ಬೆಂಗಳೂರು: ಕೆಪಿಎಸ್‌ಸಿ ಹಗರಣಕ್ಕೆ ಸಂಬಂಧಿಸಿದಂತೆ ವಶಕ್ಕೆ ಪಡೆದುಕೊಂಡಿರುವ ಐಎಎಸ್ ಅಧಿಕಾರಿ ಗ್ಯಾನೇಂದ್ರ ಕುಮಾರ್ ಅವರನ್ನು ಅದ್ಯಾವುದೋ ರಾಜ್ಯದಿಂದ ದೇವನಹಳ್ಳಿಗೆ ಕರೆಸಿ, ರೆಸಾರ್ಟ್‌ನಲ್ಲಿ ಮೂರು ದಿನ ಕೂರಿಸಿದ್ದರು ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಆರೋಪಿಸಿದ್ದಾರೆ.
ಕೆಪಿಎಸ್‌ಸಿ ಎಇಇ ನೇಮಕಾತಿ ಅಕ್ರಮ ಬಗ್ಗೆ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಕುಮಾರಸ್ವಾಮಿ, ನನಗೆ ಸಂಪೂರ್ಣ ಅಧಿಕಾರ ಸಿಕ್ಕರೆ ಕೆಪಿಎಸ್‌ಸಿ ರದ್ದು ಮಾಡುತ್ತೇನೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದರು. ಈಗ ಅಧಿಕಾರ ಸಿಕ್ಕಿದೆಯಲ್ಲ ಮಾಡಿ. ಗೃಹ ಸಚಿವರಾಗಿ ನೀವೇನು ಮಾಡಿದ್ದೀರಿ ಹೇಳಿ? ವಿದ್ಯಾರ್ಥಿಗಳ ಬದುಕಿನಲ್ಲಿ ಕೆಪಿಎಸ್‌ಸಿ ಚೆಲ್ಲಾಟ ಆಡುತ್ತಿದೆ. ಅದರ ವಿರುದ್ಧ ದನಿ ಎತ್ತಲು ನಾವು ಸದಾ ಸಿದ್ಧ. ಕೆಪಿಎಸ್‌ಸಿ ಹಂತಹಂತವಾಗಿ ಕೆಳಮಟ್ಟಕ್ಕೆ ಹೋಗಿದೆ. ಯಾವುದೇ ಭ್ರಷ್ಟಾಚಾರಕ್ಕೆ ಅವಕಾಶ ಕೊಡಲ್ಲ, ಸದೆ ಬಡಿತೀನಿ ಎಂದು ಸಿಎಂ ಹೇಳಿದ್ದರು. ಇಂಥ ಪರಿಸ್ಥಿತಿಯಲ್ಲಿರುವ ಕೆಪಿಎಸ್‌ಸಿ ಸಂಸ್ಥೆಯನ್ನು ಏನು ಸದೆ ಬಡೆಯೋದು ಎಂದು ವಾಗ್ದಾಳಿ ನಡೆಸಿದರು.
