ಬೆಂಗಳೂರು: ನೂತನ ಮುಖ್ಯಮಂತ್ರಿಯಾಗಿ ಡಿ.ಕೆ ಶಿವಕುಮಾರ್ ನಾಳೆ ಜೂನ್ 3ರಂದು ಅಧಿಕಾರ ಸ್ವೀಕರಿಸಲಿದ್ದು, ಈ ನಡುವೆ ದೆಹಲಿಯಲ್ಲಿ ಸಚಿವ ಸಂಪುಟ ರಚನೆಯ ಕಸರತ್ತು ಜೋರಾಗಿದೆ.
ನಿರ್ಗಮಿತ ಸಿಎಂ ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ತಮ್ಮ ಬೆಂಬಲಿಗರನ್ನು ಸಂಪುಟಕ್ಕೆ ಸೇರಿಸಲು ಹೈಕಮಾಂಡ್ ಗೆ ಪ್ರತ್ಯೇಕ ಪಟ್ಟಿ ನೀಡಿದ್ದಾರೆ. ಇದರ ಬೆನ್ನಲ್ಲೇ, ಕಾಂಗ್ರೆಸ್ ಹೈಕಮಾಂಡ್ ಸಚಿವ ಸಂಪುಟದಲ್ಲಿ ವಯೋಮಿತಿ ಆಧಾರದ ಸೂತ್ರ ಹೆಣೆದಿದೆ.
ಸಂಪುಟದಲ್ಲಿ ಯುವಕರು ಮತ್ತು ಹಿರಿಯ ನಾಯಕರ ನಡುವೆ ಸಮತೋಲನ ಕಾಯ್ದುಕೊಳ್ಳಲು ಈ ಬಾರಿ ವಯೋಮಿತಿ ಆಧಾರಿತ ಸೂತ್ರ ಎಂಬ ಹೊಸ ಸೂತ್ರವನ್ನು ಜಾರಿಗೆ ತಂದಿದೆ.
ಹೈಕಮಾಂಡ್‌ನ ಹೊಸ ಸೂತ್ರದ ಪ್ರಕಾರ 40 ವರ್ಷದೊಳಗಿನ ಯುವ ಶಾಸಕರಿಗೆ ಸಂಪುಟದಲ್ಲಿ 10 ಸ್ಥಾನಗಳನ್ನು ಮೀಸಲಿಡಲು ನಿರ್ಧರಿಸಲಾಗಿದೆ. ಇನ್ನು 50 ರಿಂದ 70 ವರ್ಷದೊಳಗಿನ ಹಿರಿಯ ಮತ್ತು ಅನುಭವಿ ಶಾಸಕರಿಗೆ 20 ಸ್ಥಾನಗಳನ್ನು ನೀಡಲು ವರಿಷ್ಠರು ಮುಂದಾಗಿದ್ದಾರೆ. ಹೊಸ ಸೂತ್ರದಿಂದಾಗಿ ಸಚಿವ ಸ್ಥಾನ ಗಿಟ್ಟಿಸಿಕೊಳ್ಳಲು ದೆಹಲಿಗೆ ತೆರಳಿದ್ದ ಅನೇಕ ಮಧ್ಯ ವಯಸ್ಕ ಹಾಗೂ ಹಿರಿಯ ಆಕಾಂಕ್ಷಿಗಳಲ್ಲಿ ಆತಂಕ ಶುರುವಾಗಿದೆ.
ಪ್ರಭಾವಿ ನಾಯಕರಾದ ಸತೀಶ್ ಜಾರಕಿಹೊಳಿ, ಎಂ.ಬಿ. ಪಾಟೀಲ್, ಡಾ. ಜಿ. ಪರಮೇಶ್ವರ್ ಅವರಂತಹ ಹಿರಿಯರ ಹೆಸರಿನ ಜೊತೆಗೆ ಯುವ ಶಾಸಕರಾದ ಪ್ರದೀಪ್ ಈಶ್ವರ್, ಯತೀಂದ್ರ ಸಿದ್ದರಾಮಯ್ಯ ಮುಂತಾದವರಿಗೂ ಮಂತ್ರಿಭಾಗ್ಯ ಒಲಿಯುವ ಸಾಧ್ಯತೆ ದಟ್ಟವಾಗಿದೆ. ಒಟ್ಟಾರೆ ಹೊಸ ಸೂತ್ರದ ಮೂಲಕ ಮಂತ್ರಿಮಂಡಲ ರಚನೆಯಾದರೆ ಯಾರಿಗೆಲ್ಲ ಸ್ಥಾನ ಸಿಗಲಿದೆ? ಎಂಬುದನ್ನು ಕಾದುನೋಡಬೇಕಿದೆ.

