ದಾವಣಗರೆ ದಕ್ಷಿಣ ಒಂದು ಬಾರಿಯೂ ಬಿಜೆಪಿ ಗೆಲುವು ಕಾಣದ ಕ್ಷೇತ್ರ. ಶಾಮನೂರು ಶಿವಶಂಕರಪ್ಪ ನಿಧನದ ಕಾರಣ ಈಗ ಕ್ಷೇತ್ರಕ್ಕೆ ಉಪ ಚುನಾವಣೆ ಎದುರಾಗಿದೆ. ಈ ಬಾರಿ ಕ್ಷೇತ್ರದಲ್ಲಿ ಗೆಲ್ಲಬೇಕು ಎಂದು ಪಕ್ಷ ತಂತ್ರ ರೂಪಿಸುತ್ತಿದೆ.
ಕರ್ನಾಟಕ ಬಿಜೆಪಿ ಉಸ್ತುವಾರಿ ರಾಧಾ ಮೋಹನ್ ಅಗರ್ವಾಲ್ ನೇತೃತ್ವದಲ್ಲಿ ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ರಾಜ್ಯ ಕೋರ್ ಕಮಿಟಿ ಸಭೆ ನಡೆಯಿತು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸಭೆಯಲ್ಲಿ ಪಾಲ್ಗೊಂಡಿದ್ದರು.
ಡಿ. ವಿ. ಸದಾನಂದ ಗೌಡ, ಪ್ರಲ್ಹಾದ್ ಜೋಶಿ, ಆರ್. ಅಶೋಕ್, ಛಲವಾದಿ ನಾರಾಯಣಸ್ವಾಮಿ ಮುಂತಾದವರು ಪಾಲ್ಗೊಂಡಿದ್ದ ಸಭೆಯಲ್ಲಿ ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ಕ್ಷೇತ್ರದ ಉಪ ಚುನಾವಣೆ ಬಗ್ಗೆ ವಿವರವಾಗಿ ಚರ್ಚಿಸಲಾಗಿದೆ.
ಯಾವುದೇ ಕ್ಷಣದಲ್ಲಿ ಉಪ ಚುನಾವಣೆ ಘೋಷಣೆಯಾಗಲಿದ್ದು, ಪಕ್ಷದ ಕಾರ್ಯತಂತ್ರ ಏನಾಗಿರಬೇಕು? ಎಂದು ಸಭೆಯಲ್ಲಿ ಚರ್ಚಿಸಲಾಗಿದೆ. ಎರಡು ಕ್ಷೇತ್ರಕ್ಕೆ ಅಭ್ಯರ್ಥಿಗಳನ್ನು ಅಂತಿಮಗೊಳಿಸುವ ಕುರಿತು ಚರ್ಚೆಗಳು ನಡೆದಿವೆ.
ಅಚ್ಚರಿಯ ಅಭ್ಯರ್ಥಿ: ದಾವಣಗೆರೆ ಬಿಜೆಪಿಯಲ್ಲಿ ಭಿನ್ನಮತವಿದೆ. ಪಕ್ಷ ಎರಡು ಬಣವಾಗಿದ್ದು, ಉಪ ಚುನಾವಣೆ ಎದುರಿಸುವುದು ಪಕ್ಷಕ್ಕೂ ಸವಾಲಿನ ಕೆಲಸವಾಗಿದೆ. ಬಣ ರಾಜಕೀಯದ ಕಾರಣ ಇನ್ನೂ ಬಿಜೆಪಿ ಅಭ್ಯರ್ಥಿ ಅಂತಿಮಗೊಳಿಸಲು ಕಾಯುತ್ತಿದೆ.
ಉಪ ಚುನಾವಣೆ ಬಿಜೆಪಿ ಟಿಕೆಟ್‌ಗಾಗಿ ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ ಬಣದಿಂದ ಮಾಜಿ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್, ಶ್ರೀನಿವಾಸ್ ದಾಸಕರಿಯಪ್ಪ ಸೇರಿದಂತೆ ಹಲವರ ಹೆಸರುಗಳಿವೆ. ಮತ್ತೊಂದೆಡೆ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಬಣದಿಂದ ಕಳೆದ ಬಾರಿ ಪರಾಜಿತರಾಗಿದ್ದ ಅಜಯ್ ಕುಮಾರ್ಗೆ ಟಿಕೆಟ್ ನೀಡಬೇಕು ಎಂಬ ಬೇಡಿಕೆ ಇದೆ.
ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಉಪ ಚುನಾವಣೆ ಅಭ್ಯರ್ಥಿ ಬಗ್ಗೆ ಚರ್ಚೆ ನಡೆದಿದ್ದು, ಬಾಗಲಕೋಟೆ ಕ್ಷೇತ್ರದಿಂದ ಮಾಜಿ ಶಾಸಕ ವೀರಣ್ಣ ಚರಂತಿಮಠ ಅವರ ಹೆಸರನ್ನು ಬಹುತೇಕ ಅಂತಿಮಗೊಳಿಸಲಾಗಿದೆ.
ದಾವಣಗೆರೆ ದಕ್ಷಿಣ ಕ್ಷೇತ್ರದ ಅಭ್ಯರ್ಥಿಗಳ ಆಯ್ಕೆಯನ್ನು ಇನ್ನೂ ಮಾಡಿದೆ. ಯಶವಂತರಾವ್ ಜಾಧವ್, ಅಜಯ್ ಕುಮಾರ್, ರಾಜನಹಳ್ಳಿ ಶಿವಕುಮಾರ್, ಶ್ರೀನಿವಾಸ್ ಕರಿಯಪ್ಪ ಮತ್ತಿತರ ಹೆಸರುಗಳು ಪ್ರಸ್ತಾಪವಾಗಿವೆ.
ಸಭೆ ಬಳಿಕ ಮಾತನಾಡಿದ ಬಿ.ವೈ.ವಿಜಯೇಂದ್ರ, ‘ಕೋರ್ ಕಮಿಟಿ ಸಭೆಯಲ್ಲಿ ಬಾಗಲಕೋಟೆ ಹಾಗೂ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಬಗ್ಗೆ ಚರ್ಚೆ ನಡೆಸಲಾಗಿದೆ. ಆಕಾಂಕ್ಷಿಗಳ ಕುರಿತು ಚರ್ಚೆ ಆಗಿದೆ. ಚರ್ಚಿಸಿದ ಹೆಸರುಗಳನ್ನು ಪಕ್ಷದ ವರಿಷ್ಠರಿಗೆ ಕಳುಹಿಸಿಕೊಡುತ್ತೇವೆ” ಎಂದರು.
ಪಕ್ಷದ ಮೂಲಗಳ ಮಾಹಿತಿ ಪ್ರಕಾರ ದಾವಣಗೆರೆ ದಕ್ಷಿಣಕ್ಕೆ ಜಿ.ಬಿ.ವಿನಯ್ ಕುಮಾರ್ ಕರೆತರಲು ಬಿಜೆಪಿ ಪ್ರಯತ್ನ ಮಾಡುತ್ತಿದೆ. 2024ರ ಲೋಕಸಭಾ ಚುನಾವಣೆಯಲ್ಲಿ ದಾವಣಗೆರೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಜಿ.ಬಿ.ವಿನಯ್ ಕುಮಾರ್ ಸಾಕಷ್ಟು ಯುವ ಜನರ ಬೆಂಬಲ ಹೊಂದಿದ್ದಾರೆ.
ಕಾಂಗ್ರೆಸ್ ಪಕ್ಷದಲ್ಲಿದ್ದ ವಿನಯ್ ಕುಮಾರ್ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸಿದ್ದರು. ಆದರೆ, ಟಿಕೆಟ್ ಸಿಗದ ಕಾರಣ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಚುನಾವಣೆಯಲ್ಲಿ 42,907 ಮತಗಳನ್ನು ಪಡೆದು ಕಾಂಗ್ರೆಸ್‌ನ ಡಾ. ಪ್ರಭಾ ಮಲ್ಲಿಕಾರ್ಜುನ ವಿರುದ್ಧ ಸೋತಿದ್ದರು.
ಕುರುಬ ಸಮುದಾಯಕ್ಕೆ ಸೇರಿದ ವಿನಯ್ ಕುಮಾರ್ ಯುವಕರಾಗಿದ್ದು, ಪಕ್ಷಕ್ಕೆ ಕರೆತಂದರೆ ಅನುಕೂಲವಾಗಬಹುದು ಎಂಬ ಲೆಕ್ಕಾಚಾರವಿದೆ. ಸ್ಥಳೀಯವಾಗಿ ಬಿಜೆಪಿ ಟಿಕೆಟ್‌ಗೆ ಹಲವಾರು ಆಕಾಂಕ್ಷಿಗಳು ಇರುವ ಕಾರಣ ಅವರನ್ನು ಕರೆತಂದು ಉಪ ಚುನಾವಣೆ ಅಭ್ಯರ್ಥಿ ಮಾಡುವುದು ಅಷ್ಟು ಸುಲಭವೂ ಅಲ್ಲ.

