ದಕ್ಷಿಣ ಭಾರತದ ಖ್ಯಾತ ನಟ ಧನುಷ್ ತಮ್ಮ ಮುಂದಿನ ಸಿನಿಮಾಗಳ ಮೂಲಕ ಚಿತ್ರರಂಗದಲ್ಲಿ ಸಂಚಲನ ಮೂಡಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಅವರ 54ನೇ ಚಿತ್ರ ‘ಕಾರಾ’ (Kara) ದ ಫಸ್ಟ್ ಲುಕ್ ಬಿಡುಗಡೆಯಾಗಿ ಅಭಿಮಾನಿಗಳಲ್ಲಿ ಸಂಭ್ರಮ ಮೂಡಿಸಿತ್ತು. ಇದರ ಬೆನ್ನಲ್ಲೇ ಈಗ ಅವರ 55ನೇ ಚಿತ್ರದ (D55) ಅಧಿಕೃತ ಘೋಷಣೆಯಾಗಿದ್ದು, ಸಿನಿಮಾ ಪ್ರೇಮಿಗಳಲ್ಲಿ ಕುತೂಹಲ ದುಪ್ಪಟ್ಟಾಗಿದೆ.
‘ಅಮರನ್’ ನಿರ್ದೇಶಕನ ಜೊತೆ ಧನುಷ್ ಕೈಜೋಡಿ ಇತ್ತೀಚೆಗಷ್ಟೇ ಶಿವಕಾರ್ತಿಕೇಯನ್ ನಟನೆಯ ‘ಅಮರನ್’ ಚಿತ್ರದ ಮೂಲಕ ದೊಡ್ಡ ಯಶಸ್ಸು ಕಂಡ ನಿರ್ದೇಶಕ ರಾಜಕುಮಾರ್ ಪೆರಿಯಸಾಮಿ ಈಗ ಧನುಷ್ ಅವರ 55ನೇ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ವಿಶೇಷವೆಂದರೆ, ಈ ಚಿತ್ರವನ್ನು ಧನುಷ್ ಅವರ ಸ್ವಂತ ಬ್ಯಾನರ್ ‘ವುಂಡರ್‌ಬಾರ್ ಫಿಲ್ಮ್ಸ್’ ಮತ್ತು ‘ಆರ್‌ಟೇಕ್ ಸ್ಟುಡಿಯೋಸ್’ ಜಂಟಿಯಾಗಿ ನಿರ್ಮಿಸುತ್ತಿವೆ. ಸದ್ಯ ಚಿತ್ರತಂಡ ಹಂಚಿಕೊಂಡಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿವೆ.
ತಾರಾಗಣದಲ್ಲಿ ದೊಡ್ಡ ಹೆಸರುಗಳು? ವರದಿಗಳ ಪ್ರಕಾರ, ಈ ಚಿತ್ರದಲ್ಲಿ ಧನುಷ್‌ಗೆ ಜೋಡಿಯಾಗಿ ನ್ಯಾಚುರಲ್ ಸ್ಟಾರ್ ಸಾಯಿ ಪಲ್ಲವಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ‘ರೌಡಿ ಬೇಬಿ’ ಹಾಡಿನ ನಂತರ ಈ ಜೋಡಿ ಮತ್ತೆ ಒಂದಾಗುತ್ತಿರುವುದು ಅಭಿಮಾನಿಗಳಿಗೆ ದೊಡ್ಡ ಸರ್ಪ್ರೈಸ್ ಆಗಿದೆ. ಇನ್ನು ವಿಶೇಷ ಪಾತ್ರವೊಂದರಲ್ಲಿ ಮಲಯಾಳಂ ಸೂಪರ್‌ಸ್ಟಾರ್ ಮಮ್ಮುಟ್ಟಿ ಕಾಣಿಸಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ. ಸಮಾಜದ ‘ಅನ್‌ಸಂಗ್ ಹೀರೊ’ಗಳ ಕಥೆಯನ್ನು ಈ ಸಿನಿಮಾ ಒಳಗೊಂಡಿರಲಿದೆ ಎಂದು ನಿರ್ದೇಶಕರು ಸುಳಿವು ನೀಡಿದ್ದಾರೆ.
‘ದಿ ನೇಮ್ ಈಸ್ ಕಾರಾ’ ಝಲಕ್ ಇನ್ನೊಂದೆಡೆ, ವಿಘ್ನೇಶ್ ರಾಜಾ ನಿರ್ದೇಶನದ ಧನುಷ್ ಅವರ 54ನೇ ಸಿನಿಮಾ ‘ಕಾರಾ’ ಈಗಾಗಲೇ ಸದ್ದು ಮಾಡುತ್ತಿದೆ. ಇದರ ಟೀಸರ್‌ನಲ್ಲಿ ಧನುಷ್ ಅತ್ಯಂತ ರಗಡ್ ಮತ್ತು ತೀವ್ರವಾದ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. “ಏನೇ ಬಿತ್ತಿದರೂ ಅದನ್ನು ಅವನೇ ಉಣ್ಣಬೇಕು” ಎಂಬ ಧನುಷ್ ಅವರ ಹಿನ್ನೆಲೆ ಧ್ವನಿ ಚಿತ್ರದ ಗಂಭೀರತೆಯನ್ನು ತಿಳಿಸುತ್ತಿದೆ. ಈ ಚಿತ್ರದಲ್ಲಿ ಮಮಿತಾ ಬೈಜು, ಜಯರಾಮ್ ಮತ್ತು ಕೆ.ಎಸ್. ರವಿಕುಮಾರ್ ಅವರಂತಹ ಪ್ರಮುಖ ನಟರಿದ್ದಾರೆ. ಜಿ.ವಿ. ಪ್ರಕಾಶ್ ಕುಮಾರ್ ಸಂಗೀತ ನೀಡುತ್ತಿದ್ದು, ಈ ಬೇಸಿಗೆಯಲ್ಲಿ ಚಿತ್ರ ಬಿಡುಗಡೆಯಾಗುವ ನಿರೀಕ್ಷೆಯಿದೆ.

