HomeLive Newsಧೈರ್ಯವಿದ್ದವನು ಒಬ್ಬನೇ ಬಹುಮತ ಸಾಧಿಸಬಲ್ಲ: ಸಿದ್ದರಾಮಯ್ಯ ಸೇರಿ 139 ಶಾಸಕರೂ ನನ್ನ ಬಲ: ಡಿಸಿಎಂ ಡಿ.ಕೆ.ಶಿವಕುಮಾರ್

ಧೈರ್ಯವಿದ್ದವನು ಒಬ್ಬನೇ ಬಹುಮತ ಸಾಧಿಸಬಲ್ಲ: ಸಿದ್ದರಾಮಯ್ಯ ಸೇರಿ 139 ಶಾಸಕರೂ ನನ್ನ ಬಲ: ಡಿಸಿಎಂ ಡಿ.ಕೆ.ಶಿವಕುಮಾರ್

ಬೆಂಗಳೂರು: ರಾಜಕೀಯದಲ್ಲಿ ಎಲ್ಲವೂ ಸಾಧ್ಯ. ರಾಜಕೀಯ ಎಂಬುದು ಸಾಧ್ಯತೆಗಳ ಕಲೆ. ದೃಢವಾದ ನಿಲುವು, ಸಂಕಲ್ಪ ಹೊಂದಿದ್ದರೆ, ಒಬ್ಬನೇ ಸಾಕು. ಆತನ ಜೊತೆ 140 ಜನರೂ ಇರುತ್ತಾರೆ, ಇನ್ನೂ ಜಾಸ್ತಿನೂ ಆಗುತ್ತಾರೆ. ನೋಡೋಣ 2028ರಲ್ಲಿ ಏನಾಗುತ್ತದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆ ವೇಳೆ ವಿಪಕ್ಷ ನಾಯಕ ಆರ್.ಅಶೋಕ್ ಅಧಿಕಾರ ಹಂಚಿಕೆ ವಿಚಾರ ಪ್ರಸ್ತಾಪಿಸಿ, ಕಳೆದ ಒಂದು ತಿಂಗಳಿಂದ ಡಿ.ಕೆ. ಶಿವಕುಮಾರ್ ಅವರ ಮಾತು, ಟ್ವೀಟ್ ಗಳು ನೂರು ಅರ್ಥ ಬರುವಂತಿದ್ದು, ಎಲ್ಲರೂ ಗೊಂದಲಕ್ಕೆ ಒಳಗಾಗಿದ್ದಾರೆ. ಈ ಬಗ್ಗೆ ಡಿ.ಕೆ.ಶಿವಕುಮಾರ್ ಸ್ಪಷ್ಟನೆ ನೀಡಲಿ ಎಂದರು.