ನಾನು ಸಿಎಂ ಆಗಿದ್ದಾಗ ದಲಿತ ಸಮಾಜದವರೊಬ್ಬರಿಗೆ ಕೆಪಿಎಸ್‌ಸಿ ಅಧ್ಯಕ್ಷರನ್ನಾಗಿ ಮಾಡಿದೆ, ನನ್ನ ಸಂಬಂಧಿಕರಿಗಾಗಲೀ, ಆಪ್ತರಿಗಾಗಲೀ ಮಾಡಿಲ್ಲ. 2006ರಲ್ಲಿ ದಲಿತ ಸಮಾಜದವರಿಗೆ ಅಧ್ಯಕ್ಷ ಮಾಡಿದೆ. ನನ್ನ ಕಾಲದಲ್ಲಿ ಪ್ರಶ್ನೆ ಪತ್ರಿಕೆ ಲೀಕ್ ಆದ ಬಗ್ಗೆ ಪ್ರಿಯಾಂಕ್ ಖರ್ಗೆ ಮಾತಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಇಲಾಖೆಯ ಎಇಇ ನೇಮಕಾತಿ ಯಾವ ರೀತಿ ಮಾಡಿದ್ದೀರಿ ಪ್ರಿಯಾಂಕ್ ಖರ್ಗೆ ಅವರೇ? ರೆಸಾರ್ಟ್‌ಗೆ ಪ್ರಶ್ನೆ ಪತ್ರಿಕೆ ತೆಗೆದುಕೊಂಡು ಹೋಗಿದ್ದಾರೆ. ನಿಮ್ಮ ಬಳಿ ಇಂಟಲಿಜೆನ್ಸ್ ಇಲ್ವಾ ಖರ್ಗೆ ಅವರೇ? ರಾಹುಲ್ ಗಾಂಧಿ ದೇಶವೆಲ್ಲ ಸುತ್ತಿ ವಿದ್ಯಾರ್ಥಿಗಳ ಜೊತೆ ಸಂವಾದ ಮಾಡುತ್ತಿದ್ದಾರೆ. ಅವರನ್ನು ಇಲ್ಲಿ ಕರೆಸಿ, ನಮ್ಮ ರಾಜ್ಯದ ಯುವಕರ ಜೊತೆ ಸಂವಾದ ಮಾಡಲಿ ಎಂದು ಎಂದು ಗುಡುಗಿದರು.
ಜನವರಿ 1, 2024ರಲ್ಲಿ ಪ್ರಾವಿಷನ್ ಲಿಸ್ಟ್ ಸಿಎಸ್‌ಗೆ ಕಳುಹಿಸುತ್ತಾರೆ. ಆಗ ಅದನ್ನ ತಡೆಹಿಡಿಯಬೇಕು ಅಂತ ಹೇಳುತ್ತಾರೆ. ಇಲ್ಲಿವರೆಗೂ ಕೋರ್ಟ್‌ಗೂ ಅಬ್ಜೆಕ್ಷನ್ ಹಾಕಿಲ್ಲ ಸರ್ಕಾರ. ಒಎಂಆರ್ ತಿದ್ದಿದ್ದಾರೆ, ಸಿಸಿ ಕ್ಯಾಮೆರಾ ಇಲ್ಲಾ, ಫೂಟೇಜ್ ಹಾಳು ಮಾಡಿದ್ದಾರೆ. ಹೈಕೋರ್ಟ್ ಮುಂದೆ ಅಬ್ಜೆಕ್ಷನ್ ಹಾಕಿದ್ರಾ? ಪ್ರತಿಬಾರಿ ಕೋರ್ಟ್‌ನಲ್ಲಿ ಸಮಯ ಯಾಕೆ ಕೇಳಿದ್ರಿ ಪ್ರಿಯಾಂಕ್ ಖರ್ಗೆಯವರೆ? ಬಿಡದಿ ಟೌನ್ ಶಿಪ್ ಯೋಜನೆಗೆ ಆರು ಜನ ವಕೀಲರನ್ನ ಇಟ್ಟಿದ್ದಾರೆ. ಕಳೆದ ಆಗಸ್ಟ್‌ನಲ್ಲೂ ಕೋರ್ಟ್‌ಗೆ ಸಮಯ ಕೇಳಿದ್ದಾರೆ. ಯೋಗ್ಯತೆ ಇಲ್ಲದವರಿಗೆ ಪರೀಕ್ಷೆ ಬರೆಯೋದಕ್ಕೆ ಅವಕಾಶ ಕೊಟ್ಟಿದ್ದಾರೆ, ನೇಮಕಾತಿ ಮಾಡಿದ್ದೀರಾ? ಆರ್‌ಎಸ್‌ಎಸ್ ಬಗ್ಗೆ ಮಾತಾಡ್ತಿರಲ್ಲಾ, ಕಾಂಗ್ರೆಸ್ ನಾಯಕರು ಏನು ಪರಿಶುದ್ಧ ಮಾಡಿದ್ದೀರಾ? ಬಿಡಿಎ ಅರ್ಕಾವತಿ ಲೆಔಟ್ ನಾಶ ಮಾಡಿದವರಿಗೆ ಕೆಪಿಎಸ್‌ಸಿ ಚೇರ್ಮನ್ ಮಾಡ್ತಿರಾ? ಬೀದಿ ಬೀದಿಯಲ್ಲಿ ಒಂದು ಕೋಟಿ ತಗೊಂಡ್ರಲ್ಲಾ ಹೇಳಿ ಕಾಂಗ್ರೆಸ್ ನಾಯಕರೇ? 75 ಸಾವಿರ ಯುವಕರಿಗೆ ಉದ್ಯೋಗ ಕೊಡುತ್ತೇವೆ ಅಂತ ಹೇಳಿದ್ರಲ್ಲಾ, ಯಾವ ಆಧಾರದ ಮೇಲೆ ಸದಸ್ಯರನ್ನ ಆಯ್ಕೆ ಮಾಡುತ್ತಿದ್ದೀರಿ? ರಾಷ್ಟ್ರೀಯ ಅದ್ಯಕ್ಷರು ಯುವಕರ ಸಂವಾದ ಮಾಡುತ್ತಾರೆ. ಮುಂದಿನ ಪ್ರಧಾನಿ ಅಂತಾರಲ್ಲಾ ಕರೆಯರಿ ನಮ್ಮ ರಾಜ್ಯಕ್ಕೆ ಎಂದರು.
ಪಶುವೈದ್ಯಾಧಿಕಾರಿ ನೇಮಕಾತಿಯಲ್ಲಿ ಅಕ್ರಮ ಆಗಿದೆ. ರ‍್ಯಾಂಕ್ ವಿದ್ಯಾರ್ಥಿಗಳು ಇಲ್ಲಿ ಕೊನೆಯಲ್ಲಿ ಇದ್ದಾರೆ. ಕಳೆದ ಮೂರು ವರ್ಷದಲ್ಲಿ ಎಷ್ಟು ಉದ್ಯೋಗ ಕೊಟ್ಟಿದ್ದೀರಿ ಎಂದು ಜನರ ಮುಂದಿಡಿ. ಕೆಪಿಎಸ್‌ಸಿ ಯಾವಾಗ ತೊಳೀತೀರಿ ಹೇಳಿ? ಎಂತೆಂಥವರನ್ನು ಅಧ್ಯಕ್ಷರಾಗಿ ಮಾಡಿದ್ದೀರಲ್ಲ? ನಿಮ್ಮ ಅನ್ಯಾಯದ ದಾಖಲೆಗಳು ಕಣ್ಮುಂದೆ ಇವೆ. ಕೆಪಿಎಸ್‌ಸಿ ಸದಸ್ಯರ ಅಧಿಕಾರ ಏನು, ಕೆಲಸ ಏನು? ನೀವು ಸರ್ಕಾರದ ಅಧೀನದಲ್ಲಿದ್ದೀರ. ಕೆಪಿಎಸ್‌ಸಿ ಕಾರ್ಯದರ್ಶಿ ಅಧಿಕಾರ ಏನು, ಕಂಟ್ರೋಲರ್ ಅಧಿಕಾರ ಏನು? ಕೆಪಿಎಸ್‌ಸಿಯಲ್ಲಿರುವ ಒಬ್ಬ ಐಎಎಸ್ ಅಧಿಕಾರಿ ಮೇಲೆ ಕ್ರಮ ಆಗಿದೆಯಾ? ಬರೀ ಹೇಳಿಕೆ ಕೊಡಬೇಡಿ, ಪ್ರಾಮಾಣಿಕವಾಗಿ ಕೆಲಸ ಮಾಡಿ. ಬಹಳ ದಿನ ಇದೆಲ್ಲ ನಡೆಯಲ್ಲ, ಬಹಳ ಜನ ಹೊರಟು ಹೋಗಿದ್ದಾರೆ. 2013ರಿಂದಲೂ ಕೆಪಿಎಸ್‌ಸಿ ಸರಿಪಡಿಸಿಲ್ಲ, ಇಲ್ಲಿಯವರೆಗೂ ಏನ್ ಮಾಡಿದ್ರಿ ಎಂದು ಪ್ರಶ್ನಿಸಿದರು.
