ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ರೌಡಿಯೊಬ್ಬನ ಹುಟ್ಟುಹಬ್ಬದ ಪಾರ್ಟಿಯ ವಿಡಿಯೋ ಹಂಚಿಕೊಂಡ ಆರೋಪದ ಮೇಲೆ ‘ಬಿಗ್ ಬಾಸ್’ ಮಾಜಿ ಸ್ಪರ್ಧಿ ಡಾಗ್ ಸತೀಶ್ ವಿರುದ್ದ ಬೆಂಗಳೂರಿನ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ರೌಡಿಶೀಟರ್ ಪಿ. ಮೂರ್ತಿ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಡಾಗ್ ಸತೀಶ್ ಭಾಗವಹಿಸಿದ್ದು, ನಂತರ ವರ್ಣರಂಜಿತ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದರು. ಈ ವಿಡಿಯೋವನ್ನು ಗಂಭೀರವಾಗಿ ಪರಿಗಣಿಸಿದ ಸಿಸಿಬಿ ಪೊಲೀಸರು ಡಾಗ್ ಸತೀಶ್ ವಿರುದ್ಧ ಜ್ಞಾನ ಭಾರತಿ ಠಾಣೆಗೆ ದೂರು ನೀಡಿದ್ದಾರೆ.
ಪಾರ್ಟಿಯಲ್ಲಿದ್ದ ಸತೀಶ್ ಸೇರಿದಂತೆ ಇತರರಿಗೆ ಪೊಲೀಸರ ತನಿಖೆಯ ಬಿಸಿ ತಟ್ಟಿದೆ. ವಿಡಿಯೋ ಸಂಬಂಧ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಡಾಗ್ ಸತೀಶ್ ಅವರನ್ನು ವಿಚಾರಣೆಗೆ ಕರೆಯುವ ಸಾಧ್ಯತೆ ಇದೆ. ನಂತರದಲ್ಲಿ ಡಾಗ್ ಸತೀಶ್ ಅವರು ವಿಡಿಯೋ ಡಿಲೀಟ್ ಮಾಡಿದ್ದಾರೆ ಎನ್ನಲಾಗಿದೆ.

