ಐಪಿಎಲ್ 2026ರ ಪ್ಲೇ-ಆಫ್ ರೇಸ್ ದಿನದಿಂದ ದಿನಕ್ಕೆ ಕುತೂಹಲ ಕೆರಳಿಸುತ್ತಿದ್ದು, ಇಂದು ಮಧ್ಯಾಹ್ನ ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (DC) ಮತ್ತು ಅಜೇಯ ಪಂಜಾಬ್ ಕಿಂಗ್ಸ್ (PBKS) ತಂಡಗಳು ಮುಖಾಮುಖಿಯಾಗುತ್ತಿವೆ. ಈ ಪಂದ್ಯವು ಅಕ್ಷರ್ ಪಟೇಲ್ ನೇತೃತ್ವದ ಡೆಲ್ಲಿ ತಂಡಕ್ಕೆ ಮಾಡು ಇಲ್ಲವೇ ಮಡಿ ಎಂಬಂತಿದೆ.
ಮುಖಾಮುಖಿ ದಾಖಲೆಗಳು ದೆಹಲಿ ಮತ್ತು ಪಂಜಾಬ್ ತಂಡಗಳು ಈವರೆಗೆ ಒಟ್ಟು 34 ಬಾರಿ ಹಣಾಹಣಿ ನಡೆಸಿದ್ದು, ಎರಡೂ ತಂಡಗಳು ತಲಾ 17 ಪಂದ್ಯಗಳಲ್ಲಿ ಜಯಗಳಿಸಿ ಸಮಬಲ ಸಾಧಿಸಿವೆ. ಈ ಪಂದ್ಯದಲ್ಲಿ ಗೆಲ್ಲುವ ಮೂಲಕ ಮುನ್ನಡೆ ಸಾಧಿಸಲು ಉಭಯ ತಂಡಗಳು ಹವಣಿಸುತ್ತಿವೆ.
ಪಿಚ್ ಮತ್ತು ಹವಾಮಾನ ವರದಿ ಅರುಣ್ ಜೇಟ್ಲಿ ಸ್ಟೇಡಿಯಂನ ಪಿಚ್ ಬ್ಯಾಟರ್ಗಳಿಗೆ ಸ್ವರ್ಗವಾಗಿದ್ದು, ಕಳೆದ ಪಂದ್ಯದಲ್ಲಿ ಇಲ್ಲಿ ಬರೋಬ್ಬರಿ 419 ರನ್ ದಾಖಲಾಗಿತ್ತು. ಇಂದಿನ ಪಂದ್ಯ ಮಧ್ಯಾಹ್ನ ನಡೆಯುತ್ತಿರುವುದರಿಂದ ಇಬ್ಬನಿ (Dew) ಸಮಸ್ಯೆಯಿರುವುದಿಲ್ಲ. ಆದರೆ, ದೆಹಲಿಯ ವಿಪರೀತ ಸೆಖೆ ಆಟಗಾರರಿಗೆ ಸವಾಲಾಗಲಿದೆ. ಮತ್ತೊಂದು ಹೈ-ಸ್ಕೋರಿಂಗ್ ಪಂದ್ಯವನ್ನು ಅಭಿಮಾನಿಗಳು ನಿರೀಕ್ಷಿಸಬಹುದಾಗಿದೆ.
ತಂಡಗಳ ಪರಿಸ್ಥಿತಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಸೋತು ಕಂಗೆಟ್ಟಿರುವ ಡೆಲ್ಲಿ ಕ್ಯಾಪಿಟಲ್ಸ್ ಅಂಕಪಟ್ಟಿಯ ಕೆಳಭಾಗದಲ್ಲಿದ್ದು, ನಾಯಕ ಅಕ್ಷರ್ ಪಟೇಲ್ ಮೇಲೆ ಒತ್ತಡ ಹೆಚ್ಚಿದೆ. ಮತ್ತೊಂದೆಡೆ, ಶ್ರೇಯಸ್ ಅಯ್ಯರ್ ನಾಯಕತ್ವದ ಪಂಜಾಬ್ ಕಿಂಗ್ಸ್ ಈ ಸೀಸನ್ನಲ್ಲಿ ಇದುವರೆಗೆ ಅಜೇಯವಾಗಿ ಉಳಿದಿರುವ ಏಕೈಕ ತಂಡ ಎಂಬ ಹೆಗ್ಗಳಿಕೆ ಹೊಂದಿದೆ.
ಸಂಭಾವ್ಯ ಆಟಗಾರರ ಪಟ್ಟಿ (Predicted XI):
ಡೆಲ್ಲಿ ಕ್ಯಾಪಿಟಲ್ಸ್: ಪಾತುಮ್ ನಿಸ್ಸಾಂಕ, ಕೆ.ಎಲ್. ರಾಹುಲ್ (ವಿಕೆಟ್ ಕೀಪರ್), ಸಮೀರ್ ರಿಜ್ವಿ, ನಿತೀಶ್ ರಾಣಾ, ಟ್ರಿಸ್ಟಾನ್ ಸ್ಟಬ್ಸ್, ಅಕ್ಷರ್ ಪಟೇಲ್ (ನಾಯಕ), ಡೇವಿಡ್ ಮಿಲ್ಲರ್, ಕುಲದೀಪ್ ಯಾದವ್, ಮುಖೇಶ್ ಕುಮಾರ್, ಟಿ. ನಟರಾಜನ್, ಲುಂಗಿ ಎನ್ಗಿಡಿ.
ಪಂಜಾಬ್ ಕಿಂಗ್ಸ್: ಪ್ರಭ್ಸಿಮ್ರಾನ್ ಸಿಂಗ್ (ವಿಕೆಟ್ ಕೀಪರ್), ಪ್ರಿಯಾಂಶ್ ಆರ್ಯ, ಕೂಪರ್ ಕಾನೋಲಿ, ಶ್ರೇಯಸ್ ಅಯ್ಯರ್ (ನಾಯಕ), ಶಶಾಂಕ್ ಸಿಂಗ್, ನೆಹಾಲ್ ವಧೇರಾ, ಮಾರ್ಕಸ್ ಸ್ಟೋಯಿನಿಸ್, ಮಾರ್ಕೊ ಯಾನ್ಸೆನ್, ಕ್ಸೇವಿಯರ್ ಬಾರ್ಟ್ಲೆಟ್, ಅರ್ಶ್ದೀಪ್ ಸಿಂಗ್, ಯುಜ್ವೇಂದ್ರ ಚಹಾಲ್.

