ಗುವಾಹಟಿ: ಚುನಾವಣೋತ್ತರ ಸಮೀಕ್ಷೆಗಳು ನಮ್ಮ ಪರವಾಗಿರಲಿ, ಇಲ್ಲದಿರಲಿ ಅದರ ಮೇಲೆ ನನಗೆ ನಂಬಿಕೆ ಇಲ್ಲ. ನನ್ನ ತಂತ್ರಗಾರಿಕೆಯೇ ಬೇರೆ, ಈ ಬಾರಿ ಎಲ್ಲಾ ರಾಜ್ಯಗಳಲ್ಲಿ ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬರಲಿದೆ. ಅಸ್ಸಾಂನಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವ ವಿಶ್ವಾಸವಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.
ಗುವಾಹಟಿಯಲ್ಲಿಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ಅಸ್ಸಾಂ ರಾಜ್ಯದ ಕಾಂಗ್ರೆಸ್ ಪಕ್ಷವು ಒಗ್ಗಟ್ಟಾಗಿದ್ದು, ಆತ್ಮವಿಶ್ವಾಸದಲ್ಲಿದೆ. ನಮ್ಮ ತಂಡದ ಪರಿಶ್ರಮದ ಬಗ್ಗೆ ನನಗೆ ಹೆಮ್ಮೆ ಇದೆ. ಚುನಾವಣೆಯನ್ನು ಬಹಳ ಚೆನ್ನಾಗಿ ನಡೆಸಿದ್ದು, ಸಕಾರಾತ್ಮಕ ಫಲಿತಾಂಶದ ನಿರೀಕ್ಷೆ ಇದೆ. ಮಾಧ್ಯಮಗಳ ವರದಿ ಏನೇ ಇದ್ದರೂ ನನಗೆ ಪಕ್ಷ ಅಧಿಕಾರ ಬರುವ ವಿಶ್ವಾಸವಿದೆ. ಮಾಧ್ಯಮಗಳ ವರದಿ ನೋಡಿ ಅಸ್ಸಾಂ ಮತದಾರರಲ್ಲಿ ಆತಂಕ ಮೂಡಿದೆ. ಅಸ್ಸಾಂನಲ್ಲಿ ಬಿಜೆಪಿ ಜೊತೆ ಗುರುತಿಸಿಕೊಂಡವರಿಗೆ ಮಾತ್ರ ಉಚಿತ ಯೋಜನೆಗಳನ್ನು ನೀಡಲಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಯಾರು ಯಾರಿಗೆ ಮತ ಹಾಕಿದ್ದಾರೆ ಎಂದು ಹೇಗೆ ಹೇಳಲು ಸಾಧ್ಯ? ನಮ್ಮ ಆಂತರಿಕ ಸಮೀಕ್ಷೆ ಉತ್ತಮವಾಗಿದ್ದು, ಯಾರ ನೆರವು ಇಲ್ಲದೇ ನಾವು ಅಧಿಕಾರ ಹಿಡಿಯುವ ವಿಶ್ವಾಸ ನಮ್ಮ ಅಭ್ಯರ್ಥಿಗಳಲ್ಲಿ ಇದೆ ಎಂದು ತಿಳಿಸಿದರು.
ಇದೇ ವೇಳೆ ನಮಗೆ ಬಂದಿರುವ ಮಾಹಿತಿ ಪ್ರಕಾರ ನಮ್ಮ ಅಭ್ಯರ್ಥಿಗಳನ್ನು ಬಿಜೆಪಿ ಸಂಪರ್ಕಿಸಿದೆ. ಇದು ಬಿಜೆಪಿಯವರು ಆತಂಕಕ್ಕೆ ಒಳಗಾಗಿರುವುದಕ್ಕೆ ಸಾಕ್ಷಿಯಾಗಿದೆ. ಬಿಜೆಪಿ ಗೆಲ್ಲುವ ವಿಶ್ವಾಸ ಕಳೆದುಕೊಂಡಿದೆ. ಆದರೆ ನಾವೆಲ್ಲರೂ ಒಟ್ಟಾಗಿದ್ದೇವೆ. ಹೀಗಾಗಿ ನಾವು ಇಲ್ಲಿ ಸೇರಿ ಮತದಾನದ ದಿನವನ್ನು ನಾವು ಹೇಗೆ ಎದುರುಸಬೇಕು ಎಂದು ಮಾರ್ಗದರ್ಶನ ನೀಡಲಾಗಿದೆ. ಬಿಜೆಪಿ ಆಡಳಿತ ಯಂತ್ರ ದುರ್ಬಳಕೆಗೆ ಮುಂದಾಗಲಿದ್ದು, ನಾವು ಯಾವ ರೀತಿ ಜಾಗರೂಕರಾಗಿರಬೇಕು ಎಂದು ಮಾರ್ಗದರ್ಶನ ನೀಡಿದ್ದೇವೆ ಎಂದರು.
