ಬೆಂಗಳೂರು: ನಟ ದರ್ಶನ್ ಹಾಗೂ ಗ್ಯಾಂಗ್ ನಿಂದ ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಪ್ಪನ ಅಗ್ರಹಾರ ಜೈಲು ಪಾಲಾಗಿರುವ ದರ್ಶನ್ ಜಾಮೀನಿಗಾಗಿ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ನಾಳೆ ಸೋಮವಾರ ದರ್ಶನ್ ಅರ್ಜಿ ವಿಚಾರಣೆ ನಡೆಯಲಿದೆ.
ಜೈಲಿನಲ್ಲಿ ಸಹಕೈದಿಗಳಿಂದ ನಿಂದನೆ, ಬೆದರಿಕೆ ಆರೋಪ ಮಾಡಿರುವ ದರ್ಶನ್, ಜೈಲಿನಲ್ಲಿ ತಾನು ಅನುಭವಿಸುತ್ತಿರುವ ಕಷ್ಟಗಳನ್ನು ಬಿಚ್ಚಿಟ್ಟಿದ್ದಾರೆ. ಇಷ್ಟಕ್ಕೂ ನಟ ದರ್ಶನ್ ಸಲ್ಲಿಸಿರುವ ಅರ್ಜಿಯಲ್ಲಿರುವ ಅಂಶಗಳೇನು? ಇಲ್ಲಿದೆ ಮಾಹಿತಿ.
ಜೈಲಿನಲ್ಲಿ ಸಹಕೈದಿಗಳಿಂದ ನಿಂದನೆ, ಬೆದರಿಕೆ ಅನುಭವಿಸುತ್ತಿದ್ದೇನೆ. ಜೈಲಿನಲ್ಲಿ ಅಮಾನವೀಯವಾಗಿ ನಡೆಸಿಕೊಳ್ಳುತ್ತಿದ್ದಾರೆ. ನಿಯಮ ಮೀರಿ ಕ್ವಾರಂಟೈನ್ ಸೆಲ್ ನಲ್ಲಿ ತನ್ನನ್ನು ಇಡಲಾಗಿದೆ. ಮಾಧ್ಯಮದಲ್ಲಿ ನೆಗೆಟಿವ್ ಪ್ರಚಾರ ಮಾಡುತ್ತಿದ್ದು, ಇದರಿಂದ ಸಮಸ್ಯೆಯಾಗುತ್ತಿದೆ. ಇತರೆ ಕೈದಿಗಳಿಗಿಂತ ತಾರತಮ್ಯದಿಂದ ನೋಡಲಾಗುತ್ತಿದೆ. ಕುಟುಂಬದವರ ಭೇಟಿಗೆ ಸಮಯ ನೀಡುತ್ತಿಲ್ಲ. ಆಹಾರ, ಬಟ್ಟೆ, ಹಾಸಿಗೆ ಪಡೆಯಲೂ ಬಿಡುತ್ತಿಲ್ಲ. ಜೈಲು ಸೆಲ್ನ ಕಾರಿಡಾರ್ನಲ್ಲಿ ಮಾತ್ರ ವಾಕ್ ಮಾಡಲು ಬಿಡುತ್ತಿದ್ದಾರೆ. ಬೆನ್ನು ನೋವಿದ್ದರೂ ಕೇವಲ 2-3 ಬಾರಿ ಮಾತ್ರ ಫಿಸಿಯೋಥೆರಪಿ ಮಾಡಲಾಗಿದೆ ಎಂದು ಜಾಮೀನು ಅರ್ಜಿಯಲ್ಲಿ ತಿಳಿಸಿದ್ದಾರೆ.
ಇನ್ನು ವೃತ್ತಿ ಜೀವನದ ಬಗ್ಗೆಯೂ ಆತಂಕ ತೋಡಿಕೊಂಡಿರುವ ದರ್ಶನ್, ಜೈಲುವಾಸದಿಂದ ನನ್ನ ಜೀವನೋಪಾಯಕ್ಕೆ ಸಮಸ್ಯೆಯಾಗಿದೆ ಸುದೀರ್ಘ ಜೈಲುವಾಸ ನನ್ನ ವೃತ್ತಿ ಜೀವನಕ್ಕೆ ಮರಣ ಗಂಟೆಯಾಗಲಿದೆ. ಪ್ರತಿವರ್ಷ 2-3 ಚಿತ್ರಗಳಿಗೆ ಸಹಿ ಮಾಡುತ್ತಿದ್ದೆ. ಜಾಮೀನು ರದ್ದುಗೊಳಿಸುವ ವೇಳೆಯೂ 3 ಸಿನಿಮಾಗಳಿಗೆ ಸಹಿ ಮಾಡಿದ್ದೆ.
ಕೆ.ವಿ.ಎನ್ ಪ್ರೊಡಕ್ಷನ್, ಮೀಡಿಯಾ ಹೌಸ್ ಸ್ಟುಡಿಯೋಸ್ ಗಳಿಗೆ ಸಹಿ ಮಾಡಿದ್ದೆ. ನಿರ್ಮಾಪಕರು 6 ಕೋಟಿ ರೂ.ಬಂಡವಾಳ ಹೂಡಿದ್ದಾರೆ ಜೈಲು ಸೇರಿದ್ದರಿಂದ ಸಿನಿಮಾ ನಿಂತುಹೋಗಿದೆ. ಹೊಸ ಚಿತ್ರಗಳನ್ನೂ ಕಳೆದುಕೊಳ್ಳುತ್ತಿರುವುದರಿಂದ ನಷ್ಟವಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.
ವೃತ್ತಿ ಜೀನಕ್ಕೂ ತೊಂದರೆಯಾಗುತ್ತಿದ್ದು, ಮೂಲಭೂತ ಹಕ್ಕಿನ ಹರಣವಾಗಲಿದೆ. 262 ಸಾಕ್ಷಿಗಳ ವಿಚಾರಣೆ ಆಗಬೇಕೆಂದು ಆರೋಪಪಟ್ಟಿ ಸಲ್ಲಿಸಲಾಗಿದೆ. 8 ತಿಂಗಳಿನಿಂದ ಕೇವಲ 10 ಸಾಕ್ಷಿಗಳ ವಿಚಾರಣೆ ಮಾತ್ರ ಆಗಿದೆ ಶೀಘ್ರದಲ್ಲಿ ಸಾಕ್ಷ್ಯ ವಿಚಾರಣೆ ಮುಗಿಯುವ ಲಕ್ಷಣಗಳಿಲ್ಲ. ಹೀಗಾಗಿ ಜಾಮೀನು ನೀಡುವಂತೆ ದರ್ಶನ್ ಮನವಿ ಸಲ್ಲಿಸಿದ್ದಾರೆ.

