HomeKarnatakaಕರ್ನಾಟಕದ ಈ ಊರಿನಲ್ಲಿ ದಲಿತರಿಗೆ ನೀರು ಕುಡಿಯಲು ಲೋಟ ಕೊಡಲ್ಲ, ಮೇಲಿಂದಲೇ ಬೊಗಸೆಗೆ ನೀರು ಹಾಕಿ...

ಕರ್ನಾಟಕದ ಈ ಊರಿನಲ್ಲಿ ದಲಿತರಿಗೆ ನೀರು ಕುಡಿಯಲು ಲೋಟ ಕೊಡಲ್ಲ, ಮೇಲಿಂದಲೇ ಬೊಗಸೆಗೆ ನೀರು ಹಾಕಿ ಅಸ್ಪೃಶ್ಯತೆ ಆಚರಿಸಿದ ಹೊಟೇಲ್ ಮಾಲೀಕ; ವಿಡಿಯೊ

ದೇಶಕ್ಕೆ ಸ್ವಾತಂತ್ರ್ಯ ಬಂದು 79 ವರ್ಷ ಕಳೆದರೂ ಇನ್ನೂ ಅನೇಕ ಪಿಡುಗುಗಳು ಹಾಗೆಯೇ ಉಳಿದುಕೊಂಡಿವೆ. ಅವುಗಳ ಪೈಕಿ ಇನ್ಯಾವತ್ತೂ ಬಗೆಹರಿಯುವುದೇ ಇಲ್ಲವೇನೋ ಎನ್ನುವ ಮಟ್ಟಕ್ಕೆ ಅನುಮಾನ ಹುಟ್ಟುಹಾಕಿರುವುದು ಅಸ್ಪೃಶ್ಯತೆ ಎಂಬ ಮಹಾ ಪಿಡುಗು.

ಎಐ ಯುಗದಲ್ಲೂ ಈ ರೀತಿಯ ಅನಿಷ್ಟ ಪದ್ದತಿಯನ್ನು ಅನೇಕರು ಅನುಸರಿಸುತ್ತಿದ್ದು, ಕರ್ನಾಟಕದ ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಈಚನಾಳ ಗ್ರಾಮದ ವಿಡಿಯೊವೊಂದು ಸದ್ಯ ಜಾತಿ ಪದ್ದತಿ ಇನ್ನೂ ಜೀವಂತವಾಗಿದೆ ಎಂಬುದಕ್ಕೆ ಮತ್ತೊಂದು ಸಾಕ್ಷಿಯಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹೌದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೊವೊಂದು ವೈರಲ್ ಆಗಿದ್ದು, ಈ ವಿಡಿಯೊದಲ್ಲಿ ಹೊಟೇಲ್ ಮಾಲೀಕನೋರ್ವ ಹೊಟೇಲ್‌ಗೆ ಆಗಮಿಸಿದ ವ್ಯಕ್ತಿಯೊಬ್ಬರಿಗೆ ಲೋಟದಲ್ಲಿ ಕುಡಿಯುವ ನೀರು ನೀಡದೇ ಬೊಗಸೆಗೆ ನೀರು ಹಾಕುವ ಮೂಲಕ ಅಸ್ಪೃಶ್ಯತೆ ಆಚರಣೆ ಮಾಡಿದ್ದಾರೆ.

ಈ ವಿಡಿಯೊ ವೈರಲ್ ಆದ ಬೆನ್ನಲ್ಲೇ ಗ್ರಾಮಸ್ಥರು ಈ ಕುರಿತು ಪ್ರತಿಕ್ರಿಯಿಸಿದ್ದು, ಹೊಟೇಲ್‌ಗಳಲ್ಲಿ ಗ್ರಾಹಕರನ್ನು ಜಾತಿ ಆಧಾರದ ಮೇಲೆ ಕೂರಿಸಲಾಗುತ್ತದೆ, ಕೆಲವರಿಗೆ ಮೀಸಲಿಟ್ಟ ಲೋಟವನ್ನು ನೀಡಲಾಗುತ್ತದೆ, ಅಲ್ಲದೇ ಕ್ಷೌರ ಅಂಗಡಿಗಳಲ್ಲೂ ಸಹ ಜಾತಿ ಪದ್ದತಿ ಇದೆ, ಕೆಲವರಿಗೆ ಅಂಗಡಿಯಲ್ಲೇ ಕ್ಷೌರ ಮಾಡಿದರೆ, ಇನ್ನೂ ಕೆಲವರಿಗೆ ಊರಿನ ಆಚೆ ಕ್ಷೌರ ಮಾಡಲಾಗುತ್ತದೆ ಎಂದು ಆರೋಪಿಸಿದ್ದಾರೆ.

ಪ್ರಜಾವಾಣಿ ಮಾಡಿರುವ ವರದಿ ಪ್ರಕಾರ ಗ್ರಾಮಸ್ಥ ಅಮರಪ್ಪ ಗಾಳಿಪೂಜೆ ‘ಕೆಲ ಹೊಟೇಲ್ ಮಾಲೀಕರು ದಲಿತರಿಗೆ ನೀರು ಕುಡಿಯಲು ಕೊಡುವುದಿಲ್ಲ, ಬದಲಾಗಿ ಬೊಗಸೆಗೆ ಹಾಕುತ್ತಾರೆ’ ಎಂದು ಹೇಳಿಕೆ ನೀಡಿದ್ದಾರೆ.

ವಿಡಿಯೊ ವೈರಲ್ ಆದ ಬೆನ್ನಲ್ಲೇ ಈ ಕುರಿತು ಲಿಂಗಸುಗೂರು ತಾಲೂಕಿನ ತಹಶೀಲ್ದಾರ್ ಸತ್ಯಮ್ಮ ಪ್ರತಿಕ್ರಿಯಿಸಿದ್ದು, ಈಚನಾಳದಲ್ಲಿ ಅಸ್ಪೃಶ್ಯತೆ ಆಚರಣೆಯಲ್ಲಿರುವುದು ಗಮನಕ್ಕೆ ಬಂದಿಲ್ಲ, ಗ್ರಾಮಕ್ಕೆ ತೆರಳಿ ಪರಿಶೀಲನೆ ನಡೆಸಿ ಶೀಘ್ರದಲ್ಲೇ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.

ಹಿಂದೂ ನಾವೆಲ್ಲ ಒಂದು ನಿಜಕ್ಕೂ ಸಾಧ್ಯವೇ?

ಇನ್ನು ಸಾಮಾಜಿಕ ಜಾಲತಾಣದಲ್ಲಿ ಹಿಂದೂ ನಾವೆಲ್ಲ ಒಂದು ಎಂಬ ಕೂಗು ಅಥವಾ ಟ್ರೆಂಡನ್ನು ಕೆಲವರು ಅನುಸರಿಸುತ್ತಿದ್ದಾರೆ. ನಮಗೆ ಮೇಲ್ಜಾತಿಯವರು ಎಂಬ ಗರ್ವವಿಲ್ಲ, ನಮಗೆ ಆ ಹಣೆಪಟ್ಟಿ ಸಹ ಬೇಡ. ನಾವು ಎಲ್ಲರ ಹಾಗೆ ಕೇವಲ ಮನುಷ್ಯರು, ‘ಹಿಂದೂ ನಾವೆಲ್ಲ ಒಂದು’ ಎಂದು ಬರೆದುಕೊಳ್ಳುತ್ತಿರುತ್ತಾರೆ. ಕೆಲವರು ಇದನ್ನು ಕಟ್ಟುನಿಟ್ಟಾಗಿ ಅನುಸರಿಸುತ್ತಿದ್ದರೂ ಇಂತಹ ಘಟನೆಗಳು ವಾರಕ್ಕೆ ಒಂದಾದರೂ ವರದಿಯಾಗುತ್ತಿದ್ದು, ಇದನ್ನು ಗಮನಿಸಿದಾಗ ನಿಜಕ್ಕೂ ಹಿಂದೂ ನಾವೆಲ್ಲ ಒಂದು ಎಂಬುದು ಎಷ್ಟು ಸತ್ಯ, ನಿಜಕ್ಕೂ ಈ ಸಾಲುಗಳನ್ನು ಸತ್ಯವನ್ನಾಗಿಸಲು ಸಾಧ್ಯವೇ ಎಂಬ ಪ್ರಶ್ನೆ ಹುಟ್ಟದೇ ಇರಲಾರದು.

ಜನರೇ ಗಮನಿಸಿ: ಅಸ್ಪೃಶ್ಯತೆ ಮಾನವೀಯತೆಗೆ ಕಳಂಕ. ಜಾತಿ, ಧರ್ಮ ಅಥವಾ ವರ್ಗದ ಆಧಾರದ ಮೇಲೆ ಯಾರನ್ನೂ ತಾರತಮ್ಯ ಮಾಡಬಾರದು. ಪ್ರತಿಯೊಬ್ಬರಿಗೂ ಸಮಾನ ಗೌರವ, ಹಕ್ಕು ಮತ್ತು ಅವಕಾಶ ಸಿಗಬೇಕು. ಭೇದಭಾವ ತೊರೆದು ಮಾನವೀಯತೆ ಬೆಳೆಸೋಣ, ಸಮಾನತೆಯ ಸಮಾಜವನ್ನು ಎಲ್ಲರೂ ಸೇರಿ ಗೌರವದಿಂದ ನಾವು ನಿರ್ಮಿಸೋಣ.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular