ಧಾರವಾಡ: ಚಿಕಿತ್ಸೆಗೆಂದು ಧಾರವಾಡ ಜಿಲ್ಲಾಅಸ್ಪತ್ರೆಗೆ ಬಂದ ದಂಪತಿ ಬಳಿಕ 112 ಸಹಾಯವಾಣಿಗೆ ಕರೆ ಮಾಡಿ ಪೊಲೀಸರೊಂದಿಗೆ ಕಿರಿಕ್ ಮಾಡಿರುವ ಘಟನೆ ನಡೆದಿದೆ.
ಧಾರವಾಡ ತಾಲೂಕಿನ ಅಮ್ಮಿನಭಾವಿ ಗ್ರಾಮದ ದಂಪತಿ ಪೊಲೀಸರೊಂದಿಗೆ ವಾಗ್ವಾದಕ್ಕಿಳಿದು ಗಲಾಟೆ ಮಾಡಿದವರು. ಪತ್ನಿಯ ಬೆನ್ನು ನೋವಿನ ಹಿನ್ನೆಲೆಯಲ್ಲಿ ಆ್ಯಂಬುಲೆನ್ಸ್ ಮೂಲಕ ದಂಪತಿ ಜಿಲ್ಲಾಸ್ಪತ್ರೆಗೆ ಬಂದಿದ್ದರು. ಚಿಕಿತ್ಸೆ ಮುಗಿದ ಬಳಿಕ ಪತಿ ಮಹಾಶಯ ಹೊಸ ವರಸೆ ಆರಂಭಿಸಿದ್ದಾನೆ.
ನಮಗೆ ಸೂಕ್ತ ಚಿಕಿತ್ಸೆ ಸಿಕ್ಕಿಲ್ಲ ಎಂದು ಆರೋಪಿಸಿ 112 ಸಂಖ್ಯೆಗೆ ಕರೆ ಮಾಡಿದ್ದಾನೆ. ಸ್ಥಳಕ್ಕೆ ಬಂದ ತುರ್ತು ವಾಹನದ ಪೊಲೀಸ್ ಸಿಬ್ಬಂದಿ ವಿಚಾರಿಸಿದಾಗ ಅವರ ಬಳಿ, ನಮ್ಮಿಬ್ಬರನ್ನೂ ನಮ್ಮ ಊರಿಗೆ ಕರೆದುಕೊಂಡು ಹೋಗಿ ಬಿಡಬೇಕು ಎಂದು ಹಠ ಹಿಡಿದು ಕಿರಿಕ್ ಮಾಡಿದ್ದಾನೆ.
ಅದಕ್ಕೆ ನಿಯಮಾವಳಿಗಳ ಪ್ರಕಾರ ಅವಕಾಶವಿಲ್ಲ ಎಂದು ಪೊಲೀಸರು ನಿರಾಕರಿಸಿದಾಗ, ದಂಪತಿ ಪೊಲೀಸರೊಂದಿಗೇ ತೀವ್ರ ವಾಗ್ವಾದಕ್ಕಿಳಿದಿದ್ದಾರೆ. ದಂಪತಿಯನ್ನು ಸಮಾಧಾನ ಪಡಿಸಿ ಸ್ಥಳದಿಂದ ಅವರನ್ನು ಕಳುಹಿಸುವಷ್ಟರಲ್ಲಿ ಪೊಲೀಸರೇ ಸುಸ್ತಾಗಿದ್ದಾರೆ. ಪೊಲೀಸರೊಂದಿಗೆ ದಂಪತಿಯ ಗಲಾಟೆ ಸಾಮಜೈಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.

