ಬೆಂಗಳೂರು: ಜುಲೈ 1 ರಿಂದ ಇಲ್ಲಿಯವರೆಗೂ ಒಟ್ಟು 435 ಕಿ.ಮೀ. ಉದ್ದದ ಪಾದಚಾರಿ ಮಾರ್ಗಗಳಲ್ಲಿ ಒಟ್ಟು 9,878 ಒತ್ತುವರಿಗಳನ್ನು ತೆರವುಗೊಳಿಸಲಾಗಿದೆ. ಐದೂ ಪಾಲಿಕೆಗಳ ವ್ಯಾಪ್ತಿಯಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ಮುಂದುವರೆಯಲಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಹೇಳಿದರು.
ಬೆಂಗಳೂರು ನಗರದ ವಿವಿಧ ಕಡೆಗಳಲ್ಲಿ ಪಾದಚಾರಿ ಮಾರ್ಗ ಒತ್ತುವರಿ ಹಾಗೂ ವ್ಯಾಪಾರಿಗಳ ತೆರವು ಕಾರ್ಯಾಚರಣೆ ಕುರಿತು ಸಿಎಂ ಡಿ.ಕೆ.ಶಿವಕುಮಾರ್ ಅವರು ನಗರ ಪ್ರದಕ್ಷಿಣೆ ನಡೆಸಿ ಬೆಂಗಳೂರು ನಗರಾಭಿವೃದ್ದಿ ಸಚಿವರಾದ ಕೃಷ್ಣ ಬೈರೇಗೌಡರಿಂದ ಮಾಹಿತಿ ಪಡೆದರು. ಬಳಿಕ ಮಾತನಾಡಿದ ಅವರು, ಒಟ್ಟು 1,340 ಅಂಗಡಿಗಳಿದ್ದವು, ಸುಮಾರು 1,800 ತಳ್ಳುವ ಗಾಡಿಗಳಿದ್ದವು. ತಳ್ಳುವ ಗಾಡಿಗಳನ್ನು ತೆಗೆದುಕೊಂಡು ಹೋಗಲು ಅವಕಾಶ ನೀಡಲಾಗಿದೆ. ಸುಮಾರು 2,267 ಅಂಗಡಿ ಮುಂಭಾಗದಲ್ಲಿ ತಗಡಿನ ಶೀಟ್ ಗಳನ್ನು ಅಳವಡಿಸಲಾಗಿತ್ತು ಅದನ್ನೂ ಸಹ ತೆಗೆಯಲಾಗಿದೆ. 2,300 ಮೆಟ್ಟಿಲು, ರ್ಯಾಂಪ್ ಗಳು, 2,662 ಪಿಲ್ಲರ್ ಗಳು ಬೋರ್ಡ್ ಗಳು, 2,247 ಶೆಡ್ ಗಳನ್ನು ತೆರವುಗೊಳಿಸಲಾಗಿದೆ. ತೆರವಾದ ತ್ಯಾಜ್ಯವನ್ನು ವಿಲೇವಾರಿ ಮಾಡಿದ್ದು ಜೊತೆಗೆ ಪಾದಚಾರಿ ಮಾರ್ಗಗಳನ್ನು ದುರಸ್ಥಿ ಮಾಡುವ ಕೆಲಸವನ್ನೂ ಮಾಡಿಕೊಂಡು ಬರಲಾಗುತ್ತಿದೆ ಎಂದು ವಿವರಿಸಿದರು.
ಆತಂಕ ಬೇಡ. ಬಡವರು ನಮ್ಮವರೇ. ಖಾಸಗಿ ಅಥವಾ ಸರ್ಕಾರಿ ಜಾಗ ಇರಬಹುದು ಯಾವುದೋ ಜಾಗದಲ್ಲಿ ವ್ಯಾಪಾರ ಮಾಡುವುದಕ್ಕೆ ಆಗುವುದಿಲ್ಲ. ಬೀದಿಬದಿ ವ್ಯಾಪಾರಿಗಳಿಗೂ ನಮ್ಮ ಸರ್ಕಾರ ಅವಕಾಶ ಮಾಡಿಕೊಡುತ್ತದೆ. ಬೀದಿ ಬದಿ ವ್ಯಾಪಾರಿಗಳು ಬದುಕಬೇಕು ಎಂಬ ಆಸೆ ನಮಗೂ ಇದೆ ಎಂದರು.
ನಾವು ಬೀದಿಬದಿ ವ್ಯಾಪಾರಿಗಳಿಗೆ ಗುರುತಿನ ಚೀಟಿ ನೀಡಿದ್ದೆವು. ಅದಕ್ಕೆ ನ್ಯಾಯಲಯ ತಡೆಯಾಜ್ಞೆ ನೀಡಿತ್ತು, ಈಗ ಮತ್ತೆ ಈ ಪ್ರಕ್ರಿಯೆ ಪ್ರಾರಂಭ ಮಾಡುತ್ತೇವೆ. ನಿಮಗಾಗಿಯೇ ಸೂಚಿತ ಜಾಗಗಳನ್ನು ಗುರುತಿಸಲಾಗುವುದು. ಅಲ್ಲಿ ನೀವು ವ್ಯಾಪಾರ ನಡೆಸಬಹುದು ಎಂದರು.