ಇದಕ್ಕಾಗಿ ದೆಹಲಿ, ಅಸ್ಸಾಂ ಹಾಗೂ ಗುವಾಹಟಿಯಲ್ಲಿ ಪ್ರತ್ಯೇಕ ಕಾನೂನು ಘಟಕ ಸ್ಥಾಪಿಸಲಾಗಿದೆ. ನಮ್ಮ ಪ್ರಧಾನ ಕಾರ್ಯದರ್ಶಿಗಳು ಮತದಾನದ ದಿನ ಇಲ್ಲಿಗೆ ಆಗಮಿಸುತ್ತಾರೆ. ನಾವು ನಮ್ಮ ಅಭ್ಯರ್ಥಿಗಳನ್ನು ರಕ್ಷಣೆ ಮಾಡಿಕೊಳ್ಳುತ್ತೇವೆ. ಬಿಜೆಪಿಗೆ ಗೆಲ್ಲುವ ವಿಶ್ವಾಸ ಇದ್ದಿದ್ದರೆ ನಮ್ಮ ಅಭ್ಯರ್ಥಿಗಳು, ಶಾಸಕರನ್ನು ಸಂಪರ್ಕ ಮಾಡುತ್ತಿರಲಿಲ್ಲ ಎಂದರು.
ಚುನಾವಣೋತ್ತರ ಸಮೀಕ್ಷೆಗಳಲ್ಲಿ ಬಳಸುವ ಮಾದರಿ ಪ್ರಮಾಣ ಬಹಳ ಸಣ್ಣದಾಗಿರುತ್ತವೆ. ಹೀಗಾಗಿ ನಮ್ಮ ಲೆಕ್ಕಾಚಾರ ಬೇರೆ ಇದೆ. ನಾನು ಯಾವುದೇ ರಾಜ್ಯಗಳ ಚುನಾವಣೋತ್ತರ ಸಮೀಕ್ಷೆ ನಂಬುವುದಿಲ್ಲ. ನಾನು ಇಲ್ಲಿಗೆ ಬಂದಿರುವುದೇ ನಮ್ಮ ಶಾಸಕರನ್ನು ರಕ್ಷಿಸಿ, ಮಾರ್ಗದರ್ಶನ ನೀಡಿ, ಶಕ್ತಿ ತುಂಬಲು ಎಂದು ತಿಳಿಸಿದರು.
ನಮ್ಮ ಕಾರ್ಯಕರ್ತರು ಬಹಳ ವಿಭಿನ್ನ. ಹೀಗಾಗಿ ಅಸ್ಸಾಂನಲ್ಲಿ ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬರಲಿದೆ. ನಮ್ಮ ನಾಯಕರ ಮೇಲೆ ನಮಗೆ ನಂಬಿಕೆ ಇದೆ. ಅವರು ಸಾಕಷ್ಟು ಪರಿಶ್ರಮ ಹಾಕಿದ್ದಾರೆ. ಮತದಾರರ ಮೇಲೆ ವಿಶ್ವಾಸವಿದೆ. ಅವರಿಗೆ ಬದಲಾವಣೆ ಬೇಕಾಗಿದೆ. ಆ ಬದಲಾವಣೆ ಸಿಗಲಿದೆ ಎಂಬ ಆತ್ಮವಿಶ್ವಾಸವಿದೆ ಎಂದು ತಿಳಿಸಿದರು.
ದೇಶದಾದ್ಯಂತ ಇಂಡಿಯಾ ಮೈತ್ರಿಕೂಟದ ಸರ್ಕಾರ ಅಧಿಕಾರಕ್ಕೆ ಬರಲಿದೆ. ಪ್ರತಿ ರಾಜ್ಯದಲ್ಲೂ ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬರಲಿದೆ ಎಂದರು.