ಎಇಇ ನೇಮಕಾತಿ ಅಕ್ರಮಕ್ಕೆ ಸರ್ಕಾರವೇ ನೇರ ಹೊಣೆ. ಪಶುವೈದ್ಯಾಧಿಕಾರಿ ನೇಮಕಾತಿ ಅಕ್ರಮಕ್ಕೆ ನೇರ ಹೊಣೆ ಸರ್ಕಾರ. ಯಾರಿಗೆ ತಲೆದಂಡ ಮಾಡ್ತೀರಿ? ಇಡಿ ತನಿಖೆ ಶುರುಮಾಡಿದ ಮೇಲೆ ಎಚ್ಚೆತ್ತುಕೊಳ್ತೀರಾ? ಪ್ರತಿಭಾನ್ವಿತ ವಿದ್ಯಾರ್ಥಿಗಳು ಕಣ್ಣೀರು ಹಾಕುತ್ತಿದ್ದಾರೆ. ನಮ್ಮ ಜೊತೆ ಸೇರಿ ದುಡ್ಡು ಕೊಟ್ರೆ ಪರೀಕ್ಷೆ ಪಾಸ್ ಮಾಡಬಹುದು ಅಂತಾರೆ. ಫೋನ್ ಮಾಡಿದ ನಂಬರ್ ತೆಗೆಸೋಕೆ ಆಗಲ್ವಾ? ಗ್ಯಾನೇಂದ್ರ ಅವರನ್ನ ದೆಹಲಿಗೆ ಕಳುಹಿಸಲು ಪರ್ಮಿಷನ್ ಕೊಟ್ಟವರು ಯಾರು? ದೆಹಲಿಯಲ್ಲಿ ಏನಾಯ್ತು ಅವರ ಸ್ನೇಹಿತರು ಏನು ಹೇಳಿದ್ರು? ತನಿಖೆಗೆ ಹೋಗೊವರೆಗೆ ಯಾವ ದೇವನಹಳ್ಳಿ ರೆಸಾರ್ಟ್‌ನಲ್ಲಿ ಇರಿಸಿಕೊಂಡಿದ್ರಿ ಮೂರು ದಿನ? ಎಂದು ಪ್ರಶ್ನಿಸಿದ್ದಾರೆ.
