ತುಮಕೂರು: ಸಿದ್ದರಾಮಯ್ಯನವರು ಇಡೀ ದೇಶ ಬದಲಾಯಿಸುತ್ತೇನೆ ಎಂದು ಹೋಗಲಿಲ್ಲ. ಸಮುದಾಯಗಳಿಗೆ ಏನು ಮಾಡಬಹುದು ಎಂದು ಯೋಚಿಸಿದರು ಎಂದು ಡಿಸಿಎಂ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ತುಮಕೂರಿನ ಕೇಂದ್ರ ಗ್ರಂಥಾಲಯದ ಸಭಾಂಗಣದಲ್ಲಿ ವೀರಣ್ಣನವರ ಅಭಿಮಾನಿ ಬಳಗ ಮತ್ತು ಕರ್ನಾಟಕ ರಾಜ್ಯ ವಾಲ್ಮೀಕಿ ಸಮಾಜದ ಸಮಾನ ಮನಸ್ಕರ ವೇದಿಕೆ ವತಿಯಿಂದ ಆಯೋಜಿಸಿದ್ದ ಮಾಜಿ ಸಚಿವರಾದ ಸಿ.ವೀರಣ್ಣನವರಿಗೆ ನುಡಿ ನಮನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ದೇವರಾಜ ಅರಸು ಅವರು ದ್ವನಿ ಇಲ್ಲದವರಿಗೆ ಧ್ವನಿಕೊಟ್ಟರು. ದುರ್ಬಲ ಸಮುದಾಯಗಳಿಗೆ ಶಕ್ತಿ ಕೊಡುವ ಕೆಲಸವನ್ನು ಸಿದ್ದರಾಮಯ್ಯನವರು ಮಾಡಿದ್ದಾರೆ. ಎಂಟು ವರ್ಷ ಮುಖ್ಯಮಂತ್ರಿಗಳಾಗಿ ಕೆಲಸ ಮಾಡಿದರು. ನಾನು ಕೂಡ ಕೆಪಿಸಿಸಿ ಅಧ್ಯಕ್ಷನಾಗಿ ಜೊತೆಗೆ ಕೆಲಸ ಮಾಡಿದೆ. ಯಾವತ್ತೂ ಕೂಡ ನಮ್ಮಿಬ್ಬರ ಮಧ್ಯೆ ವ್ಯತ್ಯಾಸಗಳು ಬರಲಿಲ್ಲ. ನಾವಿಬ್ಬರೂ ಒಂದೇ ರೀತಿಯ ಯೋಚನೆ, ಚಿಂತನೆಗಳನ್ನು ಇಟ್ಟುಕೊಂಡವರು. ವಿಭಿನ್ನವಾದ ಚಿಂತನೆಗಳನ್ನು ಮಾಡಿದ್ದರೆ ಸಹಕಾರ ನೀಡಲು ಆಗುತ್ತಿರಲಿಲ್ಲ ಎಂದು ಹೇಳಿದ್ದಾರೆ.
ನನಗೆ ಬಹಳ ಆತ್ಮೀಯರು ಆಗಿದ್ದ ಮಾಜಿ ಸಚಿವರಾದ ಸಿ.ವೀರಣ್ಣ ಅವರ ಅಗಲಿಕೆ ಬಹಳ ನೋವುಂಟು ಮಾಡಿದೆ. ಅವರ ಹೆಸರು ತುಮಕೂರಿನಲ್ಲಿ ಶಾಶ್ವತವಾಗಿ ಉಳಿಯುವಂತಹ ಕೆಲಸವನ್ನು ನಾವು ಮಾಡುತ್ತೇವೆ. ನಾನು ವೀರಣ್ಣನವರ ಜೊತೆಗೆ ರಾಜಕಾರಣ ಮಾಡಿದವನಲ್ಲ. ಆದರೆ ನಾನು ವಿದೇಶದಿಂದ ಬಂದಾಗ ನಮ್ಮ ತಂದೆಯವರು ಅವರ ಮನೆಗೆ ಕರೆದುಕೊಂಡು ಹೋಗಿದ್ದರು. ನನಗೆ ಆಗ ರಾಜಕೀಯದ ಗಂಧ ಗಾಳಿಯು ಗೊತ್ತಿರಲಿಲ್ಲ. ಆ ಸಮಯದಲ್ಲಿ ವೀರಣ್ಣನವರು ಸಣ್ಣ ಉಳಿತಾಯ ಸಚಿವರು ಆಗಿದ್ದರು. ಒಬ್ಬ ಮಂತ್ರಿಯಾಗಿ ಗಾಂಧಿನಗರದಲ್ಲಿ ಸಾಮಾನ್ಯರಂತೆ ಒಂದು ಶೆಡ್‌ನಲ್ಲಿ ವಾಸಿಸುತ್ತಿದ್ದರು. ಅತಿಥಿಗಳು ಬಂದರೆ ಒಳಗಡೆ ಕುಳಿತುಕೊಳ್ಳಲು ಜಾಗ ಇರಲಿಲ್ಲ. ಕುರ್ಚಿ ತರಿಸಿ ಹೊರಗಡೆ ಕೂರಿಸಿಕೊಂಡು ಮಾತನಾಡಿಸಿದ್ದರು. ಮಂತ್ರಿಗಳು ಅಂದರೆ ಏನೇನೋ ಕಲ್ಪನೆ ಇತ್ತು. ಆದರೆ ಅವರನ್ನು ನನಗೆ ನೋಡಿ ಆಶ್ಚರ್ಯವಾಯಿತು. ಅಷ್ಟು ಸರಳತೆಯಿಂದ ಇದ್ದಂತಹ ವ್ಯಕ್ತಿ ಅವರು ಎಂದು ಸ್ಮರಿಸಿದ್ದಾರೆ.
ವೀರಣ್ಣ ಅವರು ನಿಮಗೆ ಮೆಡಿಕಲ್ ಕಾಲೇಜು ಸಿಗುವುದು ಬಹಳ ಕಷ್ಟ. ಬೇರೆಬೇರೆ ರೀತಿಯ ಮಾತುಗಳು ನಡೆಯುತ್ತಿವೆ ಎಂಬುದನ್ನು ಪ್ರಾಮಾಣಿಕವಾಗಿ ತಿಳಿಸಿದ್ದರು. ಅದೇ ಮೊದಲು ನಾನು ಅವರನ್ನು ನೋಡಿದ್ದು. ಆನಂತರ ನಾನು 1989ರಲ್ಲಿ ಚುನಾವಣೆಗೆ ಸ್ಪರ್ಧಿಸಿದೆ. ವೀರಣ್ಣನವರು ಕೊರಟಗೆರೆ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಚಿಕ್ಕಬಳ್ಳಾಪುರದಲ್ಲಿ ಮತ ಎಣಿಕೆ ನಡೆಯುತ್ತಿತ್ತು. 800 ಮತದಿಂದ ವೀರಭದ್ರಯ್ಯನವರು ಮುಂದಿದ್ದರು. ವೀರಣ್ಣನವರು ಮರು ಎಣಿಕೆ ನಡೆಸಬೇಕು, 800 ಮತ ದೊಡ್ಡದ್ದಲ್ಲ, ಮೋಸ ಮಾಡಿದ್ದಾರೆ ಎಂದು ಗಲಾಟೆ ಮಾಡಿದ್ದರು. ಆಗ ನಾನು ಹೋಗಿ ಸಮಾಧಾನ ಮಾಡಿ, ಗಲಾಟೆ ಮಾಡುವುದು ಬೇಡ, ಮರು ಎಣಿಕೆ ಮಾಡಿಸಿ ಎಂದು ಸಮಾದಾನಪಡಿಸಿದ್ದೆ ಎಂದರು.
ವೀರಣ್ಣನವರು ತೀರಿಕೊಳ್ಳುವ ಇಪ್ಪತ್ತು ದಿನದ ಮೊದಲು ಅವರ ಮನೆಗೆ ಭೇಟಿ ನೀಡಿದ್ದೆ. ಮಾತುಗಳು ಸ್ಪಷ್ಟವಾಗಿ ಬರುತ್ತಿರಲಿಲ್ಲ. ʼಪರಮೇಶ್ವರ, ಪ್ರಾಮಾಣಿಕವಾಗಿ ಇದ್ದಿದ್ದಕ್ಕೆ ಹೇಗಿದ್ದೇನೆ ನೋಡಿದ್ರʼ ಎಂದು ಕೇಳಿದ್ದರು. ಬಹಳ ನೋವಾಯಿತು. ಅವರೊಬ್ಬ ಸರಳತೆಯ ವ್ಯಕ್ತಿ. ಇಡೀ ಜೀವನದಲ್ಲಿ ಯಾವುದಕ್ಕೂ ಮತ್ತು ಯಾವ ವಿಚಾರದಲ್ಲೂ ರಾಜಿ ಆದವರೇ ಅಲ್ಲ. ಅವರ ಮಗನಿಗೆ ಕೆಲಸ ಕೊಡಲು ನನಗೆ ಹೇಳಬೇಕಾದರೆ ಮುಜುಗರ ಪಟ್ಟಿದ್ದರು. ನಾನು ನಿಮ್ಮ ಮಗನಿದ್ದಂತೆ, ನಾನು ನೋಡಿಕೊಳ್ಳುತ್ತೇನೆ ಎಂದು ಧೈರ್ಯ ತುಂಬಿದ್ದೆ ಎಂದರು.
