಯಾಗಿರಿ ಠಾಣೆಯ ರಫೀಕ್ ತಹಶಿಲ್ದಾರ್ ಅಮಾನತುಗೊಂಡಿರುವ ಪೊಲೀಸ್ ಇನ್ಸ್ ಪೆಕ್ಟರ್. ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರ್ ಶಶಿಕುಮಾರ್ ಇನ್ಸ್ ಪೆಕ್ಟರ್ ಅಮಾನತು ಮಾಡಿ ಆದೇಶ ಹೊರಡಿಸಿದ್ದರು.
ಗಾಂಜಾ ಕೇಸ್ ನಲ್ಲಿ ಪೊಲಿಸರು ಲಂಚಕ್ಕೆ ಬೇಡಿಕೆ ಇಟ್ಟು ವಿದ್ಯಾರ್ಥಿಗೆ ಕಿರುಕುಳ ನೀಡಿದ್ದರು. ಇದರಿಂದ ಮನನೊಂದಿದ್ದ ವಿದ್ಯಾರ್ಥಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದ. ಪ್ರಕರಣ ಸಂಬಂಧ ನಿನ್ನೆ ವಿದ್ಯಾಗಿರಿ ಠಾಣೆಯ ಮೂವರು ಕಾನ್ಸ್ ಟೇಲ್ ಗಳನ್ನು ಸಸ್ಪೆಂಡ್ ಮಾಡಿ ಆದೇಶ ಹೊರಡಿಸಿದ್ದ ಕಮಿಷನರ್ ಇಂದು ಇನ್ಸ್ ಪೆಕ್ಟರ್ ರನ್ನು ಸಸ್ಪೆಂಡ್ ಮಾಡಿ ಆದೇಶ ಹೊರಡಿಸಿದ್ದಾರೆ.
ಗಾಂಜಾ ಕೇಸ್ ನಲ್ಲಿ ಇತ್ತೀಚೆಗೆ ಪೊಲೀಸರು ಹತ್ತು ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಇದರಲ್ಲಿ ಧಾರವಾಡದ ಕಿಟೆಲ್ ಕಾಲೇಜು ವಿದ್ಯಾರ್ಥಿ ಆದಿತ್ಯ ಮ್ಯಾಗೇರಿಯನ್ನು ವಶಕ್ಕೆ ಪಡೆಯಲಾಗಿತ್ತು. ವೈದ್ಯಕೀಯ ತಪಾಸಣೆ ವೇಳೆ ಆದಿತ್ಯ ವರದಿಯಲ್ಲಿ ನೆಗೆಟಿವ್ ಬಂದಿತ್ತು. ಈ ಹಿನ್ನೆಲೆಯಲ್ಲಿ ಆತನನ್ನು ಬಿಟ್ಟು ಕಳುಹಿಸಿದ್ದರು. ತಾನು ಗಾಂಜಾ ಸೇವಿಸಿದಿದ್ದರೂ ಸುಳ್ಳು ಕೇಸ್ ಹಾಕಿ ತನ್ನನ್ನು ವಶಕ್ಕೆ ಪಡೆದಿದ್ದಕ್ಕೆ ಮನನೊಂದಿದ್ದ ಆದಿತ್ಯನಿಗೆ ಪೊಲೀಸರು ಕರೆ ಮಾಡಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರಂತೆ. ಇದರಿಂದ ಇನ್ನಷ್ಟು ಆತಂಕಗೊಂಡಿದ್ದ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣಾಗಿದ್ದ. ಈ ಹಿನ್ನೆಲೆಯಲ್ಲಿ ಇದೀಗ ಪೊಲೀಸರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗಿದೆ.