ಮೊನ್ನೆ ಅಧಿವೇಶನದಲ್ಲಿ ಕಪಿಎಸ್ಸಿ ನೇಮಕಾತಿ ಅಕ್ರಮಗಳ ಸಂಬಂಧ ಕೇಳಲಾದ ಚುಕ್ಕೆ ಗುರುತ್ತಿಲ್ಲದ ಪ್ರಶ್ನೆಗೆ ಉತ್ತರಿಸಿದ ಸಿಎಂ ಇದೇ ಆರ್ ಡಿಪಿಆರ್ ಸಹಾಯಕ ಕಾರ್ಯಕಾರಿ ಎಂಜಿನಿಯರ್ ನೇಮಕಾತಿ ಬಗ್ಗೆ ಉಲ್ಲೇಖಿಸಿದ್ದಾರೆ. ಅದರ ವಿವರಣೆಗಳನ್ನು ಉತ್ತರದಲ್ಲಿ ನೀಡಿದ್ದಾರೆ. 18.2.2022 ಕೆಪಿಎಸ್‌ಸಿ ಅಧ್ಯಕ್ಷರು ಸಿಎಸ್ ಗೆ ಪತ್ರ ಬರೆದು, ಕೆಪಿಎಸ್‌ಸಿ ಕಾರ್ಯದರ್ಶಿ ಕಳುಹಿಸಿರುವ ಅಂತಿಮ ಆಯ್ಕೆ ಪಟ್ಟಿಯನ್ನು ತಡೆ ಹಿಡಿಯುವಂತೆ ಕೋರಿದ್ದರು. 22.2.2024ಕ್ಕೆ ಹೊಸ ಕೆಪಿಎಸ್‌ಸಿ ಕಾರ್ಯದರ್ಶಿ ಆರ್‌ಡಿಪಿಆರ್ ಪ್ರಾಧಾನ ಕಾರ್ಯದರ್ಶಿ ಗೆ ಪತ್ರ ಬರೆದು ನೇಮಕಾತಿ ಪತ್ರ ವಿತರಿಸದಂತೆ ಕೋರಿದ್ದರು. ಮೊದಲಿದ್ದ ಕೆಪಿಎಸ್‌ಸಿ ಕಾರ್ಯದರ್ಶಿಯನ್ನು ಅಮಾನತು ಮಾಡಲಾಗಿದೆ ಎಂದು ಕೋರ್ಟ್‌ಗೆ ಹೇಳಿಕೊಂಡಿದ್ದಾರೆ. ಬಳಿಕ ಬಂದ ಹೊಸ ಕಾರ್ಯದರ್ಶಿ, ನೇಮಕಾತಿ ಆದೇಶವನ್ನು ವಿತರಣೆ ಮಾಡದಂತೆ ಆರ್‌ಡಿಪಿಆರ್ ಪ್ರಧಾನ ಕಾರ್ಯದರ್ಶಿಗೆ ಪತ್ರವನ್ನು ಬರೆಯುತ್ತಾರೆ ಎಂದರು.
ಪತ್ರ ಬರೆದಿದ್ದರೂ 25.6.2024 ಹಾಗೂ 8.7.2024ರಲ್ಲಿ 24 ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ಕೊಟ್ಟರು. ಪ್ರಕರಣ ಸಂಬಂಧ ಕೋರ್ಟ್ಗಳಲ್ಲಿ ಈ ಸರ್ಕಾರ ಯಾವುದೇ ರೀತಿಯ ಆಕ್ಷೇಪಣೆಗಳನ್ನು ಸಲ್ಲಿಸುವುದೇ ಇಲ್ಲ. ಪ್ರತಿ ವಿಚಾರಣೆ ವೇಳೆಯೂ ಕೋರ್ಟ್ ನಲ್ಲಿ ಸರ್ಕಾರದ ವತಿಯಿಂದ ಯಾವುದೇ ಆಕ್ಷೇಪಣೆಗಳು ಸಲ್ಲಿಕೆ ಆಗುವುದಿಲ್ಲ. ಕೆಪಿಎಸ್‌ಸಿ ಉಪ ಸಮಿತಿ ಈ ನೇಮಕಾತಿ ಪ್ರಕ್ರಿಯೆಯಲ್ಲಿ ಲೋಪ ದೋಷಗಳಾಗಿವೆ. ಒಎಂಆರ್ ಶೀಟ್ ತಿದ್ದಲಾಗಿದೆ, ಸಿಸಿಟಿವಿ ಫೂಟೇಜುಗಳೇ ಇಲ್ಲ ಎಂದು ಹೇಳಿದ ಬಳಿಕನೂ ಹೈಕೋರ್ಟ್ ವಿಚಾರಣೆಯಲ್ಲಿ ಪ್ರತಿ ಬಾರಿಯೂ ನಮಗೆ ಟೈಮ್ ಕೊಡಿ, ಟೈಮ್ ಕೊಡಿ ಅಂತ ಕೇಳಿಕೊಳ್ಳುತ್ತಿದ್ದರು. ಪ್ರಿಯಾಂಕ್ ಖರ್ಗೆ ಅವರೇ ನಿಮ್ಮ ವಕೀಲರು ಏನು ಐಸಿಯು ಅಲ್ಲಿ ಇದ್ದಾರಾ ಎಂದು ಕಿಡಿಕಾರಿದರು.
