ದಾವಣಗೆರೆ: ದಾವಣಗೆರೆ ಹನಿಟ್ರ್ಯಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಗ್ ಟ್ವಿಸ್ಟ್ ಸಿಕ್ಕಿದೆ.ಉದ್ಯಮಿಯೊಬ್ಬರಿಗೆ ಬ್ಲ್ಯಾಕ್ಮೇಲ್ ಮಾಡಿ ಸಿಕ್ಕಿ ಬಿದ್ದಿದ್ದ ನರ್ಸ್ ಹಾಗೂ ಗ್ಯಾಂಗ್ ಇದೀಗ ತಮ್ಮನ್ನು ಪ್ರಭಾವಿ ವ್ಯಕ್ತಿಗಳು ಈ ದಂಧೆಗೆ ಸಿಲುಕಿಸಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಬಡವರ ಬದುಕಿನೊಂದಿಗೆ ಆಟವಾಡಿದ ಪ್ರಭಾವಿಗಳಿಗೆ ಶಿಕ್ಷೆಯಾಗಬೇಕೆಂದು ಆರೋಪಿಗಳು ಒತ್ತಾಯಿಸಿದ್ದಾರೆ. ಖಾಸಗಿ ಆಸ್ಪತ್ರೆ ನರ್ಸ್ ಕಷ್ಟ ಅಂತ ಹೇಳಿಕೊಂಡು ಉದ್ಯಮಿಗೆ ಹನಿಟ್ರ್ಯಾಪ್ ಮಾಡಲು ಹೋಗಿದ್ದು, ಮಹಿಳೆ ಮತ್ತು ಆಕೆಯ ಜತೆಗೆ ಇದ್ದ ನಾಲ್ವರು ಇದೀಗ ತಮ್ಮ ತಪ್ಪಿನ ಹಿಂದೆ ಪ್ರಭಾವಿ ವ್ಯಕ್ತಿಗಳ ಕೈವಾಡ ಇದೆ ಎಂದು ಹೇಳಿದ್ದಾರೆ.
ಆರೋಪ ಹೊತ್ತಿರುವ ಬಿಳಿಚೋಡು ಚನ್ನಬಸಪ್ಪ ಮತ್ತು ಸಂಬಂಧಪಟ್ಟ ಮಹಿಳೆ ಸುದ್ದಿಗೋಷ್ಠಿ ನಡೆಸಿ, ನಾವು ಹನಿಟ್ರ್ಯಾಪ್ ಮಾಡಿಲ್ಲ, ಬದಲಾಗಿ ನಮ್ಮನ್ನು ಪ್ರಭಾವಿಗಳು ಸಂಚು ರೂಪಿಸಿ ಸಿಲುಕಿಸಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಓರ್ವ ಪ್ರಭಾವಿ ವ್ಯಕ್ತಿಯಿಂದ ನಮಗೆ ತೊಂದರೆಯಾಗಿತ್ತು ಎಂದು ಅಳಲು ತೋಡಿಕೊಂಡಿದ್ದಾರೆ.