ಟೀಕೆ ಇರುತ್ತದೆ. ಬೆಂಗಳೂರಿನ ಸುಧಾರಣೆಗಾಗಿ ನಾವು ಟೀಕೆಗಳನ್ನು ಸ್ವೀಕರಿಸಲು ಸಿದ್ಧರಿದ್ದೇವೆ. ಇದರ ಹಿಂದೆ ದೊಡ್ಡ ಮಾಫಿಯಾ ಇದೆ. ರೌಡಿಗಳು ವ್ಯಾಪಾರಿಗಳಿಂದ ವಸೂಲಿ ಮಾಡುವ ಕೆಲಸಗಳು ನಡೆದಿವೆ. ಈ ಬಗ್ಗೆ ಮಾಹಿತಿಯೂ ನಮಗಿದೆ. ಪೊಲೀಸ್ ಹಾಗೂ ಜಿಬಿಎ ಅಧಿಕಾರಿಗಳಿಗೆ ನಾವು ಸ್ವಾತಂತ್ರ್ಯ ನೀಡಿದ್ದೇವೆ. ಸ್ವಚ್ಚ ಬೆಂಗಳೂರು ನಮ್ಮ ಗುರಿ. ಇಡೀ ದೇಶ ಬೆಂಗಳೂರನ್ನು ಗಮನಿಸುತ್ತಿದೆ ಎಂದರು.
ಈಗಾಗಲೇ ಮೂರು ವರ್ಷಗಳಲ್ಲಿ ಸುಮಾರು 900 ಕ್ಕೂ ಹೆಚ್ಚು ಪಾದಚಾರಿಗಳ ಸಾವಾಗಿದೆ. ಅದ್ದರಿಂದ ನಾಗರಿಕರು ಅನುಕೂಲಕ್ಕಾಗಿ ನಾವು ಈ ಕೆಲಸ ಮಾಡುತ್ತಿದ್ದೇವೆ. ಇದೇನು ನಮ್ಮ ಸ್ವಂತ ಲಾಭಕ್ಕಾಗಿ ಮಾಡುತ್ತಿರುವ ಕೆಲಸವಲ್ಲ. ಪಾದಚಾರಿ ಮಾರ್ಗ ಇಲ್ಲ ಎಂದರೆ ಜನ ರಸ್ತೆಯಲ್ಲಿ ನಡೆಯುತ್ತಾರೆ. ಆಗ ವಾಹನಗಳ ಓಡಾಟಕ್ಕೂ ತೊಂದರೆ ಉಂಟಾಗಲಿದೆ. ಕಳೆದ ಹದಿನೈದು ದಿನದಿಂದ ಏನೇನು ಕೆಲಸವಾಗಿದೆ ಎಂದು ಅವಲೋಕಿಸಿದ್ದೇನೆ ಎಂದರು.
ಬೀದಿಬದಿ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಮಾಡಿಲ್ಲ ಎಂದು ಆರೋಪ ಮಾಡಲಾಗುತ್ತಿದೆ ಎಂಬ ಬಗ್ಗೆ ಬಹಳ ಸಂತೋಷ, ಆರೋಪ ಮಾಡುವವರೆಲ್ಲಾ ಆರೋಪ ಮಾಡಲಿ. ಅವರಿಗೆ ಬೇರೆ ಜಾಗಗಳನ್ನು ನಾವು ಗುರುತಿಸಿ ನೀಡುತ್ತೇವೆ. ಹೆಚ್ಚು ವಾಹನಗಳು ಓಡಾಡುವ ಕಡೆ ಹಾಗೂ ಯಾರದೋ ಆಸ್ತಿಯ ಮುಂದೆ ವ್ಯಾಪಾರ ಮಾಡಲು ಅವಕಾಶವಿಲ್ಲ. ಯಾವುದೇ ತೊಂದರೆಯಿಲ್ಲದ ಜಾಗವನ್ನು ನೋಡಲಾಗುವುದು. ಯಾರಿಗೂ ಅನಾನುಕೂಲವಾಗದ ಸ್ಥಳಗಳಲ್ಲಿ ವ್ಯಾಪಾರಕ್ಕೆ ಅವಕಾಶ ನೀಡಲಾಗುವುದು. ಬೆಳಗ್ಗೆ ಬರಬೇಕು, ಸಾಯಂಕಾಲ ಹೋಗಬೇಕು ಎಂದು ಹೇಳಿದರು.
“ಜಯನಗರ ಮಾರುಕಟ್ಟೆ ಬಗ್ಗೆ ಸದ್ಯದಲ್ಲೇ ತೀರ್ಮಾನ ಮಾಡಲಾಗುವುದು. ಅರ್ಧ ಕಟ್ಟಡ ನಿರ್ಮಾಣವಾಗಿದೆ. ಇನ್ನರ್ಧ ಕೆಲಸವಾಗಬೇಕು. ಶೀಘ್ರದಲ್ಲೇ ಈ ಕೆಲಸವನ್ನೂ ಮಾಡಲಾಗುವುದು. ಯಾವುದಾದರೂ ಒಂದು ಯೋಜನೆಯ ಅಡಿಯಲ್ಲಿ ಈ ಕೆಲಸ ಮಾಡಲಾಗುವುದು. ನಮ್ಮ ಆಸ್ತಿಗಳನ್ನ ರಕ್ಷಣೆ ಮಾಡಿ ನಾಗರಿಕರಿಗೆ ಗೌರವ ಕೊಡುವಂತಹ ಕೆಲಸಗಳನ್ನು ನಾವು ಮಾಡುತ್ತೇವೆ ಎಂದು ಹೇಳಿದರು.

