ಬೆಂಗಳೂರು: ರಾಜ್ಯದ ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಹಿನ್ನೆಲೆಯಲ್ಲಿ ಮತದಾನದ ಪ್ರಕ್ರಿಯೆ ಮುಗಿಯುವವರೆಗೆ ಚುನಾವಣೆ ಸಮೀಕ್ಷೆ ನಡೆಸುವುದನ್ನು ಚುನಾವಣಾ ಆಯೋಗ ನಿಷೇಧಿಸಿ ಆದೇಶ ಹೊರಡಿಸಿದೆ.
ಉಪ ಚುನಾವಣೆಯ ಮತದಾನ ಏಪ್ರಿಲ್ 9ರಂದು ನಡೆಯಲಿದೆ. ಅಂದಿನಿಂದ ಏಪ್ರಿಲ್ 29 ರ ಸಂಜೆ 6.30ರವರೆಗೆ ಈ ನಿಷೇಧ ಜಾಲಿಯಲ್ಲಿರುತ್ತದೆ. ಈ ಸಂಬಂಧದ ಅಧಿಸೂಚನೆಯನ್ನು ರಾಜ್ಯಪತ್ರದಲ್ಲಿ ಪ್ರಕಟಿಸಲಾಗಿದೆ. ಚುನಾವಣಾ ಆಯೋಗದ ಸೂಚನೆಯ ಪ್ರಕಾರ ದೇಶದ ಆರು ರಾಜ್ಯಗಳ ಎಂಟು ಕ್ಷೇತ್ರಗಳಲ್ಲಿ ನಡೆಯುತ್ತಿರುವ ಉಪಚುನಾವಣೆ ಗಳಿಗೆ ಸಂಬಂಧಿಸಿದಂತೆ ಚುನಾವಣೋತ್ತರ ಸಮೀಕ್ಷೆಗಳಿಗೆ ತಾತ್ಕಾಲಿಕವಾಗಿ ನಿಷೇಧ ಹೇರಲಾಗಿದೆ.
ಜನಪ್ರತಿನಿಧಿಗಳ ಕಾಯ್ದೆಯ ಪ್ರಕಾರ ಚುನಾವಣಾ ಅವಧಿಯಲ್ಲಿ ಯಾವುದೇ ವ್ಯಕ್ತಿ ಚುನಾವಣೋತ್ತರ ಸಮೀಕ್ಷೆ ನಡೆಸುವುದು ಅಥವಾ ಅದರ ಫಲಿತಾಂಶವನ್ನು ಮುದ್ರಣ ಮಾಧ್ಯಮ, ಎಲೆಕ್ಟ್ರಾನಿಕ್ ಮಾಧ್ಯಮ ಅಥವಾ ಇತರೆ ಯಾವುದೇ ರೂಪದಲ್ಲಿ ಪ್ರಕಟಿಸುವುದು ಕಾನೂನುಬಾಹಿರವಾಗಿರುತ್ತದೆ.
ಉಪಚುನಾವಣೆಗೆ ಸಂಬಂಧಿಸಿದಂತೆ ಯಾವುದೇ ರೀತಿಯ ಚುನಾವಣೋತ್ತರ ಸಮೀಕ್ಷೆ ನಡೆಸುವುದನ್ನು ಪ್ರಕಟಿಸುವುದು ಅಥವಾ ಪ್ರಸಾರ ಮಾಡುವುದನ್ನು ನಿಷೇಧಿಸಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