ಇವತ್ತಿನ ಕಲುಷಿತ ರಾಜಕಾರಣದಲ್ಲಿ ವೀರಣ್ಣನವರಂತಹ ವ್ಯಕ್ತಿತ್ವ ಬಹಳ ಪ್ರಾಮುಖ್ಯತೆ ಪಡೆಯುತ್ತದೆ. ಇವತ್ತಿನ ರಾಜಕಾರಣವನ್ನು ಹೋಲಿಸಲು ಸಾಧ್ಯವಾಗುವುದಿಲ್ಲ. ರಾಜಕಾರಣದಲ್ಲಿ ಹಣದ ಮುಂದೆ ಪ್ರಾಮಾಣಿಕತೆ ಎಲ್ಲಿ ಉಳಿಯುತ್ತದೆ. ವೀರಣ್ಣನವರ ಪ್ರಾಮಾಣಿಕತೆ ಮತ್ತು ಸರಳತೆಗೆ ರೇಟಿಂಗ್ ನೀಡಲು ಆಗುವುದಿಲ್ಲ ಎಂದರು.
ನಾನು 2008ರಲ್ಲಿ ಕೊರಟಗೆರೆ ಬಂದೆ. ವೀರಣ್ಣ ಅವರು 2013ರ ಚುನಾವಣೆಯಲ್ಲಿ ನನ್ನ ಜೊತೆ ನೇರವಾಗಿ ಬಂದು ಸಹಾಯ ಮಾಡದಿದ್ದರೂ, ಪರಮೇಶ್ವರ್ ಒಳ್ಳೆಯವನು. ಅವನಿಗೆ ಮತ ಹಾಕುವಂತೆ ಸ್ನೇಹಿತರುಗಳಿಗೆ ಮತ್ತು ಮುಖಂಡರುಗಳಿಗೆ ಹೇಳುವ ಮೂಲಕ ನನ್ನೊಂದಿಗೆ ನಿಂತಿದ್ದರು. ವೀರಣ್ಣನವರನ್ನು ಕಳೆದುಕೊಂಡಿರುವುದು ನನಗೆ ವೈಯಕ್ತಿಕವಾಗಿ ನೋವಾಗಿದೆ ಎಂದರು.
ಅಂದು ತುಮಕೂರಿನ ರಾಜಕಾರಣ ಹೇಗಿತ್ತೋ ಇಂದಿಗೂ ಹಾಗೆಯೇ ಇದೆ, ಬದಲಾಗಿಲ್ಲ. ವೈ.ಕೆ.ರಾಮಯ್ಯ, ವೀರಣ್ಣ, ಲಕ್ಷ್ಮೀನರಸಿಂಹಯ್ಯ, ರಾಜವರ್ಧನ್ ಇವರೆಲ್ಲ ಹೇಗಿದ್ದರೋ, ಅದೇ ರೀತಿಯ ರಾಜಕಾರಣ ಈಗಲೂ ಜಿಲ್ಲೆಯಲ್ಲಿದೆ. ಸಮಾಜ ಬದಲಾಗಬೇಕು. ಎಲ್ಲರಂತೆ ನಾನು ಬದುಕಬೇಕು ಎಂಬ ಮಾತುಗಳು ಇಡೀ ದೇಶದಲ್ಲಿ ಬರುತ್ತಿವೆ. ಯುವಕರ ಮನಸ್ಸು ಯಾವ ರೀತಿ ಬದಲಾಗಿದೆ ಎಂಬುದನ್ನು ಯೋಚಿಸಬೇಕು. ಯುವಕರ ಆಲೋಚನೆಗಳು ಬದಲಾಗಿದೆ. ಜಾತಿ, ಧರ್ಮ, ಭಾಷೆ ಅಡ್ಡಿ ಬರುತ್ತಿಲ್ಲ. ನಮ್ಮ ಭವಿಷ್ಯ ಏನು ಎಂಬ ಪ್ರಶ್ನೆ ಇಟ್ಟುಕೊಂಡು ಹೋರಾಟಕ್ಕೆ ಇಳಿದಿದ್ದಾರೆ. ಜಾತಿ ವ್ಯವಸ್ಥೆ ಹೋಗಬೇಕಿತ್ತು, ಹೋಗಲಿಲ್ಲ. ಯುವಕರಿಗೆ ಅವಕಾಶಗಳನ್ನು ಕಲ್ಪಿಸಿಕೊಡಬೇಕು. ವಸ್ತುಸ್ಥಿತಿ ಏನಿದೆ, ಆ ಬಗ್ಗೆ ಚಿಂತನೆ ನಡೆಯಬೇಕು. ಬಡವ ಬಡವನಾಗಿಯೇ ಉಳಿಯಬಾರದು. ವೀರಣ್ಣನಂತಹ ಅತ್ಯಂತ ಪ್ರಾಮಾಣಿಕತೆಯ ವ್ಯಕ್ತಿತ್ವವನ್ನು ಮುಂದೆ ಇಟ್ಟುಕೊಂಡು ಯೋಚನೆ ಮಾಡಬೇಕಿದೆ ಎಂದರು.
ಸಿದ್ದರಾಮಯ್ಯನವರು ಅನೇಕ ಕೆಲಸ ಕಾರ್ಯಗಳನ್ನು ತುಮಕೂರಿನಲ್ಲಿ ಉದ್ಘಾಟಿಸಲು ಬಂದಿದ್ದರು. ತುಮಕೂರು ಬಸ್‌ಸ್ಟ್ಯಾಂಡ್‌ಗೆ ಹೆಸರು ಇಡಲು ಅಪಸ್ವರ ಬಂದಿತ್ತು. ದೇವರಾಜ ಅರಸು ಅವರ ಹೆಸರು ಇಡೋಣ ಎಂದು ರಾಜಣ್ಣ ಹೇಳಿದರು. ಆಗ ಸಿಎಂ ಆಗಿದ್ದ ಸಿದ್ದರಾಮಯ್ಯ ಅವರ ಗಮನಕ್ಕೆ ತಂದು ರಾತ್ರೋರಾತ್ರಿ ಫಲಕ ಹಾಕಿ, ಬೆಳಗ್ಗೆ ಉದ್ಘಾಟಿಸಲಾಯಿತು. ನಾವೆಲ್ಲರೂ ಸಮಾಜದ ಬದಲಾವಣೆಯ ದೃಷ್ಟಿಯಲ್ಲಿ ಒಂದು ಹೆಜ್ಜೆ ಮುಂದೆ ಯೋಚನೆ ಮಾಡಬೇಕು. ಸಿ.ವೀರಣ್ಣನವರ ಹೆಸರು ತುಮಕೂರಿನಲ್ಲಿ ಶಾಶ್ವತವಾಗಿ ಉಳಿಯುವಂತ ಕೆಲಸ ನಾವು ಮಾಡುತ್ತೇವೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ, ಮಧುಗಿರಿ ಶಾಸಕರು ಹಾಗೂ ಮಾಜಿ ಸಚಿವ ಕೆ.ಎನ್.ರಾಜಣ್ಣ, ಶಾಸಕರಾದ ಅಶೋಕ್ ಪಟ್ಟಣ್, ಮಾಜಿ ಸಚಿವರಾದ ಸೊಗಡು ಶಿವಣ್ಣ, ಪಿ.ಜಿ.ಆರ್.ಸಿಂಧ್ಯಾ, ಮಾಜಿ ಸಂಸದರಾದ ಜಿ.ಎಸ್.ಬಸವರಾಜ್, ವಿ.ಎಸ್.ಉಗ್ರಪ್ಪ, ಮಾಜಿ ಎಂಎಲ್‌ಸಿ ಡಾ. ಎಂ.ಆರ್.ಹುಲಿನಾಯ್ಕರ್, ಹಿರಿಯ ಪತ್ರಕರ್ತರಾದ ನಾಗಣ್ಣ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