ಈ ವೇಳೆ ಉತ್ತರಿಸಿದ ಡಿ.ಕೆ.ಶಿವಕುಮಾರ್, ಅಶೋಕ್ ಅವರೇ, ನೀವು ಹಿರಿಯ ರಾಜಕಾರಣಿ. ಯಾರು ಏನಾದರೂ ಮಾತನಾಡಲಿ, ನಾನು ತಲೆಕೆಡಿಸಿಕೊಳ್ಳುವುದಿಲ್ಲ. ನಾನು ವಿದ್ಯಾರ್ಥಿ ನಾಯಕನಿಂದ ಬೆಳೆದು ಬಂದವನು. ನನ್ನದೇ ಆದ ಮೌಲ್ಯಗಳನ್ನು ಪಾಲಿಸಿಕೊಂಡು, ಉಳಿಸಿಕೊಂಡು ಬಂದಿದ್ದೇನೆ. ಪಕ್ಷ ನನಗೆ ಚಿಕ್ಕ ವಯಸ್ಸಿಗೆ ಟಿಕೆಟ್ ಕೊಟ್ಟಿದ್ದು, ಇಲ್ಲಿಯವರೆಗೂ ಬೆಳೆದಿದ್ದೇನೆ. ರಾಜಕೀಯದಲ್ಲಿ ಏಳು ಬೀಳು ಸಹಜ. ನಾನು ಎಂತೆಂಥಹವರ ಏಳು ಬೀಳು ನೋಡಿದ್ದೇನೆ. ನಾನು ಬಿದ್ದಿದ್ದೇನೆ, ಎದ್ದಿದ್ದೇನೆ, ಜೈಲುವಾಸ ಎಲ್ಲವನ್ನೂ ಅನುಭವಿಸಿದ್ದೇನೆ. ಇನ್ನು ಒಂದು ತಿಂಗಳು ಕಳೆದರೆ ನಾನು ಪಕ್ಷದ ಅಧ್ಯಕ್ಷನಾಗಿ ಆರು ವರ್ಷ ಪೂರ್ಣಗೊಳ್ಳುತ್ತದೆ ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸಿಎಂ ಸಿದ್ದರಾಮಯ್ಯ ಅವರು ಸೇರಿದಂತೆ 139 ಶಾಸಕರೂ ನನ್ನ ಬಲ. ಸಿದ್ದರಾಮಯ್ಯ ಅವರು 100 % ನನ್ನ ಜತೆಗಿದ್ದಾರೆ. ಇದರಲ್ಲಿ ಬೇರೆ ಪ್ರಶ್ನೆಯೇ ಇಲ್ಲ. ನಾವಿಬ್ಬರೂ ಪರಸ್ಪರ ಕೈಜೋಡಿಸಿ, ಜತೆಯಾಗಿ ಕೆಲಸ ಮಾಡಿಕೊಂಡು ಹೋಗುತ್ತಿದ್ದೇವೆ, ಮುಂದೆಯೂ ಕೆಲಸ ಮಾಡುತ್ತೇವೆ. ನಾವು ಜನಕ್ಕೆ ಮಾತು ಕೊಟ್ಟಿದ್ದು, ಆ ಮಾತನ್ನು ಉಳಿಸಿಕೊಳ್ಳಲು ಕೆಲಸ ಮಾಡುತ್ತೇವೆ. ನಾವು ನುಡಿದಂತೆ ನಡೆಯುತ್ತಿದ್ದೇವೆ, ಮುಂದೆಯೂ ನಡೆಯುತ್ತೇವೆ. ಇದರಲ್ಲಿ ಯಾವುದೇ ಗೊಂದಲ ಬೇಡ. ಅವರ ಕಷ್ಟಕಾಲದಲ್ಲಿ ನಾನು ನಿಂತಿದ್ದೇನೆ, ಮುಂದೆಯೂ ನಿಲ್ಲುತ್ತೇನೆ. ಅವರು ಕೂಡ ಕಷ್ಟ ಕಾಲದಲ್ಲಿ ನನ್ನ ಜತೆ ನಿಲ್ಲಲಿದ್ದಾರೆ ಎಂದು ಹೇಳಿದರು.

ನೀವು ನನ್ನ ಟ್ವೀಟ್ ಅನ್ನು ಯಾವ ರೀತಿ ಅರ್ಥ ಮಾಡಿಕೊಳ್ಳುತ್ತೀರಿ ಎಂಬುದು ನಿಮಗೆ ಬಿಟ್ಟ ವಿಚಾರ ಎಂದು ತಿರುಗೇಟು ನೀಡಿದರು. ಯಾರ್ಯಾರೋ ಏನೇನೋ ಮಾತನಾಡುವುದಕ್ಕೆಲ್ಲ ನಾನು ಉತ್ತರ ನೀಡಲು ಆಗುವುದಿಲ್ಲ. ನಮ್ಮ ಪಕ್ಷದಲ್ಲಿ ಹಾಗೂ ನಿಮ್ಮ ಬಿಜೆಪಿ ಪಕ್ಷದಲ್ಲಿ ಸಂಖ್ಯಾಬಲಕ್ಕಿಂತ ಪಕ್ಷವೇ ತೀರ್ಮಾನ ಮಾಡುತ್ತದೆ. ನಿಮ್ಮ ಸರ್ಕಾರದಲ್ಲಿ ಎಷ್ಟೋ ಸಿಎಂ ಬದಲಾದರು, ಸಚಿವ ಸಂಪುಟಗಳೇ ಬದಲಾದವು. ಹೀಗಾಗಿ ನಿಮ್ಮ ಮಾತಿಗೆ ನಾನು ಜಗ್ಗುವುದಿಲ್ಲ, ನೀವು ಸುಮ್ಮನೇ ತಲೆಕೆಡಿಸಿಕೊಳ್ಳಬೇಡಿ ಎಂದು ಟಾಂಗ್ ನೀಡಿದರು.

For Latest News Updates, Join Our Whatsapp Community🚩
RELATED ARTICLES

Most Popular