HomeKarnatakaಡೇಟಾ ಸೆಂಟರ್ ನಲ್ಲಿ ಮಹತ್ವದ ತಾಂತ್ರಿಕ ಬದಲಾವಣೆ, ನವೀಕರಣ, ಸುಧಾರಣೆ ಹಿನ್ನೆಲೆ ರಾಜ್ಯದಲ್ಲಿ 2 ದಿನ...

ಡೇಟಾ ಸೆಂಟರ್ ನಲ್ಲಿ ಮಹತ್ವದ ತಾಂತ್ರಿಕ ಬದಲಾವಣೆ, ನವೀಕರಣ, ಸುಧಾರಣೆ ಹಿನ್ನೆಲೆ ರಾಜ್ಯದಲ್ಲಿ 2 ದಿನ ಡೇಟಾ ಸೆಂಟರ್ ಸೇವೆ ಸ್ಥಗಿತ

ಬೆಂಗಳೂರು: ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಡಿಜಿಟಲ್ ಸೇವೆಗಳಿಗೆ ಕೇಂದ್ರಬಿಂದುವಾಗಿರುವ ರಾಜ್ಯ ಡೇಟಾ ಸೆಂಟರ್‌ನಲ್ಲಿ ಮಹತ್ವದ ತಾಂತ್ರಿಕ ನಿರ್ವಹಣೆ, ಮೂಲಸೌಕರ್ಯ ನವೀಕರಣ ಹಾಗೂ ಭದ್ರತಾ ಸುಧಾರಣೆ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿರುವ ಹಿನ್ನೆಲೆಯಲ್ಲಿ, ಮುಂದಿನ ಎರಡು ದಿನಗಳ ಕಾಲ ಡೇಟಾ ಸೆಂಟರ್ ಸೇವೆಗಳು ತಾತ್ಕಾಲಿಕವಾಗಿ ಸ್ಥಗಿತಗೊಳ್ಳಲಿವೆ ಎಂದು ಗೃಹ, ಮಾಹಿತಿ ಮತ್ತು ತಂತ್ರಜ್ಞಾನ, ಇ-ಆಡಳಿತ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

 ರಾಜ್ಯ ಸರ್ಕಾರದ ಅನೇಕ ಇಲಾಖೆಗಳ ವೆಬ್‌ ಪೋರ್ಟಲ್‌ಗಳು, ನಾಗರಿಕ ಸೇವಾ ವ್ಯವಸ್ಥೆಗಳು, ವಿವಿಧ ಪ್ರಮಾಣಪತ್ರಗಳಿಗೆ ಸಂಬಂಧಿಸಿದ ಆನ್‌ಲೈನ್ ಸೇವೆಗಳು, ಇ-ಆಫೀಸ್ ವ್ಯವಸ್ಥೆಗಳು, ಇಲಾಖೆಗಳ ಡಿಜಿಟಲ್ ಡೇಟಾಬೇಸ್‌ಗಳು ಸೇರಿದಂತೆ ಹಲವು ತಂತ್ರಜ್ಞಾನ ಆಧಾರಿತ ಸರ್ಕಾರಿ ಸೇವೆಗಳು ಈ ಡೇಟಾ ಸೆಂಟರ್ ಮೂಲಕ ಕಾರ್ಯನಿರ್ವಹಿಸುತ್ತಿವೆ. ಈ ಹಿನ್ನೆಲೆಯಲ್ಲಿ ನಿರ್ವಹಣಾ ಕಾರ್ಯ ನಡೆಯುವ ಅವಧಿಯಲ್ಲಿ ಕೆಲವು ಸೇವೆಗಳ ಲಭ್ಯತೆಯಲ್ಲಿ ತಾತ್ಕಾಲಿಕ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ.

