ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಶಾಲೆಗಳಿಗೆ ಬಾಂಬ್ ಬೆದರಿಕೆ ಕರೆಗಳು ಮುಂದುವರೆದಿವೆ. ಇದು ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರಲ್ಲಿ ಆತಂಕಕ್ಕೆ ಕಾರಣವಾಗಿದೆ. ಇಂದು ಕೂಡ ದೆಹಲಿಯ ಎರಡು ಶಾಲೆಗಳಿಗೆ ದುಷ್ಕರ್ಮಿಗಳು ಬಾಂಬ್ ಬೆದರಿಕೆ ಹಾಕಿದ್ದಾರೆ.
ದೆಹಲಿಯ ಆರ್ಮಿ ಪಬ್ಲಿಕ್ ಸ್ಕೂಲ್ ಹಾಗೂ ಏರ್ ಫೋರ್ಸ್ ಬಾಲ ಭಾರತಿ ಶಾಲೆಗಳಿಗೆ ಬಂಬ್ ಬೆದರಿಕೆ ಸಂದೇಶ ಬಂದಿದೆ. ದೆಹಲಿಯ ಧೌಲಾ ಕುವಾಲ್ ನಲ್ಲಿರುವ ಆರ್ಮಿ ಪಬ್ಲಿಕ್ ಸ್ಕೂಲ್ ಹಾಗೂ ಲೋಧಿ ರಸ್ತೆಯಲ್ಲಿರುವ ಭಾರ ಭಾರತಿ ಶಾಲೆಯ ಇ-ಮೇಲ್ ಗೆ ದುಷ್ಕರ್ಮಿಗಳು ಬಾಂಬ್ ಬೆದರಿಕೆ ಸಂದೇಶ್ ರವಾನಿಸಿದ್ದಾರೆ.
ಎರಡೂ ಶಾಲೆಗಳಲ್ಲಿ ಬಾಂಬ್ ಇಡಲಾಗಿದ್ದು, ಕೆಲವೇ ಸಮಯದಲ್ಲಿ ಸ್ಫೋಟಿಸುವುದಾಗಿ ಸಂದೇಶ ರವಾನಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಶಾಲೆಗಳಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ವಿಷಯ ತಿಳಿಯುತ್ತಿದ್ದಂತೆ ಪೊಲೀಸರು, ಬಾಂಬ್ ಪತ್ತೆದಳ, ಬಾಂಬ್ ನಿಷ್ಕ್ರಿಯ ದಳ ಶಾಲೆಗಳಿಗೆ ಭೇಟಿ ನೀಡಿದ್ದು, ವಿದ್ಯಾರ್ಥಿಗಳು, ಶಿಕ್ಷಕರು, ಸಿಬ್ಬಂದಿಗಳನ್ನು ಹೊರಕಳುಹಿಸಿ ಶಾಲೆಗಳಲ್ಲಿ ಇಂಚಿಂಚು ಪರಿಶೀಲನೆ ನಡೆಸಲಾಗುತ್ತಿದೆ.
ಕೆಲ ದಿನಗಳ ಹಿಂದಷ್ಟೇ ದೆಹಲಿಯ ಒಂಭತ್ತು ಶಾಲೆಗಳಿಗೆ ಬಾಂಬ್ ಬೆದರಿಕೆ ಸಂದೇಶ ಬಂದಿತ್ತು. ಪರಿಶೀಲಿಸಿದಾಗ ಯಾಅವುದೇ ಸ್ಫೋಟಕಗಳು ಪತ್ತೆಯಾಗಿರಲಿಲ್ಲ. ಹಾಗಾಗಿ ಇದೊಂದು ಹುಸಿ ಬಾಂಬ್ ಕರೆ ಎಂದು ಪೊಲೀಸರು ತಿಳಿಸಿದ್ದರು. ಈಗ ಮತ್ತೆ ಎರಡು ಶಾಲೆಗಳಿಗೆ ಬಾಂಬ್ ಬೆದರಿಕೆ ಬಂದಿದ್ದು, ತಪಾಸಣೆ ನಡೆಸಲಾಗುತ್ತಿದೆ.

