ಶಾಮನೂರು ಶಿವಶಂಕರಪ್ಪ ನಿಧನದಿಂದ ತೆರವಾಗಿರುವ ದಾವಣಗೆರೆ ದಕ್ಷಿಣ ಕ್ಷೇತ್ರದ ಉಪ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಯಾರು? ಎಂಬುದು ಚರ್ಚೆಯ ವಿಚಾರ. ಶಾಮನೂರು ಶಿವಶಂಕರಪ್ಪ ಕುಟುಂಬಕ್ಕೆ ಟಿಕೆಟ್ ಬೇಡ ಎಂಬ ಆಗ್ರಹಗಳು ಕೇಳಿ ಬರುತ್ತಿವೆ. ಈ ಬಾರಿ ಮುಸ್ಲಿಂ ಸಮುದಾಯಕ್ಕೆ ಟಿಕೆಟ್ ನೀಡಬೇಕು ಎಂಬ ಒತ್ತಾಯಗಳು ಜೋರಾಗಿವೆ.
2008 ರಿಂದ 2023ರ ತನಕ ಎಲ್ಲಾ ಚುನಾವಣೆಗಳಲ್ಲೂ ದಾವಣಗೆರೆ ದಕ್ಷಿಣದಲ್ಲಿ ಗೆಲ್ಲುವ ಮೂಲಕ ಶಾಮನೂರು ಶಿವಶಂಕರಪ್ಪ ಕ್ಷೇತ್ರವನ್ನು ಕಾಂಗ್ರೆಸ್ ಭದ್ರಕೋಟೆ ಮಾಡಿದ್ದಾರೆ. ಕ್ಷೇತ್ರದಲ್ಲಿ ಪಕ್ಷಾತೀತವಾಗಿ ಶಾಮನೂರು ಶಿವಶಂಕರಪ್ಪ ಬೆಂಬಲಿಸುವ ಜನರಿದ್ದಾರೆ.
ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಸುಮಾರು 80,000 ಮುಸ್ಲಿಂ ಮತಗಳಿವೆ. ಆದ್ದರಿಂದ ಉಪ ಚುನಾವಣೆ ಟಿಕೆಟ್ ಶಾಮನೂರು ಶಿವಶಂಕರಪ್ಪ ಕುಟುಂಬಕ್ಕೆ ನೀಡುವುದಿಲ್ಲ ಎಂದರೆ ನಮ್ಮ ಸಮುದಾಯಕ್ಕೆ ನೀಡಿ ಎಂದು ಮುಖಂಡರು ಒತ್ತಾಯಿಸಿದ್ದಾರೆ.
ಒಂದು ವೇಳೆ ಶಾಮನೂರು ಶಿವಶಂಕರಪ್ಪ ಕುಟುಂಬಕ್ಕೆ ಟಿಕೆಟ್ ನೀಡಿದರೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತೇವೆ ಎಂದು ಕೆಲವು ಮುಖಂಡರು ಹೇಳಿದ್ದಾರೆ. ಈ ನಡುವೆ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಆಪ್ತ ನಾಯಕನಿಗೆ ದಾವಣಗೆರೆ ದಕ್ಷಿಣ ಉಪ ಚುನಾವಣೆ ಟಿಕೆಟ್ ಸಿಗಲಿದೆ? ಎಂಬ ಸುದ್ದಿ ಹಬ್ಬಿದೆ.
ಬಿಜೆಪಿ ಇನ್ನೂ ಸಹ ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ಅಭ್ಯರ್ಥಿ ಅಂತಿಮಗೊಳಿಲ್ಲ. ಈ ತನಕ ಒಂದು ಬಾರಿಯೂ ಕ್ಷೇತ್ರದಲ್ಲಿ ಗೆಲ್ಲದ ಬಿಜೆಪಿ ಶಾಮನೂರು ಶಿವಶಂಕರಪ್ಪ ಅನುಪಸ್ಥಿತಿಯಲ್ಲಿ ಉಪ ಚುನಾವಣೆ ಗೆಲ್ಲುವ ಉತ್ಸಾಹದಲ್ಲಿದೆ. ಯಾವಾಗ ಉಪ ಚುನಾವಣೆ?, ಎರಡೂ ಪಕ್ಷದ ಅಭ್ಯರ್ಥಿ ಯಾರು? ಎಂಬುದು ಸದ್ಯ ಚರ್ಚೆಯ ವಿಚಾರವಾಗಿದೆ.
ರಾಹುಲ್ ಗಾಂಧಿ ಆಪ್ತನಿಗೆ ಟಿಕೆಟ್: ದೆಹಲಿ ಮೂಲದ ಸುದ್ದಿಗಳ ಪ್ರಕಾರ ದಾವಣಗೆರೆ ದಕ್ಷಿಣ ಕ್ಷೇತ್ರದ ಟಿಕೆಟ್ ಮುಸ್ಲಿಂ ನಾಯಕನಿಗೆ ಸಿಗಲಿದೆ. ಅವರು ರಾಹುಲ್ ಗಾಂಧಿ ಆಪ್ತರು. ಈ ಕುರಿತು ಹೈಕಮಾಂಡ್ ತೀರ್ಮಾನ ಮಾಡಿದ್ದು, ಅಧಿಕೃತ ಘೋಷಣೆ ಮಾತ್ರ ಬಾಕಿ ಇದೆ.
ಕಾಂಗ್ರೆಸ್ ಟಿಕೆಟ್‌ಗಾಗಿ ಮುಸ್ಲಿಂ ಸಮುದಾಯದಲ್ಲಿಯೇ ಹಲವು ಆಕ್ಷಾಂಕ್ಷಿಗಳಿದ್ದಾರೆ. ಆದರೆ ಹೈಕಮಾಂಡ್ ನಾಯಕರಿಗೆ, ರಾಹುಲ್ ಗಾಂಧಿಗೆ ಆಪ್ತರಾಗಿರುವ ನಾಯಕನಿಗೆ ಟಿಕೆಟ್ ಪಕ್ಕಾ ಎಂಬ ಸುದ್ದಿ ಹಬ್ಬಿದೆ.
ಕಾಂಗ್ರೆಸ್ ಟಿಕೆಟ್‌ಗಾಗಿ ಸೈಯದ್ ಸೈಫುಲ್ಲಾ, ಸೈಯದ್ ಸೈಫುಲ್ಲಾ ಅವರ ಪುತ್ರ ರಾಷ್ಟ್ರೀಯ ಯೂತ್ ಕಾಂಗ್ರೆಸ್ ಕಾರ್ಯದರ್ಶಿ ಸೈಯದ್ ಖಾಲಿದ್ ಅಹ್ಮದ್, ಎಂಎಲ್ಸಿ ಅಬ್ದುಲ್ ಜಬ್ಬಾರ್ ಹಾಗೂ ಅಯೂಬ್ ಪೈಲ್ವಾನ್ ಇನ್ನಿತರರು ಆಕಾಂಕ್ಷಿಗಳು.
ಆದರೆ ಯುವ ನಾಯಕ ಸೈಯದ್ ಖಾಲಿದ್ ಅಹ್ಮದ್‌ಗೆ ಟಿಕೆಟ್ ಸಿಗಲಿದೆ ಎಂಬ ಸುದ್ದಿಗಳು ಹಬ್ಬಿವೆ. ಈಗಾಗಲೇ ಟಿಕೆಟ್ ಮುಸ್ಲಿಂ ಸಮುದಾಯಕ್ಕೆ ನೀಡಬೇಕು ಎಂದು ಕ್ಷೇತ್ರದ ಸಮುದಾಯದ ಮುಖಂಡರು ಸಚಿವ ಜಮೀರ್ ಅಹ್ಮದ್ ಖಾನ್ ಭೇಟಿ ಮಾಡಿದ್ದಾರೆ.
ಶಾಮನೂರು ಶಿವಶಂಕರಪ್ಪ ನನ್ನ ನಂತರ ಕ್ಷೇತ್ರದ ಟಿಕೆಟ್ ಮುಸ್ಲಿಂ ನಾಯಕರಿಗೆ ನೀಡಬೇಕು ಎಂದು ಹೇಳಿದ್ದ ವಿಡಿಯೋವನ್ನು ತೋರಿಸಿ ಟಿಕೆಟ್‌ಗಾಗಿ ಬೇಡಿಕೆ ಇಟ್ಟಿದ್ದಾರೆ. ಆದರೆ ಟಿಕೆಟ್ ವಿಚಾರದಲ್ಲಿ ಶಾಮನೂರು ಶಿವಶಂಕರಪ್ಪ ಕುಟುಂಬದ ನಿಲುವು ಏನು? ಎಂಬುದು ಇನ್ನೂ ಅಂತಿಮವಾಗಿಲ್ಲ.
ಎರಡು ದಿನಗಳ ಹಿಂದೆ ದಾವಣಗೆರೆಯಲ್ಲಿ ಮಾತನಾಡಿದ್ದ ಶಾಮನೂರು ಶಿವಶಂಕರಪ್ಪ ಪುತ್ರ, ಸಚಿವ ಎಸ್.ಎಸ್.ಮಲ್ಲಿಕಾರ್ಜುನ ದಾವಣಗೆರೆ ದಕ್ಷಿಣದ ಉಪ ಚುನಾವಣೆ ಅಭ್ಯರ್ಥಿ ಬಗ್ಗೆ ಕೇಳಿದಾಗ, “ನಾವು ಆ ಕುರಿತು ಏನೂ ಯೋಚಿಸಿಯೇ ಇಲ್ಲ” ಎಂದು ಹೇಳಿದ್ದರು.
ಎಸ್.ಎಸ್.ಮಲ್ಲಿಕಾರ್ಜುನ್ ಸಚಿವರು, ಶಾಮನೂರು ಶಿವಶಂಕರಪ್ಪ ಸೊಸೆ ಡಾ.ಪ್ರಭಾ ಮಲ್ಲಿಕಾರ್ಜುನ್ ಸಂಸದರು. ಆದ್ದರಿಂದ ಅವರ ಕುಟುಂಬಕ್ಕೆ ಟಿಕೆಟ್ ಬೇಡ ಎಂಬ ಒತ್ತಾಯ ಕೇಳಿ ಬಂದಿದೆ. ಕೆಪಿಸಿಸಿ ರಾಜ್ಯ ಘಟಕ ಯಾವ ಹೆಸರನ್ನು ಹೈಕಮಾಂಡ್‌ಗೆ ಶಿಫಾರಸು ಮಾಡಲಿದೆ? ಎಂಬುದು ಸದ್ಯ ಚರ್ಚೆಯ ವಿಚಾರವಾಗಿದೆ.