ರಾಜ್ಯದ ಡಿಜಿಟಲ್ ಆಡಳಿತ ವ್ಯವಸ್ಥೆಯನ್ನು ಇನ್ನಷ್ಟು ಬಲಿಷ್ಠ ಮತ್ತು ಸುರಕ್ಷಿತವಾಗಿಸಲು ಹಾಗೂ ಸಾಮರ್ಥ್ಯ ಹೆಚ್ಚಿಸಲು ಈ ನಿರ್ವಹಣಾ ಕಾರ್ಯ ಕೈಗೊಳ್ಳಲಾಗುತ್ತಿದೆ. ಭವಿಷ್ಯದಲ್ಲಿ ನಾಗರಿಕರಿಗೆ ಇನ್ನಷ್ಟು ವೇಗವಾಗಿ, ಯಾವುದೇ ತಾಂತ್ರಿಕ ಅಡಚಣೆಗಳಿಲ್ಲದೆ ಮತ್ತು ಸುರಕ್ಷಿತ ರೀತಿಯಲ್ಲಿ ಸರ್ಕಾರಿ ಸೇವೆಗಳನ್ನು ಒದಗಿಸುವ ಉದ್ದೇಶದಿಂದ ಈ ಅಪ್‌ಗ್ರೇಡ್ ಅತ್ಯಂತ ಅಗತ್ಯವಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇತ್ತೀಚಿನ ವರ್ಷಗಳಲ್ಲಿ ರಾಜ್ಯದಲ್ಲಿ ಡಿಜಿಟಲ್ ಸೇವೆಗಳ ಬಳಕೆ ಗಣನೀಯವಾಗಿ ಹೆಚ್ಚಾಗಿದೆ. ಇದರಿಂದ ಡೇಟಾ ಸಂಸ್ಕರಣಾ ಸಾಮರ್ಥ್ಯ, ಸೈಬರ್ ಭದ್ರತೆ, ಸರ್ವರ್ ಕಾರ್ಯಕ್ಷಮತೆ ಹಾಗೂ ಸೇವೆಗಳ ಸ್ಥಿರತೆಯನ್ನು ಸುಧಾರಿಸುವ ಅಗತ್ಯ ಎದುರಾಗಿದೆ. ಇದೇ ಕಾರಣಕ್ಕೆ ತಜ್ಞರ ಸಲಹೆ ಮೇರೆಗೆ ಈ ನಿರ್ವಹಣಾ ಕಾರ್ಯವನ್ನು ನಡೆಸಲಾಗುತ್ತಿದೆ.

ಈ ಎರಡು ದಿನಗಳ ಅವಧಿಯಲ್ಲಿ ಸಾರ್ವಜನಿಕರು ಸರ್ಕಾರಿ ಆನ್‌ಲೈನ್ ಸೇವೆಗಳನ್ನು ಬಳಸುವಾಗ ಕೆಲವು ತಾತ್ಕಾಲಿಕ ಅಡಚಣೆಗಳನ್ನು ಎದುರಿಸಬಹುದು. ಸಾರ್ವಜನಿಕರಿಗೆ ಹೆಚ್ಚಿನ ತೊಂದರೆಯಾಗಬಾರದೆಂದು ರಜಾ ದಿನಗಳಲ್ಲಿ ನಿರ್ವಹಣಾ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ. ಇದಕ್ಕೆ ಸಾರ್ವಜನಿಕರು ಸಹಕಾರ ನೀಡುವಂತೆ ಕೋರುತ್ತೇನೆ.

ಇದು ತಾತ್ಕಾಲಿಕ ಅಸೌಕರ್ಯ ಮಾತ್ರ. ಆದರೆ ಈ ಕಾರ್ಯ ಪೂರ್ಣಗೊಂಡ ನಂತರ ರಾಜ್ಯದ ಇ-ಆಡಳಿತ ವ್ಯವಸ್ಥೆ ಮತ್ತಷ್ಟು ಸುಧಾರಣೆಗೊಳ್ಳಲಿದೆ. ಸಾರ್ವಜನಿಕರಿಗೆ ಉತ್ತಮ ಸೇವೆ ಒದಗಿಸುವ ನಿಟ್ಟಿನಲ್ಲಿ ಸರ್ಕಾರ ನಿರಂತರವಾಗಿ ತಂತ್ರಜ್ಞಾನ ಹೂಡಿಕೆಯನ್ನು ಮಾಡುತ್ತಿದೆ.

ಕರ್ನಾಟಕವನ್ನು ದೇಶದಲ್ಲೇ ಅತ್ಯುತ್ತಮ ಡಿಜಿಟಲ್ ಆಡಳಿತ ವ್ಯವಸ್ಥೆ ಹೊಂದಿರುವ ರಾಜ್ಯವನ್ನಾಗಿ ರೂಪಿಸುವ ಗುರಿಯಿಂದ ಕ್ರಮಬದ್ಧವಾಗಿ ತಂತ್ರಜ್ಞಾನ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಲು ಗ್ಯಾರಂಟಿ ಸರ್ಕಾರ ಬದ್ಧವಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular