ಒಂದು ಕಡೆ ವಿದೇಶದಲ್ಲಿ ಭಾರತೀಯರು ಸಿಲುಕಿದ್ದಾರೆ. ಮತ್ತೊಂದು ಕಡೆ ಭಾರತಕ್ಕೆ ಆಗಮಿಸುವ ವಿದೇಶಿ ವಿಮಾನಯಾನ ಸಂಸ್ಥೆಗಳಿಗೆ ಡಿಜಿಸಿಎ ಬುಧವಾರದಿಂದಲೇ ಜಾರಿಗೆ ಬರುವಂತೆ ಕಠಿಣ ನಿಯಮಗಳನ್ನು ಘೋಷಣೆ ಮಾಡಿದೆ.
ವಿದೇಶಿ ವಿಮಾನಯಾನ ಸಂಸ್ಥೆಗಳಿಗೆ ಡಿಜಿಸಿಎ ಬುಧವಾರ ಹೊಸ ಕಟ್ಟುನಿಟ್ಟಿನ ನಿಯಮಗಳನ್ನು ವಿಧಿಸಿದೆ. ವಿದೇಶಿ ವಿಮಾನಯಾನ ಸಂಸ್ಥೆಗಳು ಭಾರತದಲ್ಲಿ ಇಳಿಯಲು ಅನುಮತಿ ಇದೆ, ಆದರೆ ಅವು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯದಿಂದ (ಡಿಜಿಸಿಎ) ಮೂಲಕ ಕಡ್ಡಾಯವಾಗಿ ಅಧಿಕೃತ ಅನುಮತಿಯನ್ನು ಪಡೆಯಲೇಬೇಕು.
ಈ ಹೊಸ ನಿಯಮ ಮಾರ್ಚ್ 11, 2026 ರಿಂದ ಜಾರಿಗೆ ಬರಲಿದೆ. ವಿದೇಶಿ ವಿಮಾನಗಳು ಭಾರತದಲ್ಲಿ ಇಳಿಯುವ ಮೊದಲು ಡಿಜಿಸಿಎಯಿಂದ ಸ್ಪಷ್ಟವಾದ ಅನುಮೋದನೆಯನ್ನು ಪಡೆಯುವುದು ಕಡ್ಡಾಯವಾಗಿದೆ.
ವಿಮಾನಯಾನದ ಸುರಕ್ಷತೆಯನ್ನು ಹೆಚ್ಚಿಸುವುದು ಮತ್ತು ನಿಯಂತ್ರಣ ಮೇಲ್ವಿಚಾರಣೆಯನ್ನು ಬಲಪಡಿಸುವುದು ಈ ಹೊಸ ಕಟ್ಟುನಿಟ್ಟಿನ ನಿಯಮಗಳ ಮುಖ್ಯ ಗುರಿಯಾಗಿದೆ.
ವಿಮಾನ ಕಾರ್ಯಾಚರಣೆಯ ನಿಯಂತ್ರಣವನ್ನು ಉತ್ತಮಪಡಿಸಲು ಮತ್ತು ಅಂತರಾಷ್ಟ್ರೀಯ ವಿಮಾನಯಾನ ಸಂಸ್ಥೆಗಳು ಭಾರತೀಯ ವಿಮಾನಯಾನ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿವೆಯೇ? ಎಂದು ಖಚಿತಪಡಿಸಿಕೊಳ್ಳಲು ಈ ಕ್ರಮ ಕೈಗೊಳ್ಳಲಾಗಿದೆ.
ರಾಜ್ಯಸಭೆಯಲ್ಲಿ ಸಚಿವ ಮುರಳೀಧರ್ ಮೊಹೋಲ್ ಮಾತನಾಡಿ 2025ರ ಡಿಸೆಂಬರ್‌ನಲ್ಲಿ ಇಂಡಿಗೋ ವಿಮಾನಯಾನ ಸಂಸ್ಥೆಯಿಂದ ಉಂಟಾದ ವಿಮಾನ ಸೇವೆಗಳ ಆಡಚಣೆಗಳ ಬಳಿಕ ಡಿಜಿಸಿಎ ಪ್ರಯಾಣಿಕ ಸ್ನೇಹಿಯಾದ ಹಲವು ಕ್ರಮಗಳನ್ನು ಕೈಗೊಂಡಿದೆ ಎಂದು ಹೇಳಿದ್ದಾರೆ.
ಇವುಗಳಲ್ಲಿ ವಾರಕ್ಕೆ, 15 ದಿನಕ್ಕೊಮ್ಮೆ ವಿಮಾನ ಸೇವೆಗಳ ಕುರಿತು ಉನ್ನತ ಮಟ್ಟದ ಅಧಿಕಾರಿಗಳ ಪರಿಶೀಲನೆ, ವಿಮಾನಯಾನ ಸಂಸ್ಥೆಗಳ ಜೊತೆ ಸಭೆ, ಸಿಬ್ಭಂದಿ ಮತ್ತು ಪೈಲೆಟ್‌ಗಳ ಮಾಹಿತಿ ಸಂಗ್ರಹ ಮುಂತಾದವುಗಳು ಸೇರಿವೆ ಎಂದು ತಿಳಿಸಿದ್ದಾರೆ.