ಈ ಬಗ್ಗೆ ನ್ಯಾಯ ಪಡೆಯಲು ನಾವು ವಕೀಲರ ಮನೆಗೆ ಹೋಗಿದ್ದೆವು. ಆದರೆ ಆ ವ್ಯಕ್ತಿ ತನ್ನ ಕೃತ್ಯ ಎಲ್ಲಿ ಬಹಿರಂಗವಾಗುತ್ತದೆಯೋ ಎಂಬ ಭಯದಿಂದ, ತಾನೇ ನನ್ನ ಮಾನಭಂಗ ಮಾಡಿ ಈಗ ಪೊಲೀಸರ ಮೂಲಕ ನಮ್ಮನ್ನು ಬಂಧಿಸುವಂತೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ನಮ್ಮ ಮೇಲಿನ ಹಳೆಯ ದ್ವೇಷ ತೀರಿಸಿಕೊಳ್ಳಲು ಪೊಲೀಸ್ ಅಧಿಕಾರಿಯೊಬ್ಬರು ಈ ಕೃತ್ಯಕ್ಕೆ ಸಾಥ್ ನೀಡಿದ್ದಾರೆ. ಹನಿಟ್ರ್ಯಾಪ್ ಎಂಬ ಹಣೆಪಟ್ಟಿ ಕಟ್ಟಿ ನಮ್ಮ ಜೀವನದ ಜೊತೆ ಆಟವಾಡಲಾಗುತ್ತಿದೆ ಎಂದು ಬಿಳಿಚೋಡು ಚನ್ನಬಸಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಕರಣದ ಸತ್ಯಾಸತ್ಯತೆ ಹೊರಬರಬೇಕು. ಬಡ ಹೆಣ್ಣು ಮಕ್ಕಳ ಮತ್ತು ಸಾಮಾನ್ಯ ಜನರ ಜೀವನದ ಜೊತೆ ಆಟವಾಡುವ ಪ್ರಭಾವಿಗಳಿಗೆ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿ ಆರೋಪಿಗಳು ಪೂರ್ವ ವಲಯ ಐಜಿಪಿ (IGP) ಅವರಿಗೆ ಸಮಗ್ರ ತನಿಖೆ ಕೋರಿ ಮನವಿ ಸಲ್ಲಿಸಿದ್ದಾರೆ.
ದಾವಣಗೆರೆಯ ಪ್ರತಿಷ್ಠಿತ ಉದ್ಯಮಿಯೊಬ್ಬರನ್ನು ಬಲೆಗೆ ಬೀಳಿಸಿ, ಅವರಿಂದ ಹಣ ವಸೂಲಿ ಮಾಡಲು ಯತ್ನಿಸಿದ ಹನಿಟ್ರ್ಯಾಪ್ ಜಾಲವನ್ನು ದಾವಣಗೆರೆ ಪೊಲೀಸರು ಪತ್ತೆಹಚ್ಚಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬರು ಮಹಿಳಾ ನರ್ಸ್ ಹಾಗೂ ಚನ್ನಬಸಪ್ಪ ಸೇರಿದಂತೆ ಮೂವರು ಪುರುಷರನ್ನು ಬಂಧಿಸಲಾಗಿತ್ತು. ಆರೋಪಿತ ಮಹಿಳೆಯು ತಾನು ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದೇನೆ ಎಂದು ಉದ್ಯಮಿಯ ಬಳಿ ಸಹಾಯ ಕೇಳಿದ್ದಳು. ಪರಿಚಯ ಬೆಳೆಸಿಕೊಂಡು ನಂಬಿಕೆ ಗಳಿಸಿದ ಬಳಿಕ, ಉದ್ಯಮಿಯನ್ನು ಏಕಾಂತಕ್ಕೆ ಕರೆಸಿಕೊಳ್ಳಲಾಗಿತ್ತು. ಉದ್ಯಮಿ ಮಹಿಳೆಯೊಂದಿಗೆ ಇದ್ದ ಸಂದರ್ಭವನ್ನು ಆರೋಪಿಗಳ ತಂಡ ರಹಸ್ಯವಾಗಿ ಮೊಬೈಲ್ನಲ್ಲಿ ಚಿತ್ರೀಕರಿಸಿಕೊಂಡಿತ್ತು ಎನ್ನಲಾಗಿದೆ. ವಿಡಿಯೋ ಸಿದ್ಧವಾಗುತ್ತಿದ್ದಂತೆ ತನ್ನ ಅಸಲಿ ರೂಪ ತೋರಿಸಿದ ತಂಡ, ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತೇವೆ ಮತ್ತು ಕುಟುಂಬದವರಿಗೆ ತಿಳಿಸುತ್ತೇವೆ ಎಂದು ಬೆದರಿಸಿ ಲಕ್ಷಾಂತರ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಉದ್ಯಮಿ ಪೊಲೀಸರಿಗೆ ದೂರು ನೀಡಿದ್ದರು.

