ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಒಟ್ಟಾಗಿಲ್ಲ ಎಂದು ಎಲ್ಲಿಯೂ ಹೇಳಿಲ್ಲ. ಇಬ್ಬರೂ ಪಕ್ಷದಲ್ಲಿದ್ದು, ಸಿದ್ಧಾಂತ ಮತ್ತು ನಾಯಕತ್ವಕ್ಕೆ ಬದ್ಧರಾಗಿದ್ದಾರೆ ಎಂದು ಬಮೂಲ್ ಅಧ್ಯಕ್ಷ, ಮಾಜಿ ಸಂಸದ ಡಿ.ಕೆ. ಸುರೇಶ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಒಗ್ಗಟ್ಟು ಪ್ರದರ್ಶಿಸುತ್ತಿರುವ ಬಗ್ಗೆ ನನಗೆ ಹೆಚ್ಚಿನ ಮಾಹಿತಿ ಇಲ್ಲ. ಆದರೆ ಇಬ್ಬರೂ ನಾಯಕರು ಒಟ್ಟಾಗಿಯೇ ಕೆಲಸ ಮಾಡುತ್ತಿದ್ದಾರೆ. ಈ ಮೊದಲು ಕೂಡ ಒಟ್ಟಾಗಿಯೇ ಕೆಲಸ ಮಾಡಿದ್ದಾರೆ. ಚುನಾವಣೆಯಲ್ಲಿಯೂ ಒಟ್ಟಾಗಿ ದುಡಿದಿದ್ದಾರೆ ಎಂದು ಹೇಳಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರು ನಾನು ಮತ್ತು ಡಿ.ಕೆ. ಶಿವಕುಮಾರ್ ಹಾಲು ಜೇನಿನಂತೆ ಇದ್ದೇವೆ ಎಂದು ಹೇಳಿರುವ ಕುರಿತಾಗಿ ನನಗೆ ಮಾಹಿತಿ ಇಲ್ಲ. ಹಾಲು ಬೇಕಾದರೆ ಡೈರಿ ಸರ್ಕಲ್ ಗೆ ಬನ್ನಿ, ಜೇನಿನ ಬಗ್ಗೆ ನನಗೆ ಮಾಹಿತಿ ಇಲ್ಲ. ಕೊಡಗು, ಮಲೆನಾಡು ಭಾಗದಲ್ಲಿ ಜೇನು ಸಿಗುತ್ತದೆ ಎಂದು ಹೇಳಿದ್ದಾರೆ.