ಪರೀಕ್ಷೆ ಬರೆಯಲು ಯೋಗ್ಯತೆ ಇಲ್ಲದವರಿಗೆಲ್ಲಾ ನೇಮಕಾತಿ ಪತ್ರವನ್ನು ಕೊಟ್ಟು ಅವರನ್ನು ಏತಕ್ಕಾಗಿ ರಕ್ಷಣೆ ಮಾಡುತ್ತಿದ್ದೀರಿ?. ನಿಮ್ಮ ಆರ್‌ಎಸ್‌ಎಸ್ ಸಿದ್ಧಾಂತ ಅವುಗಳಿಗೆಲ್ಲ ಆಮೇಲೆ ಉತ್ತರ ಕೊಡೋಣ. ಪಾರದರ್ಶಕ, ಪಾರದರ್ಶಕ ಅಂತೀರಲ್ಲ, ಇವರಿಗೆ ಏಕೆ ರಕ್ಷಣೆ ಕೊಡುತ್ತಿದ್ದೀರಿ?. ಕೆಪಿಎಸ್‌ಸಿಯನ್ನು ಪ್ರರಿಶುದ್ಧ ಮಾಡುತ್ತೇನೆ ಅಂತ ಹೇಳುತ್ತಿದ್ದೀರಿ. ಏನು ಪರಿಶುದ್ಧ ಮಾಡಿದ್ದೀರಿ?. ಕೆಪಿಎಸ್‌ಸಿ ಅಧ್ಯಕ್ಷರನ್ನಾಗಿ ಯಾರನ್ನು ಮಾಡಿದ್ದೀರಿ?. ಅರ್ಕಾವತಿ ಬಡಾವಣೆಯನ್ನು ಸಂಪೂರ್ಣ ಸರ್ವನಾಶ ಮಾಡಿದ ನಿಮಗೆ ಕಲೆಕ್ಷನ್ ಮಾಡಿ ಕೊಡುತ್ತಿದ್ದವನನ್ನು ಕೆಪಿಎಸ್‌ಸಿ ಅಧ್ಯಕ್ಷರನ್ನಾಗಿ ಮಾಡಿದ್ದೀರಲ್ಲ. ಬೀದಿ ಬೀದಿಯಲ್ಲಿ ಹುದ್ದೆಗಳನ್ನು ಹರಾಜು ಹಾಕುತ್ತಿದ್ದೀರಿ. ಕೆಲಸ ಆದವರಿಗೆ ಒಂದು ಕೋಟಿ ತಗೋಳೋದು ಆಗದೆ ಇರುವವರಿಗೆ ವಾಪಸು ಕೊಡುವುದು. ನೀವು ಮಂತ್ರಿಗಳಾಗಿದ್ದೀರಲ್ಲ ಆವಾಗ ಇದೆಲ್ಲ ಗೊತ್ತಿದ್ದಿಲ್ಲವಾ?. ನಿಮ್ಮ ನಾಯಕರು ಈಗ ದೇಶ ಪೂರ್ತಿ ಸುತ್ತಾಡಿ ಯುವಕರ ಜೊತೆ ಸಂವಾದ ಅಂತ ಮಾಡುತ್ತಿದ್ದರಲ್ಲಾ, ಕರ್ನಾಟಕಕ್ಕೆ ಅವರನ್ನು ಕರೆಸಿ, ಇಲ್ಲಿ ಸಂವಾದ ಮಾಡಿಸಿ ಎಂದು ಸವಾಲು ಹಾಕಿದರು.

